ಮಹಾನಟಿ: ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಮಹಾನಟಿ ಸೀಸನ್ 2ಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ನಟನೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಪ್ರತಿಭೆಗಳ ನಡುವೆ ನಡೆದ ತೀವ್ರ ಪೈಪೋಟಿಯ ನಂತರ, ಮಂಗಳೂರಿನ ಪ್ರತಿಭಾವಂತೆ ವಂಶಿ ರತ್ನಕುಮಾರ್ ಅವರು ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಅವರ ಮುಡಿಗೆ ‘ಮಹಾನಟಿ’ ಕಿರೀಟ ಏರಿದ್ದು, ಬೆಳಗಾವಿಯ ವರ್ಷಾ ಡಿಗ್ರಜೆ ಅವರು ಮೊದಲ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಗೆದ್ದವರಿಗೆ ಸಿಕ್ಕ ಬಹುಮಾನಗಳೇನು?: ಈ ಬಾರಿಯ ‘ಮಹಾನಟಿ’ ವಿಜೇತರಿಗೆ ಕೇವಲ ಪ್ರಶಸ್ತಿ ಮಾತ್ರವಲ್ಲದೆ, ಭಾರಿ ಮೌಲ್ಯದ ಬಹುಮಾನಗಳೂ ಲಭಿಸಿವೆ. ವಿಜೇತೆ ವಂಶಿಗೆ ಆಕರ್ಷಕ ಟ್ರೋಫಿಯ ಜೊತೆಗೆ, ‘ವೈಟ್ ಗೋಲ್ಡ್’ ಸಂಸ್ಥೆಯ ವತಿಯಿಂದ ಬರೋಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಲಾಗಿದೆ. ಇನ್ನು, ಅಂತಿಮ ಹಂತದವರೆಗೂ ಪ್ರಬಲ ಸ್ಪರ್ಧೆ ನೀಡಿದ ರನ್ನರ್ ಅಪ್ ವರ್ಷಾ ಡಿಗ್ರಜೆಗೆ ‘ಜಾರ್ ಆ್ಯಪ್’ ವತಿಯಿಂದ 10 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಲಾಗಿದೆ.
ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ: ಗೆಲುವಿನ ಸಂತಸದಲ್ಲಿ ಭಾವುಕರಾಗಿ ಮಾತನಾಡಿದ ವಂಶಿ, “ಒಬ್ಬ ಉತ್ತಮ ನಟಿಯಾಗಬೇಕು ಎಂಬ ದೊಡ್ಡ ಕನಸನ್ನು ಹೊತ್ತು ನಾನು ಈ ವೇದಿಕೆಗೆ ಬಂದಿದ್ದೆ. ಇಂದು ನನ್ನ ಹಲವು ದಿನಗಳ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಹಿರಿಯ ನಟಿ ಬಿ. ಸರೋಜಾದೇವಿ ಅಮ್ಮನವರ ನಟನೆಯನ್ನು ನೋಡುತ್ತಾ ಬೆಳೆದ ನನಗೆ, ಈ ಟ್ರೋಫಿ ಅವರ ಆಶೀರ್ವಾದದಂತೆ ಭಾಸವಾಗುತ್ತಿದೆ.
ನನ್ನಂತಹ ಉದಯೋನ್ಮುಖ ಕಲಾವಿದರಿಗೆ ಇಂತಹ ಅದ್ಭುತ ವೇದಿಕೆಯನ್ನು ಕಲ್ಪಿಸಿಕೊಟ್ಟ ಜೀ ಕನ್ನಡ ವಾಹಿನಿಗೆ ನಾನು ಆಭಾರಿ. ಅಮ್ಮ, ನಿನ್ನ ಮಗಳು ಇಂದು ಗೆದ್ದಿದ್ದಾಳೆ,” ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.’ಮಹಾನಟಿ’ ವೇದಿಕೆಯು ಕೇವಲ ಒಂದು ಸ್ಪರ್ಧೆಯಾಗಿರದೆ, ಸ್ಪರ್ಧಿಗಳಿಗೆ ನಟನೆಯ ವಿವಿಧ ಆಯಾಮಗಳನ್ನು ಕಲಿಸಿಕೊಡುವ ಪಾಠಶಾಲೆಯಾಗಿತ್ತು.
ಕಠಿಣ ನಟನಾ ಸವಾಲುಗಳು, ಭಾವನಾತ್ಮಕ ಸನ್ನಿವೇಶಗಳು, ಮತ್ತು ನೃತ್ಯ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ ಐವರು ಫೈನಲಿಸ್ಟ್‌ಗಳಾದ ಮಾನ್ಯ, ವರ್ಷಾ, ವಂಶಿ, ಶ್ರೀಯಾ ಮತ್ತು ಭೂಮಿಕಾ ಎಲ್ಲರ ಗಮನ ಸೆಳೆದಿದ್ದರು. ಈ ಗೆಲುವು ವಂಶಿ ಸಿನಿ ಜರ್ನಿಗೆ ಒಂದು ಭದ್ರ ಬುನಾದಿ ಹಾಕಿಕೊಟ್ಟಿದೆ ಎಂದರೆ ತಪ್ಪಾಗಲಾರದು.


























