ಹೃದಯಾಘಾತ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ. ಅಮಿತ್ ಸತ್ತೂರ್ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ಹುಬ್ಬಳ್ಳಿ ಕಚೇರಿಯಲ್ಲಿ ಏರ್ಪಡಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು.
ಹುಬ್ಬಳ್ಳಿ: “ಕಾಲೇಜು ಪ್ರವೇಶ ಪಡೆಯುವ ಹಂತದಲ್ಲೇ ಪ್ರತಿಯೊಬ್ಬ ಹದಿಹರೆಯದವರಿಗೂ ಹೃದಯ ಪರೀಕ್ಷಾ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಬೇಕು. ಈ ಪರೀಕ್ಷೆಯು ಮಕ್ಕಳ ದೇಹದಲ್ಲಿನ ಸಕ್ಕರೆ ಪ್ರಮಾಣ, ಕೊಬ್ಬಿನ ಪ್ರಮಾಣ ಮತ್ತು ರಕ್ತದೊತ್ತಡ ಪ್ರಮಾಣಗಳನ್ನು (ಶುಗರ್, ಕೊಲೆಸ್ಟರಾಲ್ ಮತ್ತು ಬಿಪಿ) ಒಳಗೊಂಡಿರಬೇಕು” ಎಂದು ಹೃದ್ರೋಗ ತಜ್ಞ ಡಾ. ಅಮಿತ್ ಸತ್ತೂರ್ ಸರ್ಕಾರಕ್ಕೆ ಸಲಹೆ ನೀಡಿದರು.
ಕರ್ನಾಟಕದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ‘ಸಂಯುಕ್ತ ಕರ್ನಾಟಕ’ ಹುಬ್ಬಳ್ಳಿ ಕಚೇರಿಯಲ್ಲಿ ಏರ್ಪಡಿಸಿದ್ದ ನೇರ ಫೋನ್ ಇನ್ ‘ಹೃದಯ’ದ ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಜನರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು.
“ಹದಿನೆಂಟು ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಹೃದಯಕ್ಕೆ ಸಂಬಂಧಿಸಿದ ಈ ಮೂರೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದರಿಂದ ಮುಂದಿನ ಅಪಾಯಗಳನ್ನು ತಪ್ಪಿಸಬಹುದು. ಹದಿಹರೆಯದವರಿಗೆ ಹೃದಯ ತಪಾಸಣೆ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವುದರ ಜೊತೆಗೆ, ಕಡ್ಡಾಯಗೊಳಿಸುವುದೊಂದೇ ಉಳಿದಿರುವ ದಾರಿ” ಎಂದು ಅಭಿಪ್ರಾಯಪಟ್ಟರು.
“ಹೆಚ್ಚುತ್ತಿರುವ ಹೃದಯಾಘಾತಗಳಿಗೆ ದೇಹದಲ್ಲಿನ ಕೊಬ್ಬು, ಸಕ್ಕರೆ ಮತ್ತು ರಕ್ತದೊತ್ತಡ ಈ ಸದ್ದಿಲ್ಲದ ಅಂಶಗಳು (ಸೈಲೆಂಟ್ ಫ್ಯಾಕ್ರ‍್ಸ್) ಪ್ರಮುಖ ಕಾರಣವಾಗುತ್ತವೆ. ಇವು ನಮ್ಮ ದೇಹದಲ್ಲಿ ಇವೆ ಎಂಬುದನ್ನು ತೋರಿಸುವ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ 18ನೇ ವಯಸ್ಸಿಗೆ ಕಾಲಿಡುತ್ತಿದ್ದಂತೇ ಇವುಗಳ ಬಗ್ಗೆ ಹೃದ್ರೋಗ ತಜ್ಞರಿಂದ ತಪಾಸಣೆ ಮಾಡಿಸಿಕೊಳ್ಳಬೇಕು” ಎಂದರು.
“ಸಮಸ್ಯೆ ಇದ್ದರೆ ಹೃದ್ರೋಗ ತಜ್ಞರು ಹೇಳುವ ಔಷಧಿಗಳನ್ನು ಸೇವಿಸಿ, ಅವರು ಹೇಳುವ ಜೀವನ ಕ್ರಮವನ್ನು ತಪ್ಪದೇ ಪಾಲಿಸಬೇಕು. ಯುವ ಜನತೆಗೆ ಅಥವಾ ಹದಿಹರೆಯದವರಿಗೆ ಏಕೆ ಇವುಗಳ ಬಗ್ಗೆ ಪರೀಕ್ಷೆ ಮಾಡಬೇಕು? 40 ವರ್ಷದ ನಂತರ ಹೃದ್ರೋಗ ತಪಾಸಣೆ ಮಾಡಿದರೆ ಸಾಕು ಎಂಬ ಕಾಲ ಈಗ ಉಳಿದಿಲ್ಲ” ಎಂದು ಡಾ. ಅಮಿತ್ ಹೇಳಿದರು.
“ಇದುವರೆಗೆ ಸಂಭವಿಸಿದ ಸಾವುಗಳನ್ನು ತೆಗೆದುಕೊಂಡರೆ ಒಂದಿಲ್ಲೊಂದು ಸದ್ದಿಲ್ಲದ ಅಂಶಗಳು ಕೆಲಸ ಮಾಡಿರಬಹುದು. ಜೊತೆಗೆ ತಂಬಾಕು ಸೇವನೆ, ಅನಾರೋಗ್ಯಕರ ಆಹಾರ ಶೈಲಿ ಮತ್ತು ಅಸಡ್ಡೆಯ ಜೀವನ ಕ್ರಮ, ದೈಹಿಕ ಪರಿಶ್ರಮವಿಲ್ಲದ ಜಡತ್ವದ ಬದುಕು, ಇದಕ್ಕೆ ಜೊತೆಗೂಡಿದ ಮಾನಸಿಕ ಒತ್ತಡ ಹೃದಯಾಘಾತಗಳಿಗೆ ಸಣ್ಣ ವಯಸ್ಸಿನವರೂ ಬಲಿಯಾಗುವಂತೆ ಮಾಡುತ್ತಿದೆ” ಎಂದು ಅಭಿಪ್ರಾಯಪಟ್ಟರು.
“ಯುವ ಜನತೆಗೆ ಸಾಮೂಹಿಕ ಹೃದ್ರೋಗ ಆರೋಗ್ಯ ತಪಾಸಣೆ ಶಿಬಿರಗಳನ್ನು ಸರ್ಕಾರ ಆಯೋಜಿಸಬೇಕು. ಅಲ್ಲದೇ ಸಮಸ್ಯೆ ಇರುವ ಯುವಕರನ್ನು ಗುರುತಿಸಿ ಅವರಿಗೆ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವ ನೀತಿಯನ್ನೂ (ಐಡೆಂಟಿಫಿಕೇಷನ್ ಮತ್ತು ರೆಕ್ಟಿಫೈಯಿಂಗ್) ಜಾರಿಗೊಳಿಸಬೇಕು” ಎಂದು ಸಲಹೆ ಮಾಡಿದರು.
ವಂಶವಾಹಿನಿ ಸಮಸ್ಯೆ: “ಈಗಿನ ಹೃದಯಾಘಾತಗಳಿಗೆ ಸೈಲೆಂಟ್ ಫ್ಯಾಕ್ರ‍್ಸ್ ಅಲ್ಲದೇ, ವಂಶವಾಹಿನಿ ಅಂಶವೂ ಕಾರಣವಾಗುತ್ತಿದೆ. ಹೀಗಾಗಿ ತಮ್ಮ ಕುಟುಂಬ ಇತಿಹಾಸದಲ್ಲಿ ಹೃದಯಾಘಾತ ಹಿನ್ನೆಲೆ ಇದ್ದವರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡು ಸಕ್ಕರೆ, ಕೊಬ್ಬು ಮತ್ತು ರಕ್ತದೊತ್ತಡ ಪ್ರಮಾಣಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು” ಎಂದರು.
“ಜೀನ್ ಥೆರಪಿ (ವಂಶವಾಹಿನಿ ಚಿಕಿತ್ಸೆ) ಸದ್ಯಕ್ಕೆ ಲಭ್ಯವಿಲ್ಲ. ಈ ಬಗ್ಗೆ ಸಂಶೋಧನೆ ಮತ್ತು ಅಧ್ಯಯನ ನಡೆಯುತ್ತಿದ್ದು ಬಹುಶಃ ಇನ್ನೂ ಕೆಲ ವರ್ಷ ಫಲಿತಾಂಶಕ್ಕೆ ಕಾಯಬೇಕು. ಆದ್ದರಿಂದ ಹೃದಯ ಆರೋಗ್ಯ ತಪಾಸಣೆ ಜೊತೆಗೆ ಶಾಲಾ ಹಂತದಿಂದಲೇ ಯೋಗ, ಧ್ಯಾನ ಮತ್ತು ವ್ಯಾಯಾಮಗಳನ್ನು ಕಡ್ಡಾಯಗೊಳಿಸಬೇಕು” ಎಂದು ವೈದ್ಯರು ಅಭಿಪ್ರಾಯಪಟ್ಟರು.