ಚಡಚಣ ಎಸ್‌ಬಿಐ ದರೋಡೆ: ಪಾಳುಬಿದ್ದ ಮನೆಯಲ್ಲಿ 41 ಲಕ್ಷ ರೂ, 6.5 ಕೆಜಿ ಚಿನ್ನ ಪತ್ತೆ!

0
33

ವಿಜಯಪುರ ಜಿಲ್ಲೆಯ ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಸೆಪ್ಟೆಂಬರ್ 16 ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ದೊರೆತಿದೆ. ಹುಲಜಂತಿ ಗ್ರಾಮದ ಪಾಳುಬಿದ್ದ ಮನೆಯ ಮೇಲ್ಛಾವಣಿಯಲ್ಲಿ ಬರೋಬ್ಬರಿ 41.4 ಲಕ್ಷ ರೂ. ನಗದು ಮತ್ತು 6.54 ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಈ ಆಘಾತಕಾರಿ ದರೋಡೆಯಲ್ಲಿ ಒಟ್ಟು 1.5 ಕೋಟಿ ರೂ. ನಗದು ಮತ್ತು 20 ಕೆ.ಜಿ.ಗೂ ಅಧಿಕ ಚಿನ್ನಾಭರಣ ಕಳುವಾಗಿತ್ತು.

ಮಂಗಳವೇಡ ಗ್ರಾಮಸ್ಥರು ಮನೆಯ ಮೇಲ್ಛಾವಣಿಯಲ್ಲಿ ಅನುಮಾನಾಸ್ಪದ ಬ್ಯಾಗ್ ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಬ್ಯಾಗನ್ನು ವಶಪಡಿಸಿಕೊಂಡಿದ್ದಾರೆ. ದರೋಡೆಕೋರರು ಕೃತ್ಯದ ನಂತರ ಪರಾರಿಯಾಗುವಾಗ ಈ ಹಣ ಮತ್ತು ಚಿನ್ನವನ್ನು ಅಲ್ಲಿ ಬಚ್ಚಿಟ್ಟಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ದರೋಡೆಕೋರರ ಪತ್ತೆಗಾಗಿ 8 ವಿಶೇಷ ತಂಡಗಳನ್ನು ರಚಿಸಿದ್ದಾರೆ.

ದರೋಡೆ ನಡೆದ ದಿನವೇ, ಅಂದರೆ ಸೆಪ್ಟೆಂಬರ್ 16 ರಂದು, ದರೋಡೆಕೋರರು ಬಳಸಿದ್ದ ಇಕೋ ವಾಹನ ಹುಲಜಂತಿ ಗ್ರಾಮದಲ್ಲಿ ಪತ್ತೆಯಾಗಿತ್ತು. ಈ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಾಗ ಸ್ಥಳೀಯರು ಪ್ರಶ್ನಿಸಿದ್ದರು. ಆಗ ಆರೋಪಿಗಳು ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದರು. ಆ ಸಂದರ್ಭದಲ್ಲಿ ಸ್ಥಳೀಯರಿಗೆ ಸಿಕ್ಕಿದ್ದ ಬ್ಯಾಗ್‌ನಲ್ಲಿಯೂ ಸ್ವಲ್ಪ ಚಿನ್ನಾಭರಣ ಹಾಗೂ 1.30 ಲಕ್ಷ ರೂ. ನಗದು ಪತ್ತೆಯಾಗಿತ್ತು.

ಸೆಪ್ಟೆಂಬರ್ 16ರ ಸಂಜೆ ನಡೆದಿದ್ದ ಈ ದರೋಡೆಯಲ್ಲಿ ಮ್ಯಾನೇಜರ್, ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್ ಮತ್ತು ಕೆಲವು ಗ್ರಾಹಕರ ಕೈಕಾಲು ಕಟ್ಟಿಹಾಕಿ ದರೋಡೆಕೋರರು ಹಣ ಮತ್ತು ಚಿನ್ನಾಭರಣ ದೋಚಿದ್ದರು. ಬ್ಯಾಂಕ್ ಮ್ಯಾನೇಜರ್ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳ ನಿರ್ಲಕ್ಷ್ಯವೂ ದರೋಡೆಗೆ ಕಾರಣವಾಗಿರಬಹುದು ಎಂದು ಗ್ರಾಹಕರು ಆರೋಪಿಸಿದ್ದು, ಅವರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ.

ದರೋಡೆಕೋರರು ಮಹಾರಾಷ್ಟ್ರದ ಕಡೆ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಅವರ ಶೋಧ ಕಾರ್ಯ ಮುಂದುವರಿದಿದೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿರುವ ಈ ದೊಡ್ಡ ಮೊತ್ತದ ಹಣ ಮತ್ತು ಚಿನ್ನದ ಮೂಲಕ ದರೋಡೆಕೋರರನ್ನು ಶೀಘ್ರದಲ್ಲೇ ಬಂಧಿಸುವ ನಿರೀಕ್ಷೆ ಇದೆ.

Previous articleಸಂಪಾದಕೀಯ: ರಾಜಧಾನಿಯಲ್ಲಿ ರಸ್ತೆಗುಂಡಿ; ಐಟಿ ಕಂಪನಿ ವಲಸೆ ಕೂಗು
Next articleಶಾರುಖ್ ಪುತ್ರನ ಚೊಚ್ಚಲ ವೆಬ್‌ಸಿರೀಸ್‌ಗೆ ನೆಟಿಜನ್ಸ್‌ ಫುಲ್‌ ಮಾರ್ಕ್ಸ್‌

LEAVE A REPLY

Please enter your comment!
Please enter your name here