ಚಕ್ಕಿ, ತತ್ತಿ, ಬಾಳೆ ಹಣ್ಣು ಕೊಡುವುದು ಶಿಕ್ಷಕರ ಕೆಲಸವಲ್ಲ : ಸರ್ಕಾರಕ್ಕೆ ಸಭಾಪತಿ ಹೊರಟ್ಟಿ ಚಾಟಿ
ಹುಬ್ಬಳ್ಳಿ : ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರಿಗೆ ಪಠ್ಯೇತರ ಕೆಲಸದ ಹೊರೆ ಹೆಚ್ಷಾಗಿದೆ. ರಾಜ್ಯ ಸರ್ಕಾರ ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜನೆ, ಬೇರೆ ವ್ಯವಸ್ಥೆ ಮಾಡಬೇಕು. ಚಕ್ಕಿ, ಬಾಳೆಹಣ್ಣು ತತ್ತಿ ಕೊಡುವುದು ಶಿಕ್ಷಕರ ಕೆಲಸವಲ್ಲ. ಇದನ್ನೇ ಶಿಕ್ಷಕರು ಮಾಡಿದರೆ ಗುಣಮಟ್ಟದ ಶಿಕ್ಷಣ ಹೇಗೆ ನಿರೀಕ್ಷಿಸುತ್ತೀರಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದರು.
ಇಲ್ಲಿನ ಉಣಕಲ್ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ. ಮಾತನಾಡಿದ್ದೇನೆ. ಸಾಧ್ಯವಾದರೆ ಮುಖ್ಯಮಂತ್ರಿಯವರಿಗೂ ಮಾತನಾಡುತ್ತೇನೆ.ಆದಷ್ಟು ಬೇಗ ಈ ವ್ಯವಸ್ಥೆ ಆಗಬೇಕು ಎಂದು ಹೇಳಿದರು.
ಮೊನ್ಮೆ ಒಂದು ಶಾಲೆಗೆ ಕಳಿಸಿದ ತತ್ತಿ ( ಮೊಟ್ಟೆ) ಯಲ್ಲಿ 11. ಒಡೆದಿದ್ದವಂತೆ. ಅವುಗಳನ್ನು ಕಸದ ಬುಟ್ಟಿಗೆ ಹಾಕಿ ಬೇರೆ 11 ತತ್ತಿಗಳನ್ನು ಹೊರಗಡೆ ತರಿಸಿ ಶಿಕ್ಷಕರು ಮಕ್ಕಳಿಗೆ ಕೊಟ್ಟಿದ್ದಾರೆ. ಹನ್ನೊಂದು ತತ್ತಿ ಕೆಟ್ಟಿದ್ದು ಯಾಕೆ ತಿಳಿಸಲಿಲ್ಲ, ನೀವೇಕೆ ಖರೀದಿಸಿ ಮಕ್ಕಳಿಗೆ ಕೊಟ್ಟಿದ್ದೀರಿ? ಎಂದು ಶಿಕ್ಷಣಾಧಿಕಾರಿ ಆ ಶಿಕ್ಷಕರಿಗೆ ನೋಟಿಸ್ ಕೊಟ್ಟಿದ್ದಾರಂತೆ. ಇಂತಹ ಶಿಕ್ಷಣಾಧಿಕಾರಿಗಳು ಇದ್ದಾರೆ. ಬಹಳಷ್ಟು ಶಿಕ್ಷಣಾಧಿಕಾರಿ, ಹಿರಿಯ ಅಧಿಕಾರಿಗಳಿಗೆ ಶಿಕ್ಷಣ ವ್ಯವಸ್ಥೆ, ಶಾಲಾ ಸ್ಥಿತಿಗತಿ, ಶಿಕ್ಷಕರ ಮತ್ತು ಮಕ್ಕಳ ಸಮಸ್ಯೆಯ ಅರಿವು ಇರುವುದಿಲ್ಲ. ಬರೀ ಕಚೇರಿ, ಐಬಿಯಲ್ಲಿ ಕುಳಿತು ಸಮಯ ಕಳೆಯುತ್ತಾರೆ ಎಂದು ಸಭಾಪತಿ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.
ಶಾಲಾ ಕೊಠಡಿಗಳು ಬೀಳುವ ಸ್ಥಿತಿ, ಶಿಥಿಲಗೊಂಡಿರುಚ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಿ ಶಿಲ್ಷಣಾಧಿಕಾರಿಗಳದ್ದೇ ಕೆಲಸ. ಶಾಲೆಯ ಮೂಲಸೌಕರ್ಯ ಸ್ಥಿತಿಗತಿ ನಿಗಾ ವಹಿಸುವುದು ಅವರದ್ದೇ ಕೆಲಸ.ಅದನ್ನು ಸರಿಯಾಗಿ ನಿರ್ವಹಿಸದೇ, ಫಾಲೋ ಅಪ್ ಮಾಡದೇ ಇರುವುದರಿಂದ ಶಾಲೆಗಳ ಕೊಠಡಿ ಬೀಳುತ್ತಿವೆ. ಶಿಕ್ಷಣ ಸಚಿವರಿಗೂ ಈ ವಿಷಯ ತಿಳಿಸಿದ್ದೇನೆ. ಸರಿಪಡಿಸುವುದಾಗಿ ಹೇಳಿದ್ದಾರೆ. ಮುಂದಿನ ಸದನದಲ್ಲಿ ಇಂತಹ ವಿಷಯಗಳ ಬಗ್ಗೆ ಶಾಸಕರು ಚರ್ಚೆಗ ಅವಕಾಶ ಕೋರಿದರೆ ಅವಕಾಶ ಮಾಡಿಕೊಡುತ್ತೇನೆ ಎಂದು ಹೇಳಿದರು.
ಧಾರವಾಡ ಜಿಲ್ಲಾಧಿಕಾರಿ ಚಿಂತನೆ ಮಾದರಿಯಾದುದು: ಶಾಲಾ ಮಕ್ಕಳು ಪರೀಕ್ಷೆಯಲ್ಲಿ ಫಲಿತಾಂಶ ಕುಂಠಿತವಾಗಲು ಶಿಕ್ಷಕರು ಪಠ್ಯೇತರ ಕೆಲಸಕ್ಕೆ ಹೆಚ್ಚು ಸಮಯ ವಿನಿಯೋಗಿಸುತ್ತಿರುವುದರಿಂದಲೇ ಎಂಬ ವಾಸ್ತವಿಕ ಸಮಸ್ಯೆ ಅರ್ಥ ಮಾಡಿಕೊಂಡ ಧಾರವಾಡ ಜಿಲ್ಲಾಧಿಕಾರಿ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಪಠ್ಯೇತರ ಕೆಲಸಕ್ಕೆ ಪ್ರತ್ಯೇಕ ಸಿಬ್ಬಂದಿ ಅಥವಾ ಬದಲಿ ವ್ಯವಸ್ಥೆ ಮಾಡುವ ಬಗ್ಗೆ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಅವರ ಈ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು. ಇದು ಮಾದರಿಯಾದ ಕೆಲಸ.ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯಿಸಿ ಆದೇಶಿಸಬೇಕು ಎಂದು ಹೇಳಿದರು.
ಶಿಕ್ಷಣಾಧಿಕಾರಿಗಳೂ ಪಿಡಬ್ಲ್ಯೂಡಿ, ರೆವೆನ್ಯೂ ಅಧಿಕಾರಿಗಳಂತಾಗಿದ್ದಾರೆ !: ಶಿಕ್ಷಣಾಧಿಕಾರಿಗಳು ಪ್ರಜ್ಞಾವಂತಿಕೆಯಿಂದ ಕೆಲಸ ಮಾಡಬೇಕು. ಆದರೆ, ಈಗ ಅಂಥವರಿಲ್ಲ. ಇರುವವರಲ್ಲಿ ಅನೇಕರು ಪಿಡಬ್ಲ್ಯೂಡಿ, ರೆವಿನ್ಯೂ ಅಧಿಕಾರಿಗಳಂತೆ ಆಗಿದ್ದಾರೆ.ಹೀಗಾದರೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಹೇಗೆ ಸಾಧ್ಯ? ಫಲಿತಾಂಶ ಕುಂಠಿತವಾದರೆ ಶಿಕ್ಷಕರು, ಶಾಲಾ ಆಡಳಿತ ಮಂಡಳಿಗಳನ್ನು ಹೊಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.