ಸಂಪಾದಕೀಯ: ಬೆಳೆ ಹಾನಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಿ

0
29

ಭೀಮಾನದಿಯಲ್ಲಿ ಪ್ರವಾಹ ಬಂದು ಕಲ್ಯಾಣ ಕರ್ನಾಟಕ ಜನರ ಬದುಕನ್ನೇ ನಿರ್ನಾಮ ಮಾಡಿತು. ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿದರು. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕು. ಅದಕ್ಕೆ ನೆಲ ಒಣಗಬೇಕು. ನಿಂತ ನೀರು ಹೋಗಿ ಒಣ ಭೂಮಿ ಕಾಣಿಸಬೇಕು. ಅಲ್ಲಿಯವರೆಗೆ ಜನರ ಪಾಡೇನು ಎಂದರೆ ಉತ್ತರವಿಲ್ಲ. ಯಾದಗಿರಿ, ಅಫಜಲಪುರದಲ್ಲಿ ಅತಿ ಹೆಚ್ಚು ಜನ ಮನೆ, ಭೂಮಿ ಎರಡನ್ನೂ ಕಳೆದುಕೊಂಡಿದ್ದಾರೆ.

ಜೇವರ್ಗಿ ತಾಲೂಕು ಮಂದೇವಾಲ, ಚಿತ್ತಾಪುರ ತಾಲೂಕು ಕಡಬೂರು, ಶಾಮನೂರು ಗ್ರಾಮಗಳೇ ಇಲ್ಲ. ಇಡೀ ಗ್ರಾಮಗಳು ಕೆಸರಿನಲ್ಲಿ ಮುಚ್ಚಿ ಹೋಗಿವೆ. ಒಟ್ಟು 14 ಸೇತುವೆಗಳು ಮುಳುಗಡೆಯಾಗಿವೆ. ಇಲ್ಲಿಯ ಜನರಿಗೆ ಬರಗಾಲ ಕಂಡು ಅನುಭವವಿತ್ತೆ ಹೊರತು ಪ್ರವಾಹ ಕಂಡವರಲ್ಲ. ಈ ಬಾರಿ ಅವರಿಗೆ ದೀಪಾವಳಿ ಕತ್ತಲೆಯನ್ನೇ ತಂದಿತು. ಸಾಮಾನ್ಯವಾಗಿ ಮಳೆ ಬರುತ್ತಿದ್ದ ಕಾಲದಲ್ಲಿ ಪ್ರವಾಹ ಬರುತ್ತಿರಲಿಲ್ಲ. ಪ್ರವಾಹ ಬರುತ್ತಿದ್ದ ಮಳೆ ಇರುತ್ತಿರಲಿಲ್ಲ.

ಈ ಬಾರಿ ಮಳೆ ಮತ್ತು ಪ್ರವಾಹ ಎರಡೂ ಏಕಕಾಲಕ್ಕೆ ಬಂದಿದ್ದರಿಂದ ಜನ ತತ್ತರಿಸಿ ಹೋಗಿದ್ದಾರೆ. ವಿಜಯಪುರದ ಇಂಡಿ ಮತ್ತು ಸಿಂದಗಿ ಕೂಡ ಸಾಕಷ್ಟು ನಷ್ಟ ಅನುಭವಿಸಿವೆ. ಭೀಮಾ ನದಿಗೆ 5 ಬ್ಯಾರೇಜ್ ನಿರ್ಮಿಸಲಾಗಿದೆ. ಅದರಲ್ಲಿ ಸೊನ್ನ ಮತ್ತು ಸನ್ನತಿ ದೊಡ್ಡ ಬ್ಯಾರೇಜ್. ಇವುಗಳಿಗೆ ಕಾಲುವೆ ನಿರ್ಮಿಸುವ ಕೆಲಸವನ್ನು ಸರ್ಕಾರ ಕೈಗೊಳ್ಳಲೇ ಇಲ್ಲ. ಇದರಿಂದ ಪ್ರವಾಹ ನಿಯಂತ್ರಣ ಆಗಲಿಲ್ಲ. ಅಲ್ಲದೆ ನೀರಿದ್ದರೂ ರೈತರಿಗೆ ಉಪಯೋಗಕ್ಕೆ ಬರಲಿಲ್ಲ.

ಈಗ ಉಳಿದಿರುವುದು ಕೆಸರು ಮಾತ್ರ. ಮಹಾರಾಷ್ಟ್ರದವರಿಗೆ ನೀರೂ ಉಳಿಯಿತು. ಪ್ರವಾಹ ಹತೋಟಿಗೆ ಬಂದಿತು. ನಮ್ಮಲ್ಲಿ ಎರಡೂ ಇಲ್ಲ. ಇಲ್ಲಿಯ ಜನರಿಗೆ ಪ್ರತಿಭಟಿಸುವ ಮನೋಭಾವವೇ ಇಲ್ಲ. ಬರಗಾಲ ಬಂತು ಎಂದರೆ ಗುಳೇ ಹೋಗುತ್ತಾರೆ. ಅವರಿಗೆ ಕಷ್ಟಪಟ್ಟು ಜೀವಿಸುವ ಮನೋಭಾಗ ಹುಟ್ಟಿನಿಂದಲೇ ಬಂದಿದೆ. ಅದಕ್ಕೆ ತಕ್ಕಂತೆ ಇಲ್ಲಿಯ ಜನಪ್ರತಿನಿಧಿಗಳೂ ಇದ್ದಾರೆ. ಬಿ.ಆರ್. ಪಾಟೀಲ್, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ ಪ್ರಭಾವಿ ನಾಯಕರು. ಅವರು ಜನರ ಕಣ್ಣೀರು ಒರೆಸುವ ಕೆಲಸ ಕೈಗೊಂಡಿಲ್ಲ.

ಮುಖ್ಯಮಂತ್ರಿ ಜತೆ ವೈಮಾನಿಕ ಸಮೀಕ್ಷೆ ಕೈಗೊಂಡರೇ ಹೊರತು ಸ್ಥಳಕ್ಕೆ ಭೇಟಿಕೊಟ್ಟು ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಲಿಲ್ಲ. ಈಗ ಭೀಮಣ್ಣ ಖಂಡ್ರೆ ನೆನಪಿಗೆ ಬರುತ್ತಾರೆ. ಅವರು ಶತಾಯುಷಿ. ಹಿಂದೆ ಮುಖ್ಯಮಂತ್ರಿ ಎದುರೇ ಸಚಿವರಿಗೆ ಕಪಾಳಮೋಕ್ಷ ಮಾಡಿದವರು. ಅವರನ್ನು ಕಂಡರೆ ಅಧಿಕಾರಿಗಳು ಹೆದರುತ್ತಿದ್ದರು. ಈಗ ಕಲ್ಯಾಣ ಕರ್ನಾಟಕದ ನಾಯಕರು ಅಂಥ ದಿಟ್ಟತನ ತೋರುವ ಮನಸ್ಥಿತಿಯಲ್ಲಿಲ್ಲ.

ಈಗ ರಾಜ್ಯ ಸರ್ಕಾರ ಕೇಂದ್ರದತ್ತ ಮುಖಮಾಡಿ ನೋಡುತ್ತ ಕುಳಿತಿದೆ. ಮಹಾರಾಷ್ಟ್ರಕ್ಕೆ ಪರಿಹಾರ ಧನ ಬರುವುದು ಗ್ಯಾರಂಟಿ. ನಮಗೆ ಹಣ ಬರುವ ಗ್ಯಾರಂಟಿಯಂತೂ ಇಲ್ಲ. ರಾಜ್ಯ ಸರ್ಕಾರ 2200 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರವನ್ನು ಕೋರಿದೆ. ಬಿಜೆಪಿ ಸಚಿವರು ಇದ್ದರೂ ಅವರಿಗೆ ಪ್ರಧಾನಿಯ ಬಳಿ ಕೇಳುವ ಧೈರ್ಯ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಆಸಕ್ತಿವಹಿಸಿದರೆ ಮಾತ್ರ ಹಣ ಬರಬಹುದು. ಇಲ್ಲದಿದ್ದಲ್ಲಿ ಕಾಂಗ್ರೆಸ್ – ಬಿಜೆಪಿ ಜಟಾಪಟಿ ಮುಂದುವರಿಯುತ್ತದೆ.

ಅದರಿಂದ ಬಡವರ ಹೊಟ್ಟೆ ತುಂಬುವುದಿಲ್ಲ. ಕಲ್ಯಾಣ ಕರ್ನಾಟಕದ ಹೆಸರಲ್ಲಿ ಚಿರಸ್ಥಾಯಿಯಾಗಿ ಉಳಿಯುವುದು ವಿರೇಂದ್ರ ಪಾಟೀಲ ಮತ್ತು ಮಲ್ಲಿಕಾರ್ಜುನ ಖರ್ಗೆ. ಈಗಲೂ ಖರ್ಗೆ ಮುಜುವರ್ಜಿವಹಿಸಿದರೆ ಕಲ್ಯಾಣ ಕರ್ನಾಟಕದ ಜನರ ಭಾಗ್ಯದ ಬಾಗಿಲು ತೆರೆಸಬಹುದು. ಆ ಭಾಗಕ್ಕೆ ಅವರೇ ಕಾಯಂ ಮುಖ್ಯಮಂತ್ರಿ. ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ರಾಜ್ಯ ಸರ್ಕಾರ ಚಾಟಿ ಬೀಸಬೇಕು. ಆಗ ಪರಿವರ್ತನೆಯ ಗಾಳಿ ಬೀಸಲಿದೆ.

ಕಲಬುರ್ಗಿ ತೊಗರಿ ಬೆಳೆಗೆ ಹೆಸರುವಾಸಿ. ಈ ಬಾರಿ ಶೇ.50 ರಷ್ಟು ಇಳುವರಿ ಇಲ್ಲ. ರಾಯಚೂರು ಹತ್ತಿ ಸಂಪೂರ್ಣವಾಗಿ ನೆಲಕಚ್ಚಿದೆ. ಹೆಸರು ಮತ್ತು ಉದ್ದಿನ ಹೆಸರೇ ಉಳಿದಿಲ್ಲ. ಎಲ್ಲವೂ ನಾಶವಾಗಿದೆ. ಹಿಂದೆ ಕುಡಿಯುವ ನೀರಿಗೆ ಪರದಾಡುತ್ತಿದ್ದರು. ಈಗ ಪ್ರವಾಹದಲ್ಲಿ ಕೊಚ್ಚಿ ಹೋದ ಮನೆ, ಭೂಮಿಯನ್ನು ಹುಡುಕುತ್ತಿದ್ದಾರೆ. ಅಲ್ಲಿಯ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಹೈದರಾಬಾದ್ ಮತ್ತು ಬೆಂಗಳೂರು ನಗರದಲ್ಲಿ ಬಂಗಲೆ ಕಟ್ಟಿಕೊಂಡು ನೆಮ್ಮದಿಯಾಗಿದ್ದಾರೆ.

ಭೀಮಾ ಪ್ರವಾಹ ಅವರ ಮನೆ ಬಾಗಿಲಿಗೆ ಬರುವುದಿಲ್ಲ. ಹೀಗಾಗಿ ಅಲ್ಲಿಯ ಜನರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನದಿ ದಡದಲ್ಲಿ ವಾಸಿಸುವ ಜನರಿಗೆ ಪ್ರಕೃತಿಯ ಕೊಡುಗೆ ಅಪಾರವಾಗಿರುತ್ತದೆ ಎಂಬುದು ಎಲ್ಲ ಭಾವನೆ. ಆದರೆ ಭೀಮ ನದಿ ದಂಡೆ ವಾಸಿಸುವ ಜನ ಎಂದೂ ಸಂತಸದ ದಿನಗಳಲ್ಲಿ ನೋಡಿಲ್ಲ. ಭೀಮರಥಿ ಎಂಬ ಹೊಳಿ ತಂಪು ಎಂಬ ಜಾನಪದ ಗೀತೆಯಂತೆ ಅಲ್ಲಿಯ ಜನರ ಬದುಕು ತಂಪಾಗೇನೂ ಇಲ್ಲ.

ಬ್ಯಾರೇಜುಗಳಿವೆ ಕಾಲುವೆಗಳಿಲ್ಲ ಎಂದಾಗ ಅಲ್ಲಿಯ ಜನರ ಬದುಕು ತಂಪಾಗಲು ಹೇಗೆ ಸಾಧ್ಯ? ಬೆಂಗಳೂರಿನ ವಿಧಾನಸೌಧದಿಂದ ದೂರದ ಯಾದಗಿರಿ, ಅಫಲಜಪುರ, ಇಂಡಿ. ಸಿಂದಗಿಗೆ ಪರಿಹಾರ ಹಣ ಎಂದು ಹರಿದುಹೋಗುತ್ತದೋ ತಿಳಿಯದು. ಅದು ಎಷ್ಟು ಕೈಗಳನ್ನು ದಾಟಿ ನೊಂದ ರೈತರ ಕಣ್ಣೀರು ಒರೆಸುತ್ತದೋ ತಿಳಿಯದು. ಆದರೂ ಜನ ಯಾವ ನಂಬಿಕೆಯಲ್ಲಿ ಬದುಕಿದ್ದಾರೆ ಎಂಬುದೇ ಆಶ್ಚರ್ಯದ ಸಂಗತಿ.

Previous articleಜಾತಿಗಣತಿ: ಸಮೀಕ್ಷೆಗೆ ಗೈರಾದರೆ ಶಿಸ್ತುಕ್ರಮಗಳು ಏನು?
Next articleಆಪರೇಷನ್ ಸಿಂದೂರ್: ಪಾಕಿಸ್ತಾನದ ‘ಕಾಲ್ಪನಿಕ’ ಕಥೆಗೆ ಭಾರತದ ‘ನೈಜ’ ಉತ್ತರ!

LEAVE A REPLY

Please enter your comment!
Please enter your name here