ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರ ನಮ್ಮ ವರಿಷ್ಠರಿಗೆ ಬಿಟ್ಟದ್ದು

0
23
ಆರ್‌ಎಸ್ಎಸ್

ಹುಬ್ಬಳ್ಳಿ : ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರ ನಮ್ಮ ಪಕ್ಷದ ರಾಷ್ಟ್ರೀಯ ವರಿಷ್ಠರು ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರಿಗೆ ಬಿಟ್ಟಿದ್ದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರಕ್ಕೆ ಸಂಬಂಧಪಟ್ಟ ಮಾತುಕತೆಗಳು ವರಿಷ್ಠರ ಮಟ್ಟದಲ್ಲಿ ನಡೆಯುತ್ತದೆ. ಈಗಾಗಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ನೋಡೋಣ ಎಂದು ಹೇಳಿದರು.ಕೆಲ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಕೂಟ ರಚನೆ ಮಾಡಿಕೊಂಡು ಸಭೆಗಳನ್ನು ನಡೆಸುತ್ತಿವೆ. ಇವುಗಳ ಉದ್ದೇಶ ದೇಶ, ಜನರ ಹಿತಾಸಕ್ತಿ, ಅಭಿವೃದ್ಧಿಗೆ ಅಲ್ಲ; ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಡೆಯುವುದಾಗಿದೆ. ಪ್ರಧಾನಿ ಮೋದಿ ಅವರು ತಮ್ಮ ಜನ ಹಿತ, ದೇಶದ ಪ್ರಗತಿಗೆ ಕೈಗೊಂಡ ಕ್ರಮಗಳಿಗೆ ದೇಶದ ಜನರು ಮೆಚ್ಚಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿ ನಾಯಕರು ಎಂಬ ಮನ್ನಣೆ ದೊರೆತಿದೆ. ಹೀಗಾಗಿ, ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಚನೆ ಪ್ರಯತ್ನ ಸಫಲವಾಗುವುದಿಲ್ಲ ಎಂದರು.

ಗೃಹ ಲಕ್ಷ್ಮೀ ಯೋಜನೆ ಎಂಬುದು ಗೊಂದಲದ ಗೂಡಾಗಿದೆ. ಯಾವುದೂ ಸ್ಪಷ್ಟತೆ ಇಲ್ಲ. ಸರ್ಕಾರಕ್ಕೆ ಈ ಯೋಜನೆ ಬಲು ಭಾರವಾಗಲಿದ್ದು, ಅದಕ್ಕಾಗಿ ನೂರೆಂಟು ಕಾರಣಗಳನ್ನು ನೀಡಿ ಎಲ್ಲ ಗೃಹ ಲಕ್ಷ್ಮೀಯರಿಗೆ ತಲುಪದಂತೆ ಮಾಡಲಾಗುತ್ತಿದೆ. ರಾಜ್ಯದ ಮಹಿಳೆಯರಿಗೆ ಇದರಿಂದ ಭ್ರಮನಿರಸನ ಆಗಲಿದೆ ಎಂದು ಹೇಳಿದರು.
ಇನ್ನೆರಡು ದಿನದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಸಾಧ್ಯತೆ ಇದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದರು.

Previous articleಚಿತ್ರದುರ್ಗ: ನವಜಾತ ಶಿಶುವಿನ ಮೇಲೆ ಕೋತಿ ದಾಳಿ
Next articleಬಿಜೆಪಿಯೊಂದಿಗೆ ಜೆಡಿಎಸ್‌ ಮೈತ್ರಿ ಬದಲು ವಿಲೀನ ಮಾಡಿಕೊಳ್ಳಲಿ