ವಿಜಯಪುರ: ಉತ್ತರ ಕರ್ನಾಟಕಕ್ಕೆ ಪ್ರತಿಯೊಂದು ಹಂತದಲ್ಲೂ ಅನ್ಯಾಯವಾಗುತ್ತಿದೆ ಎಂಬ ಕೂಗು ದಶಕಗಳಿಂದಲೂ ಪ್ರತಿಧ್ವನಿಸುತ್ತಲೇ ಇದೆ. ಮೊನ್ನೆ ಮೊನ್ನೆ ಶಾಸಕ ರಾಜು ಕಾಗೆ ಸಹ ಪ್ರತ್ಯೇಕ ರಾಜ್ಯದ ವಾದ ಪ್ರತಿಪಾದಿಸಿದ್ದರೆ, ವಿಜಯಪುರದಲ್ಲಿ ಈಗ ಇಂತಹ ಕೂಗು ಕೇಳಿ ಬಂದಿದೆ.
ವಿಜಯಪುರದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತ್ಯೇಕ ರಾಜ್ಯ ರಚನೆ ಹಕ್ಕೊತ್ತಾಯ ಮಂಡಿಸಿ ಪ್ರತ್ಯೇಕ ರಾಜ್ಯದ ನಕಾಶೆ ಪ್ರದರ್ಶಿಸಿದರು. ಪ್ರಗತಿಪರ ಚಿಂತಕರು, ವಿವಿಧ ಕನ್ನಡಪರ ಸಂಘಟನೆಯ ಸದಸ್ಯರು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದರು.
ಹೋರಾಟ ಸಮಿತಿ ಪ್ರಮುಖ ನಾಗೇಶ ಗೋಲಶೆಟ್ಟಿ ಮತ್ತಿತರರು ಮಾತನಾಡಿ, ಹೇರಳವಾದ ಸಂಪನ್ಮೂಲಗಳಿದ್ದರೂ ಉ.ಕ. ಭಾಗದ ಜನತೆ ದೊಡ್ಡ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುವಂತಾಗಿದೆ. ಹಿಂದೆ ಸಂಸದ ರಮೇಶ ಜಿಗಜಿಣಗಿ ಅವರು ಗೌರವಾನ್ವಿತ ರಾಜ್ಯಪಾಲರಿಗೆ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪತ್ರ ಬರೆದಿದ್ದರು. ಪಕ್ಷಾತೀತವಾಗಿ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು, ಶಾಸಕರು, ಸಂಸದರು ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬೆಂಬಲಿಸಬೇಕು. ನವೆಂಬರ್ ಒಂದರಿಂದ ಜನಪ್ರತಿನಿಧಿಗಳಿಂದ ಸಹಿ ಸಂಗ್ರಹ ಹಾಗೂ ಪತ್ರ ಚಳವಳಿಯ ಅಭಿಯಾನ ಪ್ರಾರಂಭಿಸಲಾಗಿದೆ. ಅನೇಕ ಜನಪ್ರತಿನಿಧಿಗಳು ಬೆಂಬಲಿಸಿ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ ಎಂದರು.


























