ದರ್ಶನ್ ಕೆಲವೇ ಕ್ಷಣಗಳಲ್ಲಿ ಜೈಲು ಸೇರಲಿದ್ದಾರೆ. ಆದ್ದರಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ದರ್ಶನ್ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಮಾಡಿದೆ.
ಗುರುವಾರ ಮಧ್ಯಾಹ್ನ ಬೆಂಗಳೂರು ನಗರದ ಹೊಸಕೆರೆಹಳ್ಳಿ ಬಳಿಯ ವಿಜಯಲಕ್ಷ್ಮೀ ನಿವಾಸದಲ್ಲಿ ನಟ ದರ್ಶನ್‌ರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ತಪಾಸಣೆ ಪೂರ್ಣಗೊಳಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.
ದರ್ಶನ್ ಸೇರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ಗುರುವಾರ ರದ್ದು ಮಾಡಿದೆ. ಆದ್ದರಿಂದ ಆರೋಪಿಗಳನ್ನು ಪೊಲೀಸರು ಜೈಲಿಗೆ ಬಿಟ್ಟು ಬಿರಲಿದ್ದಾರೆ. ಆದರೆ ಯಾವ ಜೈಲಿಗೆ ದರ್ಶನ್ ಹೋಗಲಿದ್ದಾರೆ? ಎಂಬುದು ಇನ್ನೂ ತಿಳಿದುಬಂದಿಲ್ಲ.
ಸದ್ಯ ಎಲ್ಲಾ ಆರೋಪಿಗಳು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿದ್ದಾರೆ. ದರ್ಶನ್ ಜೈಲು ಸೇರುವ ಹಿನ್ನಲೆಯಲ್ಲಿ ಶುಕ್ರವಾರ ನಿಗದಿಯಾಗಿದ್ದ ಪ್ರಮುಖ ಕಾರ್ಯಕ್ರಮ ಮುಂದೂಡಿಕೆಯಾಗಿದೆ.
ಡೆವಿಲ್ ಸಾಂಗ್ ರಿಲೀಸ್ ಇಲ್ಲ: ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಡೆವಿಲ್’ ಈಗಾಗಲೇ ಪೋಸ್ಟರ್ ಮೂಲಕವೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಈ ಚಿತ್ರದ ಹಾಡು ಆಗಸ್ಟ್ 15ರಂದು ಬಿಡುಗಡೆಯಾಗಬೇಕಿತ್ತು. ಈ ಕುರಿತು ಚಿತ್ರತಂಡ ಘೋಷಣೆ ಮಾಡಿತ್ತು.
ಶ್ರೀ ಜೈಮಾತಾ ಕಾಂಬೈನ್ಸ್ ಸಾರೆಗಾಮಾ ಸಹಯೋಗದಲ್ಲಿ ಎ ಯೂಡ್ಲಿ ಫಿಲ್ಮ್ ದರ್ಶನ್ ತೂಗುದೀಪ ಅಭಿನಯದ ಚಲನಚಿತ್ರ ‘ದಿ ಡೆವಿಲ್’ ಸಿನಿಮಾದಿಂದ ಮೊದಲ ಲಿರಿಕಲ್ ವಿಡಿಯೋ ಹಾಡು ಬಿಡುಗಡೆ.
‘ಇದ್ರೇ ನೆಮ್ದಿಯಾಗ್ ಇರ್ಬೇಕ್’ 15ನೇ ಆಗಸ್ಟ್ 2025 10:05ಕ್ಕೆ ಸಾರೆಗಾಮ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಎಂದು ತಿಳಿಸಲಾಗಿತ್ತು. ಆದರೆ ಈಗ ದರ್ಶನ್ ಜಾಮೀನು ರದ್ದುಗೊಂಡು ಅನಿರೀಕ್ಷಿತ ಘಟನೆ ನಡೆದ ಹಿನ್ನಲೆಯಲ್ಲಿ ಶುಕ್ರವಾರದ ಹಾಡು ಬಿಡುಗಡೆ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ.
‘ಡೆವಿಲ್’ ಚಿತ್ರದ ‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಎಂಬ ಹಾಡಿನ ಹೆಸರೇ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದರ್ಶನ್ ಬೈಗುಳದಲ್ಲಿ ಬರುವ ಸಾಲುಗಳಿವು. ಇದನ್ನು ಸಾಂಗ್‌ಗೆ ಇಟ್ಟಿರುವ ಕುರಿತು ಚರ್ಚೆ ನಡೆಯುತ್ತಿತ್ತು.
ಈ ನಡುವೆಯೇ ಲಿರಿಕಲ್ ವಿಡಿಯೋ ಬಿಡುಗಡೆಗೆ ತಯಾರಿ ನಡೆದಿತ್ತು. ಆದರೆ ಈಗ ದರ್ಶನ್ ಅಭಿಮಾನಿಗಳು, ಚಿತ್ರತಂಡಕ್ಕೆ ಶಾಕ್ ಆಗಿದ್ದು ಜಾಮೀನು ರದ್ದುಗೊಂಡಿದೆ. ಈಗಾಗಲೇ ಪೊಲೀಸರ ವಶದಲ್ಲಿರುವ ದರ್ಶನ್ ಯಾವುದೇ ಕ್ಷಣದಲ್ಲಿ ಜೈಲು ಪಾಲಾಗಲಿದ್ದಾರೆ. ಆದ್ದರಿಂದ ಡೆವಿಲ್ ಚಿತ್ರದ ಹಾಡು, ಸಿನಿಮಾ ಅಭಿಮಾನಿಗಳ ಮುಂದೆ ಸದ್ಯಕ್ಕೆ ಬರುವುದಿಲ್ಲ.
ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ನಟ ದರ್ಶನ್ ಸುಮಾರು 6 ತಿಂಗಳು ಜೈಲಿನಲ್ಲಿಯೇ ಇರಬೇಕಿದೆ. ಬಳಿಕ ಸುಪ್ರೀಂಕೋರ್ಟ್‌ಗೆ ಜಾಮೀನು ನೀಡುವಂತೆ ಮೇಲ್ಮನವಿ ಸಲ್ಲಿಕೆ ಮಾಡಬೇಕು. ಅದರ ವಿಚಾರಣೆ ಪೂರ್ಣಗೊಂಡು ಜಾಮೀನು ದೊರೆಯಬೇಕಿದೆ. ಇಂದಿನ ತೀರ್ಪಿನಲ್ಲಿ ಕೋರ್ಟ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದು ಅಧೀನ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.