ಭಾರತ ದೇಶದಲ್ಲಿ ಮಧುಮೇಹ ಮತ್ತು ಹೃದ್ರೋಗ ಇವೆರಡು ಅತ್ಯಧಿಕ ಮಾರಣಾಂತಿಕ ದೀರ್ಘಕಾಲೀನ ಕಾಯಿಲೆಗಳಾಗಿವೆ. 2022ರಲ್ಲಿ ವಿಶ್ವದಾದ್ಯಂತ 19.8 ದಶಲಕ್ಷ ಜನರು ಹೃದಯ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಇದು ಆ ವರ್ಷದ ಒಟ್ಟು ಮರಣಹೊಂದಿದವರ ಪ್ರಮಾಣದ ಶೇ.32ರಷ್ಟಿತ್ತೆಂದು ಅಂದಾಜಿಸಲಾಗಿದೆ.
ನಮ್ಮ ದೇಶದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಹೃದಯ ಸಂಬಂಧಿತ ಕಾಯಿಲೆಗಳು, ಅಧಿಕ ರಕ್ತದ ಒತ್ತಡ, ಲಕ್ವದಂತಹ ಅಸ್ವಸ್ಥತೆ ನಮ್ಮ ಜನರ ಅದರಲ್ಲೂ 30 ರಿಂದ 50 ವರ್ಷದ ವ್ಯಕ್ತಿಗಳಲ್ಲಿ ಅಕಾಲಿಕ ಮರಣ ಅಥವ ದೈಹಿಕ ಅಂಗ ವೈಕಲ್ಯವನ್ನು ತರುತ್ತಿವೆ. ಇದರಿಂದ ದೇಶದ ಪ್ರಗತಿಗೆ ಸ್ಥಂಭಗಳಾದ ಆರೋಗ್ಯವಂತ ಜನಸಂಖ್ಯೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದಕ್ಕೆ ಆಧುನಿಕ ಜೀವನಶೈಲಿ,ಬದಲಾದ ಆಹಾರ ಪದ್ಧತಿ, ಹೆಚ್ಚುತ್ತಿರುವ ಸಂಸ್ಕರಿತ ಹಾಗು ಕೊಬ್ಬುಭರಿತ ಸಿದ್ಧಆಹಾರಗಳ ಸೇವನೆ, ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡದೇ ಇರುವುದು, ಒತ್ತಡದ ಕಾರ್ಯ ನಿರ್ವಹಣೆ, ಮೊಬೈಲ್, ಅಂತರ್ಜಾಲ ತಾಣಗಳ ಅಧಿಕ ಗೀಳು, ಪರಿವಾರದವರೊಂದಿಗೆ ಕಡಿಮೆ ಸಮಯ ಕಳೆಯುವಿಕೆ, ಅನಾರೋಗ್ಯಕರ ವ್ಯಸನಗಳು ಮುಂತಾದ ಅಂಶಗಳು ಮುಖ್ಯ ಕಾರಣವೆನ್ನಬಹುದು.
ಆರೋಗ್ಯಕರ ಜೀವನ ಶೈಲಿಯ ನಿರ್ವಹಣೆಯಿಂದ ಹೃದಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮತ್ತು ಜನಸಾಮಾನ್ಯರಲ್ಲಿ ಹೃದಯದ ಆರೈಕೆ ಬಗ್ಗೆ ಸೂಕ್ತ ಮಾಹಿತಿ ನೀಡಿ ಅರಿವು ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 29 ಅನ್ನು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ.
ಹೃದಯದ ಆರೈಕೆ ಹೇಗೆ?: ನಮ್ಮ ಆಹಾರ ದೇಹಕ್ಕೆ ಅವಶ್ಯಕ ಪೋಷಕ ಸತ್ವವನ್ನು ನೀಡುತ್ತದೆ. ನಾವು ಸೇವಿಸುವ ಏಕದಳ ಧಾನ್ಯಗಳು (ಅಕ್ಕಿ, ಗೋಧಿ, ರಾಗಿ, ಜೋಳ ಇತ್ಯಾದಿ) ಶಕ್ತಿಯನ್ನು ನೀಡಿದರೆ ಬೇಳೆಕಾಳುಗಳು (ಹೆಸರು, ಉದ್ದು, ತೊಗರಿ ಇತ್ಯಾದಿ) ದೇಹದ ಬೆಳವಣಿಗೆ ಮತ್ತು ನಿರ್ವಹಣೆಗೆ ಅಗತ್ಯವಿರುವ ಸಸಾರಜನಕವನ್ನು (ಪ್ರೋಟೀನ್) ಒದಗಿಸುತ್ತವೆ.
ಎಣ್ಣೆಬೀಜಗಳು ಅಥವಾ ಅಡಿಗೆ ತೈಲಗಳು ದೇಹಕ್ಕೆ ಅವಶ್ಯವಾಗಿ ಬೇಕಾಗುವ ಕೊಬ್ಬಿನ ಆಮ್ಲಗಳು, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು ಮತ್ತು ಅಧಿಕ ಶಕ್ತಿಯನ್ನು ಪೂರೈಸುತ್ತವೆ. ಹಣ್ಣು ಮತ್ತು ತರಕಾರಿಗಳು ರೋಗ ನಿರೋಧಕ ಶಕ್ತಿಯನ್ನು ನೀಡುವ ಅವಶ್ಯಕ ಖನಿಜ ಹಾಗು ಜೀವಸತ್ವಗಳನ್ನು ಒದಗಿಸುತ್ತವೆ. ಇವೆಲ್ಲಾ ಆಹಾರಗಳನ್ನು ಸರಿಯಾದ ಪ್ರಮಾಣದಲ್ಲಿ ಅವಶ್ಯವಿರುವಷ್ಟು ಸೇವಿಸಿದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಯಾವುದೇ ಆಹಾರ ಹೆಚ್ಚಾದರೆ ಅಥವಾ ಕಡಿಮೆಯಾದರೆ ದೇಹಸ್ಠಿತಿ ಏರುಪೇರಾಗುತ್ತದೆ.
ಆಹಾರದ ಎಲ್ಲ ಗುಂಪಿನ ಆಹಾರಗಳನ್ನು ಒಳಗೊಂಡಂತೆ ತಕ್ಕóಷ್ಟು ಪ್ರಮಾಣದಲ್ಲಿ ಸೂಕ್ತವಾಗಿ ತಯಾರಿಸಿ ಸೇವಿಸಿದಾಗ ಸಮತೋಲನ ಆಹಾರ ಎನ್ನುತ್ತಾರೆ. ದೇಹದ ಪ್ರತಿ ಅಂಗಾಂಗ ಆರೋಗ್ಯಕರ ಸುಸ್ಥಿತಿಯಲ್ಲಿ ಇರಬೇಕೆಂದರೆ ಸಾಕಷ್ಟು ಉತ್ತಮ ಆಹಾರ & ಜೀವನ ಶೈಲಿ, ದೈಹಿಕ ಚಟುವಟಿಕೆಗಳು ಇರಬೇಕು.
ಹೃದಯವು ಮಾನವನ ಅತ್ಯಮೂಲ್ಯ ಅಂಗ. ನಮ್ಮ ಒಡಲಿನಲ್ಲಿ ಜೀವ ಸಂಚಲನವಾದ ಕ್ಷಣದಿಂದ ಧರೆಯ ಮಡಿಲಿಗೆ ಮಿಳಿತವಾಗುವವರೆಗೆ ಅವಿರತವಾಗಿ ಕಾರ್ಯನಿರ್ವಹಿಸುವ ಹೃದಯ ದೇಹದ ಎಲ್ಲ ಅಂಗಗಳಿಗೆ ರಕ್ತದ ಮೂಲಕ ಪೋಷಕಾಂಶಗಳನ್ನು ಹಾಗು ಆಮ್ಲಜನಕವನ್ನು ಪೂರೈಕೆ ಮಾಡುವ ಮಹತ್ಕಾರ್ಯವನ್ನು ಮಾಡುತ್ತದೆ. ಶರೀರದಾದ್ಯಂತ ಹಬ್ಬಿರುವ ರಕ್ತನಾಳಗಳು ರಕ್ತ ಪೂರೈಸುವ ಪೈಪುಗಳು.
ಈ ನಾಳಗಳಲ್ಲಿ ರಕ್ತ ಪೂರೈಕೆಗೆ ಏನಾದರೂ ತಡೆಯುಂಟಾದರೆ ಆಯಾ ಭಾಗಕ್ಕೆ ಆಮ್ಲಜನಕದ ಒದಗುವಿಕೆ ನಿಂತು ಆ ಭಾಗದ ಕಾರ್ಯ ನಿಂತು ಹೋಗುತ್ತದೆ.ಉದಾ.ಮೆದುಳಿನ ಭಾಗಕ್ಕೆ ಅಡೆತಡೆಯುಂಟಾದರೆ ನರವ್ಯವಸ್ಥೆಗೆ ಧಕ್ಕೆಯುಂಟಾಗಿ ಲಕ್ವ ಹೊಡೆಯುತ್ತದೆ. ಹೃದಯಕ್ಕೆ ರಕ್ತ ಸಾಗಿಸುವ ಕೊರೊನರಿ ಎಂಬ ರಕ್ತನಾಳಗಳಲ್ಲಿ ಜಿಡ್ಡಿನಂಶ ಸಂಗ್ರಹದಿಂದ ನಾಳಗಳು ಕಿರಿದಾಗಿ ಹೃದಯಕ್ಕೇ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಅಥೆರೋಸ್ಕ್ಲೆರೋಸಿಸ್ ಎಂಬ ಇಂತಹ ಪರಿಸ್ಥಿತಿ ಹೃದ್ರೋಗಸಮಸ್ಯೆಗೆ ಕಾರಣವಾಗಿ ಹೃದಯದ ಕಾರ್ಯವನ್ನು ಕುಂಠಿತಗೊಳಿಸಿ ಕೊನೆಗೆ ಹೃದಯಾಘಾತ ಅಥವಾ ಮರಣಕ್ಕೆ ಕಾರಣವಾಗುತ್ತದೆ.
ಹೃದಯದ ಆರೋಗ್ಯವನ್ನು ಕಾಪಾಡಲು ಎಲ್ಲ ರೀತಿಯ ಆಹಾರಗಳನ್ನು ಒಂದು ದಿನದ ಆಹಾರಕ್ರಮದಲ್ಲಿ ಇರುವಂತೆ ಸೇವಿಸಬೇಕು. ಹೆಚ್ಚಾಗಿ ತರಕಾರಿ, ಹಣ್ಣು, ನಾರುಭರಿತ ಮೊಳಕೆ ಬರಿಸಿದ ಕಾಳುಗಳನ್ನು, ತಾಜ ತರಕಾರಿ, ಸೊಪ್ಪುಗಳನ್ನು ಯಥೇಚ್ಛವಾಗಿ ಸೇವಿಸಬೇಕು. ಸಾಕಷ್ಟು ನೀರು ಕುಡಿಯಬೇಕು (ದಿನಕ್ಕೆ ಕನಿಷ್ಠ 2-3 ಲೀಟರ್)
ಎಣ್ಣೆ, ಬೆಣ್ಣೆ, ತುಪ್ಪ,ಎಣ್ಣೆಬೀಜಗಳು, ಕರಿದ ತಿಂಡಿ ಇತ್ಯಾದಿ ಆಹಾರಗಳಿಂದ ಸೇವಿಸುವ ಎಣ್ಣೆಯ ಅಂಶ ಪ್ರತಿದಿನ ಸುಮಾರು 20-25 ಗ್ರಾಂ ಗಳಷ್ಟು ಇರಬೇಕು. ಸತತವಾಗಿ ಅದನ್ನು ಮೀರಿ ಸೇವಿಸುತ್ತಿದ್ದರೆ ದೇಹದ ತೂಕ ಜಾಸ್ತಿಯಾಗಿ, ಬೊಜ್ಜು ಸಂಗ್ರಹವಾಗಿ, ಅಧಿಕ ಜಿಡ್ಡಿನಾಂಶ ಕೊಲೆಸ್ಟರಾಲ್ ರೂಪದಲ್ಲಿ ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ.
ಒಳಗೋಡೆಗಳಲ್ಲಿ ಶೇಖರವಾದ ರಕ್ತದಲ್ಲಿನ ಕೊಬ್ಬಿನಂಶ ನಾಳದ ಅಗಲವನ್ನು ಕಿರಿದು ಮಾಡುತ್ತದೆ ಹಾಗು ರಕ್ತಪ್ರವಾಹಕ್ಕೆ ತಡೆಯೊಡ್ಡುತ್ತದೆ. ಇದರಿಂದ ಹೃದಯ ರಕ್ತವನ್ನು ತಳ್ಳಲು ಶ್ರಮಪಡಬೇಕಾಗುತ್ತದೆ. ಇದರಿಂದ ರಕ್ತದ ಒತ್ತಡ ಅಧಿಕವಾಗುತ್ತದೆ. ಇದೇ ಹೃದಯದ ಸಮಸ್ಯೆಗಳಿಗೆ ಆರಂಭ.ಆಹಾರದ ಸರಿಯಾದ ಕ್ರಮಗಳನ್ನು ಅರಿತು ಸಮತೋಲನ ಆಹಾರವನ್ನು ನಿತ್ಯವೂ ಸೇವಿಸುವದರಿಂದ ಹೃದಯದ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬಹುದು.
ಹೃದಯ ಆರೋಗ್ಯದ ರಕ್ಷಣೆಗೆ ಆಹಾರ ಕ್ರಮ
- ಏಕದಳ ಆಹಾರ ಧಾನ್ಯಗಳಿಂದ ತಯಾರಿಸಿದ ಆಹಾರಗಳು ಯಥೇಚ್ಛವಾಗಿರಲಿ. ಉದಾ. ಮುದ್ದೆ, ರೊಟ್ಟಿ, ಚಪಾತಿ, ತರಕಾರಿ ಪರೋಟಾ ಇತ್ಯಾದಿ. ಅನ್ನದ ಪ್ರಮಾಣ ನಿಯಮಿತವಾಗಿರಲಿ
- ಪಥ್ಯವೆಂದರೆ ಕಡಿಮೆ ಆಹಾರ ಸೇವನೆಯಲ್ಲ. ಪೋಷಕಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ಸಿಗುವಂತೆ ಆಹಾರ ಕ್ರಮದಲ್ಲಿ ಚಿಕ್ಕ ಬದಲಾವಣೆ ಅಷ್ಟೇ. ಸಾಮಾನ್ಯ ಆಹಾರದಲ್ಲೇ ಇದನ್ನು ರೂಢಿಸಿಕೊಳ್ಳಬಹುದು.
- ಉಪವಾಸವಿರುವದು ಅಥವಾ ಹೆಚ್ಚು ತಿನ್ನುವದು ಮಾಡಬೇಡಿ. ಬೆಳಗಿನ ತಿಂಡಿ ಭರ್ಜರಿಯಾಗಿರಲಿ, ಮಧ್ಯಾಹ್ನದ ಊಟ ಹಿತಮಿತವಾಗಿರಲಿ, ರಾತ್ರಿಭೋಜನ ಹಗುರವಾಗಿರಲಿ. ಮಧ್ಯೆ ಕುರುಕಲು ತಿಂಡಿಗಳಿಗೆ ಕಡಿವಾಣವಿರಲಿ.
- ಹಾಲು, ಹೈನು, ಮೊಟ್ಟೆ, ಮೀನು ಮತ್ತು ಕಡಿಮೆ ಕೊಬ್ಬಿನ ಮಾಂಸಾಹಾರ ಮಿತಿಯಲ್ಲಿ ಸೇವಿಸಿ. ಉಪ್ಪು, ಹಪ್ಪಳ-ಸಂಡಿಗೆ, ಉಪ್ಪಿನಕಾಯಿ, ಸಾಸ್, ಜೂಸ್, ಕರಿದ ತಿಂಡಿಗಳು, ಸಿಹಿಖಾದ್ಯಗಳು ಆದಷ್ಟೂ ಕಡಿಮೆ ಸೇವಿಸಿ.
- ಹಣ್ಣು ಮತ್ತು ತರಕಾರಿಗಳನ್ನು ಅಧಿಕವಾಗಿ ಸೇವಿಸಿ.(ಸಾಧ್ಯವಾದರೆ ತಾಜಾ ಮತ್ತು ಹಸಿಯಾಗಿ).
- ಬೀಡಿ/ ಸಿಗರೇಟು,ತಂಬಾಕು, ಮದ್ಯಪಾನ, ಗುಟ್ಕಾ ಚಟಗಳನ್ನುನಿಲ್ಲಿಸಿ. ಮಧುಮೇಹ ಅಥವಾ ಯವುದೇ ಆರೋಗ್ಯ ಸಮಸ್ಯೆಗಳಿಗೆ ವೈದ್ಯರ ಹಾಗು ಆಹಾರಪಥ್ಯೋಪಚಾರಕ್ಕೆ ಆಹಾರ ವಿಜ್ಞಾನಿಗಳ ಸಲಹೆ ಪಡೆಯಿರಿ. ಪ್ರತಿ ವರ್ಷಕ್ಕೊಮ್ಮೆ ರಕ್ತ ತಪಾಸಣೆ ಮಾಡಿಸಿ ತಜ್ಞ ವೈದ್ಯರ ಹಾಗು ಆಹಾರ ತಜ್ಞರ ಸಲಹೆ ಪಡೆದು ತಪ್ಪದೆ ಪಾಲಿಸಿ.
- ಒಂದು ದಿನಕ್ಕೆ ಒಬ್ಬವ್ಯಕ್ತಿಗೆ ಒಟ್ಟು ಮೂರು ಟೀ ಚಮಚ ಎಣ್ಣೆ / ಕೊಬ್ಬು ಸಾಕು, ಆ ರೀತಿ ಯೋಚಿಸಿ ಇಡೀ ಕುಟುಂಬದ ಅಡಿಗೆ ತಯಾರಿಕೆಗೆ ತೈಲ ಬಳಸಿ. ಬರೀ ರಿಫೈನ್ಡ್ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಗ್ರಹಿಕೆ ತಪ್ಪು. ಫಿಲ್ಟರ್ ಮಾಡಿದ 2-3 ರೀತಿಯ ಶುದ್ಧ ಅಡಿಗೆ ತೈಲಗಳನ್ನು ಬೆರೆಸಿ ಉಪಯೋಗಿಸುವದು ಸೂಕ್ತ. ಶುದ್ಧ ಗಾಣದ ಎಣ್ಣೆ ಹೃದಯದ ಆರೋಗ್ಯಕ್ಕೆ ಉತ್ತಮ.
- ಮೆಂತ್ಯ, ಬೆಳ್ಳುಳ್ಳಿ, ದಾಲ್ಚಿನ್ನಿ, ಲವಂಗ, ಅರಿಸಿಣ ಇವುಗಳ ಔಷಧೀಯ ಗುಣಗಳು ಈಗ ಎಲ್ಲೆಡೆಯೂ ಮಾನ್ಯತೆ ಗಳಿಸಿವೆ. ಆಹಾರದಲ್ಲಿ ಇವುಗಳನ್ನು ಹಿತಮಿತವಾಗಿ ನಿರಂತರವಾಗಿ ಬಳಸಿ.
- ಯಾಂತ್ರಿಕಜೀವನ, ಒತ್ತಡ, ಕುಟುಂಬ ಕಲಹಗಳನ್ನು ಹೋಗಲಾಡಿಸಲು ಧ್ಯಾನ, ಸರಳ ಜೀವನ, ವ್ಯಾಯಾಮ, ನಿಯಮಿತವಿಹಾರ-ಪ್ರವಾಸಗಳನ್ನು ರೂಢಿಸಿಕೊಳ್ಳಿ.
ಲೇಖನ
ಡಾ.ಬನು ದೇಶಪಾಂಡೆ
ಪ್ರಾಧ್ಯಾಪಕರು (ಆಹಾರ ವಿಜ್ಞಾನ ಮತ್ತು ಪೋಷಣೆ), ಕೃಷಿವಿಶ್ವ ವಿದ್ಯಾನಿಲಯ, ಬೆಂಗಳೂರು