ಪಿಎಂಎಫ್‍ಎಂಇ ಸಹಕಾರ: ಉದ್ಯಮಿಯಾಗಿ ಯಶಸ್ಸು ಕಂಡ ಉತ್ತರ ಕನ್ನಡ ಮಹಿಳೆ

0
96

ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ (ಪಿಎಂಎಫ್‍ಎಂಇ) ಸಹಕಾರ ಪಡೆದ ಉತ್ತರ ಕನ್ನಡದ ಮಹಿಳೆಯೊಬ್ಬರು ‘ದೀಕ್ಷಾ’ ಎಂಬ ಹೆಸರಿನ ಬ್ರಾಂಡ್ ರೂಪಿಸಿ, ಯಶಸ್ವಿ ಉದ್ಯಮಿಯಾಗಿದ್ದಾರೆ.

ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು, ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಮತ್ತು ಕೃಷಿ ಉದ್ಯಮಿಗಳಿಗೆ ಸಾಲ ಸೌಲಭ್ಯ, ತಾಂತ್ರಿಕ ಬೆಂಬಲ, ಮತ್ತು ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಮೂಲಕ ಬೆಂಬಲ ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆ ಜಾರಿಗೆ ತರಲಾಗಿದೆ.

ಈ ಯೋಜನೆ ಪ್ರಯೋಜನ ಪಡೆದು ತನ್ನದೇ ಆದ ಬ್ರಾಂಡ್ ರೂಪಿಸಿರುವ ಸಿದ್ದ್ದಾಪುರ ತಾಲ್ಲೂಕಿನ ಶಮೆಮನೆ ಗ್ರಾಮದ ಮಮತಾ ವಿನಾಯಕ ಭಟ್ಟ ಯಶಸ್ವಿ ಮಹಿಳಾ ಉದ್ಯಮಿಯಾಗಿ ಇತರ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.

ಯಶಸ್ವಿ ಉದ್ಯಮಿ: ಮಮತಾ ವಿನಾಯಕ ಭಟ್ಟ ಅವರು ವಾಣಿಜ್ಯ ಪದವೀಧರರಾಗಿದ್ದು, ನಾಲ್ಕು ವರುಷಗಳ ಕಾಲ ಶಿರಸಿಯ ಮಾರ್ಕೇಟಿಂಗ್ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ, ಅಲ್ಲಿ ನಿರ್ವಹಣಾ ಅನುಭವವನ್ನು ಸಂಪಾದಿಸಿದರು.

ಆ ಅವಧಿಯಲ್ಲಿ ಸಂಸ್ಥೆಯ ಸಿಇಓ ಅವರು ಮಮತಾ ಭಟ್ಟ ಅವರ ಸಾಮರ್ಥ್ಯವನ್ನು ಗುರುತಿಸಿ, ಗೃಹ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಿದರು. ಪ್ರಸ್ತುತ ತಮ್ಮ ಉದ್ಯಮಶೀಲ ಮನೋಭಾವದಿಂದ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಮಮತಾ ಮಾದರಿಯಾಗಿದ್ದಾರೆ.

ಹಲಸಿನ ಹಪ್ಪಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಅಸ್ಥಿರತೆ ಇದ್ದು, ಈ ಉತ್ಪನ್ನವನ್ನು ನಿಯಮಿತವಾಗಿ ಪೂರೈಕೆ ಮಾಡಿದರೆ, ನಮ್ಮ ಮಾರ್ಕೆಟಿಂಗ್ ಉತ್ತಮ ಬೆಲೆಗೆ ಖರೀದಿಸಲು ಸಿದ್ಧವಾಗಿದೆ ಎಂಬ ಶಿರಸಿಯ ಕದಂಬ ಮಾರ್ಕೇಟಿಂಗ್ ಸಂಸ್ಥೆಯ ಭರವಸೆಯು ಮಮತಾ ಭಟ್ಟ ಅವರಲ್ಲಿ ವಿಶ್ವಾಸ ತುಂಬಿ, ತಮ್ಮದೇ ಉದ್ಯಮ ಆರಂಭಿಸಲು ದಿಕ್ಕು ತೋರಿಸಿತು. ಮಾರ್ಕೆಟಿಂಗ್ ಬೆಂಬಲದ ನಂಬಿಕೆ ಹಾಗೂ ತಮ್ಮ ಉದ್ಯಮಶೀಲ ಮನೋಭಾವವು ಅವರನ್ನು ಆಹಾರ ಉದ್ಯಮದತ್ತ ಸೆಳೆದಿತು.

ಉದ್ಯಮ ವಿಸ್ತರಣೆಯ ದೃಷ್ಟಿಯಿಂದ 2022ರಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸಿವಿಕೆ ಯೋಜನೆಯಿಂದ ನೆರವು ದೊರೆಯಿತು. ಸಿದ್ದಾಪುರ ತಾಲ್ಲೂಕು ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ, ಹೊಸಗದ್ದೆ ಕೆನರಾ ಬ್ಯಾಂಕ್ ಶಾಖೆಯಿಂದ ರೂ.15 ಲಕ್ಷ ಸಾಲ ಪಡೆದು ಹಿಟ್ಟಿನ ಗಿರಣಿ, ಹುರಿಯುವ ಯಂತ್ರ, ಕರೆಂಟ್ ಡ್ರೈಯರ್, ಪ್ಯಾಕಿಂಗ್ ಯಂತ್ರ ಮುಂತಾದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಸ್ಥಾಪಿಸಲಾಯಿತು. ಜೊತೆಗೆ ರೂ. 3.75 ಲಕ್ಷ ಸಹಾಯಧನ ಸಹ ಲಭಿಸಿತು. ಇದರ ಫಲವಾಗಿ ಉತ್ಪಾದನಾ ಸಾಮರ್ಥವನ್ನು, ಉತ್ಪನ್ನಗಳ ಗುಣಮಟ್ಟ ಮತ್ತು ಮಾರುಕಟ್ಟೆ ತಕ್ಕಂತೆ ವಿಸ್ತರಣೆ ಸಾಧ್ಯವಾಯಿತು.

ಕೇವಲ ರೂ.10,000 ರೂ. ಬಂಡವಾಳದಿಂದ ಆರಂಭವಾದ ಚಿಕ್ಕ ಪ್ರಯತ್ನ, ಇಂದಿಗೆ ರೂ.35 ಲಕ್ಷಕ್ಕೂ ಅಧಿಕ ವಹಿವಾಟು ಸಾಧಿಸಿರುವ ‘ದೀಕ್ಷಾ’ ಬ್ರಾಂಡ್ ಆಗಿ ಬೆಳೆದಿದೆ. ಪ್ರಾರಂಭದಲ್ಲಿ ಕೇವಲ ಹಲಸಿನ ಹಪ್ಪಳ ತಯಾರಿಕೆಯಿಂದ ಮಾತ್ರ ಆರಂಭವಾದ ಈ ಉದ್ಯಮ, ಇಂದು ಕಷಾಯ ಪುಡಿ, ಹಲಸಿನಕಾಯಿ ಹಪ್ಪಳ, ಬಾಳೆಕಾಯಿ ಹಪ್ಪಳ, ಸೂಜು ಮೆಣಸು ಖಾರದ ಬಾಳೆ ಚಿಪ್ಸ್, ಸಬ್ಬಕ್ಕಿ ಸಂಡಿಗೆ ಮುಂತಾದ ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದೆ.

ಅಲ್ಲದೆ ಹಬ್ಬದ ಕಾಲದಲ್ಲಿ ಸ್ಥಳೀಯ ಮಹಿಳೆಯರೊಂದಿಗೆ ಸೇರಿ ಚಕ್ಕುಲಿ ಹಿಟ್ಟು, ಮಡೆ ಹಿಟ್ಟು, ಪಂಚಕಜ್ಜಾಯ, ಮೋದಕಗಳನ್ನು ಟನ್‌ಗಟ್ಟಲೇ ತಯಾರಿಸಿ ಶಿರಸಿಯ ಟಿ.ಎಸ್.ಎಸ್ ಗೆ ಪೂರೈಕೆ ಮಾಡಲಾಗುತ್ತದೆ. ಈ ಮೂಲಕ ಹತ್ತಾರು ಸ್ಥಳೀಯ ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸಲಾಗಿದೆ.

ಇಂದು ‘ದೀಕ್ಷಾ’ ಬ್ರಾಂಡ್ ಸ್ಥಳೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗುರುತನ್ನು ಗಳಿಸಿದ್ದು, ಮಮತಾ ಭಟ್ಟ ಅವರ ದೃಢ ಸಂಕಲ್ಪ, ಪರಿಶ್ರಮದ ಫಲವಾಗಿ ಯಶಸ್ಸಿನ ಮಾದರಿಯಾಗಿದೆ. ಅವರು ಸ್ಥಾಪಿಸಿರುವ ಉದ್ಯಮ ಕೇವಲ ಆರ್ಥಿಕ ಲಾಭವನ್ನಷ್ಟೇ ನೀಡದೆ, ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬನೆ ಮತ್ತು ಸಬಲೀಕರಣದ ದಾರಿಯನ್ನೂ ತೋರಿಸಿದೆ.

ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸಿವಿಕೆ ಯೋಜನೆಯ ಮೂಲಕ ಅರ್ಹ ಸಣ್ಣ ಉದ್ಯಮಿಗಳು, ಸ್ವಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು ಮತ್ತು ಸಹಕಾರಿ ಸಂಘಗಳಿಗೆ 50% ಸಹಾಯಧನ ಅಥವಾ ಗರಿಷ್ಠ ರೂ. 15 ಲಕ್ಷಗಳವರೆಗೆ ಸಾಲದ ಜೊತೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ದೊರೆಯುತ್ತದೆ.

ಜಿಲ್ಲೆಯಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಕೃಷಿ ಇಲಾಖೆಯ ಮೂಲಕ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಶಿವಪ್ರಸಾದ್ ಗಾಂವಕರ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉತ್ತರ ಕನ್ನಡ ಜಿಲ್ಲೆ.

Previous articleಬಿಹಾರ ಚುನಾವಣೆ: ಬಿಜೆಪಿ ಅಭ್ಯರ್ಥಿ ಆಗಲಿದ್ದಾರಾ ಮೋದಿ ಮೆಚ್ಚಿದ ಮೈಥಿಲಿ
Next articleವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಕರ್ನಾಟಕದಿಂದ ಸಂಸದ ಚೌಟ ಭಾಗಿ

LEAVE A REPLY

Please enter your comment!
Please enter your name here