ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಸದ ಡಿ.ಕೆ.ಸುರೇಶ್ ಅವರನ್ನು ಕೂರಿಸುವ ಗಂಭೀರ ಪ್ರಯತ್ನ ನಡೆದಿದೆ. ಈ ಚಿಂತನೆ ಕಾರ್ಯಗತಕ್ಕೆ ಸ್ವತಃ ಸೋದರ ಮತ್ತು ಹಾಲಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೇ ಸಿದ್ಧತೆ ಶುರು ಮಾಡಿದ್ದಾರೆ. ಇಂತಹ ಪ್ರಯತ್ನ ನಡೆದಿರುವ ಬೆನ್ನಲ್ಲೇ ಈ ಪ್ರಸ್ತಾಪಕ್ಕೆ ಸಿಎಂ ಬಣದ ಅನೇಕ ಮುಖಂಡರು ಅಪಸ್ವರ ಎತ್ತಿದ್ದಾರೆ. ಇದರ ಮುಂದುವರಿದ ಭಾಗವೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎನ್ನುವ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆ ಎಂದು ಕೆಪಿಸಿಸಿ ಪಡಸಾಲೆಯಲ್ಲಿ ಚರ್ಚೆ ಜೋರಾಗಿದೆ.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗ ಸಂಕಷ್ಟದಲ್ಲಿದ್ದ ಪಕ್ಷವನ್ನು ಎಲ್ಲ ವಿಭಾಗಗಳಲ್ಲಿಯೂ ಸಮರ್ಥವಾಗಿ ಸಂಘಟಿಸಿ ಅಧಿಕಾರಕ್ಕೂ ತರಲು ಪ್ರಮುಖ ಕಾರಣರು ಎನ್ನುವುದನ್ನು ಪಕ್ಷದ ಯಾರೊಬ್ಬರೂ ಅಲ್ಲಗಳೆಯುತ್ತಿಲ್ಲ. ಆದರೆ ಭವಿಷ್ಯದಲ್ಲಿ ಪಕ್ಷ ತಮ್ಮ ಹಿಡಿತದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೋದರನಿಗೆ ಪಟ್ಟ ಕಟ್ಟುವ ಪ್ರಯತ್ನ ಸರಿಯಲ್ಲ ಎನ್ನುವುದು ಅನೇಕ ಹಿರಿಯ ಕಾಂಗ್ರೆಸ್ಸಿಗರ ಅಭಿಪ್ರಾಯವಾಗಿದೆ. ಪಕ್ಷದಲ್ಲಿ ದುಡಿದಿರುವ ಸಾಕಷ್ಟು ಮಂದಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಸಮರ್ಥರಿದ್ದಾರೆ. ಹಾಗಾಗಿ ಹೈಕಮಾಂಡ್ ಕೂಡಾ ಇಂತಹ ಪ್ರಸ್ತಾವನೆಯನ್ನು ಒಪ್ಪುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಲೋಕಸಭಾ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರೇ ಕಾರ್ಯನಿರ್ವಹಿಸಲಿದ್ದಾರೆ. ಆ ಬಳಿಕ ನೋಡೋಣ ಎಂದಿದ್ದ ವರಿಷ್ಠರ ಮಾತಿನ ಜೊತೆಗೆ ಇತ್ತೀಚೆಗೆ ಖುದ್ದು ಡಿಸಿಎಂ ಶಿವಕುಮಾರ್ ಕೂಡಾ `ಪಕ್ಷಾಧ್ಯಕ್ಷನಾಗಿ ನಾನು ಇನ್ನೆಷ್ಟು ಸಮಯ ಇರುತ್ತೇನೋ ಗೊತ್ತಿಲ್ಲ ಭದ್ರಬುವಾದಿ ಹಾಕಬೇಕಿದೆ’ ಎಂದಿದ್ದರು. ಈ ಹೇಳಿಕೆ ಪಕ್ಷದ ಆಂತರಿಕವಲಯದಲ್ಲಷ್ಟೇ ಅಲ್ಲ ಸಾರ್ವಜನಿಕವಾಗಿಯೂ ಡಿಕೆಶಿ ಪಕ್ಷದ ಸಾರಥ್ಯ ತ್ಯಜಿಸಲು ಮಾನಸಿಕವಾಗಿ ಸಜ್ಜಾಗಿದ್ದಾರೆಂದೇ ವಿಶ್ಲೇಷಸಲಾಗುತ್ತಿದೆ. ಹೀಗಾದಲ್ಲಿ ಆ ಸ್ಥಾನಕ್ಕೆ ಯಾರು ಎಂಬ ಸಹಜ ಪ್ರಶ್ನೆಗೆ ಅನೇಕ ಮಂದಿ ಆಸಕ್ತಿ ವಹಿಸಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಭವಿಷ್ಯದ ರಾಜಕೀಯ ದೃಷ್ಟಿಯಿಂದ ಪಕ್ಷಾಧ್ಯಕ್ಷ ಸ್ಥಾನ ತಮ್ಮ ಅತ್ಯಾಪ್ತರ ಹಿಡಿತದಲ್ಲಿದ್ದರೆ ನೀತಿ ನಿರ್ಧಾರಗಳಿಗೆ ಸಲೀಸು ಎನ್ನುವ ದೂರದೃಷ್ಟಿಯ ಚಿಂತನೆ ಇದಾಗಿದೆ ಎಂದು ಹೇಳಲಾಗಿದೆ.
ಆದರೆ ಡಿಕೆಶಿ ಅವರು ಎಲ್ಲಿಯೂ ಇದನ್ನು ಬಹಿರಂಗವಾಗಿ ಪ್ರಸ್ತಾಪಿಸುತ್ತಿಲ್ಲ. ಬದಲಿಗೆ ದೆಹಲಿಯ ವರಿಷ್ಠರಿಗೆ ವಸ್ತುಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುವ ಎಲ್ಲ ಪ್ರಯತ್ನಕ್ಕೆ ಸಜ್ಜಾಗಿಯೇ ತೆರಳಿದ್ದಾರೆಂದು ಆಪ್ತ ಮೂಲಗಳು ತಿಳಿಸಿವೆ. ಮತ್ತೆ ಸಂಸತ್‌ಗೆ ಆಯ್ಕೆಯಾಗುತ್ತಾರೋ ಇಲ್ಲವೋ ಅದು ಚರ್ಚೆಯ ವಸ್ತುವಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಶಾಶ್ವತವಾಗಿ ಮತ್ತು ಸಂಘಟನಾತ್ಮಕವಾಗಿ ಬೇರೂರುವ ನಿಟ್ಟಿನಲ್ಲಿ ಕೆಲವು ಕಾರ್ಯಯೋಜನೆಗಳು ಹಾಕಿಕೊಳ್ಳಲಾಗುತ್ತಿದೆ. ಇದು ಅದರ ಪ್ರಮುಖ ಭಾಗ ಎಂದು ಡಿಕೆಶಿ ಹೈಕಮಾಂಡ್ ಮುಂದೆ ಡಿಕೆಸು ಅವರನ್ನು ಪಕ್ಷದ ಸಾರಥ್ಯಕ್ಕೆ ಪರಿಗಣಿಸಲು ಸಮರ್ಥನೆ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ಖಾತರಿಪಡಿಸಿವೆ.
ಭವಿಷ್ಯದಲ್ಲಿ ನಾಯಕತ್ವ ಹಸ್ತಾಂತರದ ವಿಷಯ ಕಾರ್ಯಗತವಾದರೆ ಸರ್ಕಾರ ಮತ್ತು ಪಕ್ಷ ಎರಡೂ ಕೈಸೇರಲಿದ್ದು ಇದು ಏಕಪಕ್ಷೀಯ ತೀರ್ಮಾನಗಳಿಗೆ ಅವಕಾಶ ಮಾಡಿಕೊಡಬಹುದು ಎನ್ನುವ ಆತಂಕ ಸಿಎಂ ಸಿದ್ದರಾಮಯ್ಯ ಅವರ ಆಪ್ತರ ಬಣದ ಆತಂಕವಾಗಿದೆ. ಹಾಗಾಗಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮವರನ್ನೇ ಕೂರಿಸುವ ಸಂಬಂಧ ರಹಸ್ಯ ಕಾರ್ಯತಂತ್ರವೂ ನಡೆದಿದೆ ಎನ್ನಲಾಗಿದೆ. ಉತ್ತರಕರ್ನಾಟಕ ಹಾಗೂ ಲಿಂಗಾಯತ ಸಮುದಾಯಕ್ಕೆ ಆದ್ಯತೆ ಸಿಗಲಿ ಎನ್ನುವುದಾದರೆ ಸಚಿವ ಎಂ.ಬಿ.ಪಾಟೀಲ್ ಪಕ್ಷದ ಸಾರಥ್ಯಕ್ಕೆ ಸಮರ್ಥರಿದ್ದಾರೆ. ಇನ್ನೂ ಈಶ್ವರಖಂಡ್ರೆ ಅಥವಾ ಎಸ್.ಆರ್.ಪಾಟೀಲ್
ಏಕಾಗಬಾರದು? ಹಿಂದುಳಿದ ವರ್ಗದ ಕೆ.ಎನ್.ರಾಜಣ್ಣ ಇಲ್ಲವೇ ಸತೀಶ್ ಜಾರಕಿಹೊಳಿ ಅವರನ್ನಾದರೂ ಪರಿಗಣಿಸಬಹುದು ಎನ್ನುವ ಅಂಶವನ್ನು ಸಿಎಂ ವರಿಷ್ಠರ ಮುಂದಿಡಲಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ರಾಜ್ಯದ ರಾಜಕೀಯ ಪರಿಸ್ಥಿತಿ ಮತ್ತು ನಾಯಕತ್ವದ ಸಂಪೂರ್ಣ ಮಾಹಿತಿ ಇರುವ ಎಐಸಿಸಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುವರು ಎನ್ನುವುದು ಮಹತ್ವ ಪಡೆದುಕೊಳ್ಳಲಿದೆ. ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಶಿಫಾರಸ್ಸು ಏನಿರಲಿದೆ? ಎನ್ನುವುದೂ ನಿರ್ಣಾಯಕವಾಗಲಿದ್ದು ಅಂತಿಮವಾಗಿ ರಾಹುಲ್‌ಗಾಂಧಿ ಹಾಗೂ ಸೋನಿಯಾಗಾಂಧಿ ಯಾರಿಗೆ ಮಣೆ ಹಾಕುವರೋ ಅವರಿಗೆ ಪಕ್ಷದ ಸಾರಥ್ಯ ಒಲಿಯಲಿದೆ. ಹಾಗಾಗಿ ವಿಳಂಬವಾದರೂ ಹೊರಬೀಳುವ ನಿರ್ಧಾರಗಳು ಕುತೂಹಲ ಕೆರಳಿಸಿವೆ.