ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ 84,390 ಕ್ಯೂಸೆಕ್ ನೀರು ನದಿಗೆ ಗುರುವಾರ ಹರಿಸಲಾಗಿದೆ. ಇದರಿಂದ ಹಂಪಿಯ ಪ್ರಮುಖ ಸ್ಮಾರಕಗಳು ಜಲಾವೃತವಾಗಿವೆ.
ಜಲಾಶಯದ ಮೇಲ್ಭಾಗದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಳ ಹರಿವು 1,06,510 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಜಲಾಶಯದ 16 ಕ್ರಸ್ಟ್ ಗೇಟ್‌ಗಳಿಂದ 84,390 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ತುಂಗಾ ಜಲಾಶಯ, ಭದ್ರಾ ಜಲಾಶಯ ಮತ್ತು ವರದಾ ನದಿಯಿಂದ ತುಂಗಭದ್ರಾ ಡ್ಯಾಂಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಜಲಾಶಯದ ಏಳು ಕ್ರೆಸ್ಟ್ ಗೇಟ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ಕುರಿತು ಮಾಹಿತಿಯನ್ನು ಕೇಂದ್ರ ಜಲ ಮಂಡಳಿ(ಸಿಡಬ್ಲ್ಯೂಸಿ) ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈಗಾಗಲೇ ತುಂಡಾದ ಕ್ರೆಸ್ಟ್ ಗೇಟ್ ಸಂಖ್ಯೆ 19ರ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಂಪಿ ಸ್ಮಾರಕಗಳು ಜಲಾವೃತ: ಹಂಪಿಯ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿ ವಿಧಾನ ನೇರವೇರಿಸುವ ಮಂಟಪ, ಕಾಲು ಸೇತುವೆ, ಚಕ್ರತೀರ್ಥ, ಕೋದಂಡರಾಮ ಸ್ವಾಮಿ ದೇವಾಲಯ, ನದಿ ತೀರದ ಸಾಲು ಮಂಟಪಗಳು, ಕೋಟಿಲಿಂಗ, ಕಂಪಭೂಪ ಮಾರ್ಗ ಸೇರಿದಂತೆ ವಿವಿಧ ಸ್ಮಾರಕಗಳು ಮತ್ತು ಮಂಟಪಗಳು ಜಲಾವೃತ ಆಗಿವೆ.
ಕೋದಂಡರಾಮ ದೇವಾಲಯಕ್ಕೆ ಅಚ್ಯುತದೇವರಾಯ ದೇವಾಲಯದ ಮಾರ್ಗ ಬಳಸಿ ಅರ್ಚಕರು ಆಗಮಿಸಿ ದೇವರ ಪೂಜೆ ನೆರವೇರಿಸುತ್ತಿದ್ದಾರೆ. ಹಂಪಿಯಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಸ್ಥಗಿತಗೊಳಿಸಲಾಗಿದೆ. ನದಿ ತೀರದಲ್ಲಿ ಪ್ರವಾಸಿಗರು ಎಚ್ಚರಿಕೆಯಿಂದ ಇರಲು ಸ್ಥಳೀಯ ಪೊಲೀಸರು ಸೂಚನೆ ನೀಡಿದ್ದಾರೆ.