ಬಳ್ಳಾರಿ: ರಾಜ್ಯದಲ್ಲಿಯೆ ಸೋನಾ ಮಸೂರಿ ಅಕ್ಕಿಯನ್ನೇ 34 ರೂಪಾಯಿಯಂತೆ ಖರೀದಿಸುವ ಅವಕಾಶ ಇದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿಗುವ ಸೋನಾ ಮಸೂರಿ ಅಕ್ಕಿ 2100 ರೂ.ಗೆ ಕ್ವಿಂಟಾಲ್ ಸಿಗಲಿದೆ. ಇದನ್ನು ಗಿರಣಿ ಮಾಡಿಸಿದರೆ 65 ಕೆಜಿ ಅಕ್ಕಿ ಬರಲಿದೆ. ತೌಡು, ನುಚ್ಚು ಅಕ್ಕಿ ಬಿಟ್ಟುಕೊಟ್ಟರು ಮಿಲ್‌ನವರು ಫ್ರೀ ಆಗಿ ಗಿರಣಿ ಮಾಡಿಕೊಡುತ್ತಾರೆ. ಅಲ್ಲಿಗೆ 33 ರೂ.ಗೆ ಇಲ್ಲೇ ಸೋನಾ ಮಸೂರಿ ಅಕ್ಕಿ ಖರೀದಿಸುವ ಅವಕಾಶ ಇದೆ ಎಂದರು.
ರಾಜ್ಯದಲ್ಲಿಯೇ ಭತ್ತ ಖರೀದಿ ಮಾಡುವುದರಿಂದ ರೈತರಿಗೂ ಅನುಕೂಲ ಆಗಲಿದೆ. ಮಿಲ್‌ನವರೆ 33.5 ರೂ.ಗೆ ಅಕ್ಕಿ ಖರೀದಿಸಬಹುದು. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಅವರು ತಿಳಿಸಿದರು. ಬೇರೆ ರಾಜ್ಯದಲ್ಲಿ ಖರೀದಿ ಮಾಡಿದರೆ ಸಾಗಣೆ ವೆಚ್ಚದ ಹೊರೆ ಬೀಳಲಿದೆ. ಮುಖ್ಯಮಂತ್ರಿಗಳು ಈ ಕುರಿತು ಯೋಚಿಸಬೇಕು ಎಂದು ಅವರು ತಿಳಿಸಿದರು