NWKRTC ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅಭ್ಯರ್ಥಿಗಳಿಗಾಗಿ ಪ್ರಮುಖ ಮಾಹಿತಿ ಇಲ್ಲಿದೆ.
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದಲ್ಲಿ ಶಿಶಕ್ಷು (ಅಪ್ರೆಂಟಿಸ್) ಅಧಿನಿಯಮ 1961 ಕಾಯ್ದೆಯ ಪ್ರಕಾರ ಉತ್ತರ ಕನ್ನಡ ವಿಭಾಗಕ್ಕೆ ಸಂಬಂಧಪಟ್ಟಂತೆ ಖಾಲಿ ಸ್ಥಾನಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಗಣಕ ವೃತ್ತಿಗಳಲ್ಲಿ ಹಾಗೂ ಡಿಸೇಲ್ ಮೆಕ್ಯಾನಿಕ್, ಆಟೋ ಇಲೆಕ್ಟ್ರೀಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್, ಮೋಟರ್ ವೆಹಿಕಲ್ ಬಾಡಿ ಬಿಲ್ಡರ್ ಪೂರ್ಣ ಅವಧಿಯ ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.
ನಮೂನೆಯಲ್ಲಿ ಎಲ್ಲಾ ಮಾಹಿತಿಯನ್ನು ತುಂಬಿ ಜನ್ಮ ದಿನಾಂಕ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಇತ್ತೀಚಿನ ಪಾಸ್ ಪೋರ್ಟ್ ಸೈಜಿನ ಭಾವಚಿತ್ರವನ್ನು ಅಂಟಿಸಿ ಎಲ್ಲಾ ಮೂಲ ದಾಖಲೆಗಳೊಂದಿಗೆ ದಿನಾಂಕ 04/09/2025ರಂದು ಬೆಳಗ್ಗೆ 10ಗಂಟೆಗೆ ವಿಭಾಗೀಯ ನಿಯಂತ್ರಣಾಧಿಕಾರಿ ವಾ.ಕ.ರ.ಸಾ.ಸಂಸ್ಥೆ ಉತ್ತರ ಕನ್ನಡ ವಿಭಾಗ ಹುಬ್ಬಳ್ಳಿ ರಸ್ತೆ ಶಿರಸಿ ಇವರ ಸಮ್ಮುಖದಲ್ಲಿ ಸಂದರ್ಶನಕ್ಕೆ ಹಾಜರಾಗುವುದು.
ಖಾಲಿ ಇರುವ ಹುದ್ದೆಗಳು: ಶಿರಸಿ ಘಟಕ 7, ಕುಮಟಾ ಘಟಕ 6, ಕಾರವಾರ ಘಟಕ 4, ಭಟ್ಕಳ ಘಟಕ 6, ಅಂಕೋಲಾ ಘಟಕ 6, ಯಲ್ಲಾಪುರ ಘಟಕ 4 ಒಟ್ಟು 33 ಹುದ್ದೆಗಳು. ವೃತ್ತಿಗಳು ಡಿಸೇಲ್ ಮೇಕ್ಯಾನಿಕ್, ಆಟೋ ಇಲೆಕ್ಟ್ರೀಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್, ಮೋಟರ್ ವೆಹಿಕಲ್ ಬಾಡಿ ಬಿಲ್ಡರ್. ತರಬೇತಿ ಅವಧಿ 1 ವರ್ಷ. ಅರ್ಜಿ ಸಲ್ಲಿಸುವವರು ಸಂಬಂಧಿಸಿದ ವೃತ್ತಿಯಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.
ಶಿರಸಿ (ಘಟಕ ಪಿ.ಕಛೇರಿ, ವಿಭಾಗೀಯ ಕಾರ್ಯಾಗಾರ) 10, ಯಲ್ಲಾಪುರ ಘಟಕ 2, ಮುಂಡಗೋಡ ಘಟಕ 2 ಒಟ್ಟು 14 ಹುದ್ದೆಗಳು. ವೃತ್ತಿಗಳು ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟಂಟ್(COPA). ಅವಧಿ 1 ವರ್ಷ. ಸಂಬಂಧಿಸಿದ ವೃತ್ತಿಯಲ್ಲಿ ಐಟಿಐ ಕಂಪ್ಯೂಟರ್ ಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟಂಟ್ (COPA) ವಿದ್ಯಾರ್ಹತೆ.
ಶಿಶಿಕ್ಷು ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಆಧಾರ್ ಕಾರ್ಡ್ ಮತ್ತು ಇ-ಮೇಲ್ ಐಡಿಯನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು. ಅಭ್ಯರ್ಥಿಯ ಹೆಸರು ಮತ್ತು ಜನ್ಮ ದಿನಾಂಕದ ಮಾಹಿತಿಯು ಆಧಾರ್ ಕಾರ್ಡ್ ಹಾಗೂ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಎರಡರಲ್ಲೂ ಒಂದೇ ತೆರನಾಗಿರಬೇಕು. ಇಲ್ಲವಾದಲ್ಲಿ ಅಂತಹ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸಲಾಗುವುದು.
ವಯೋಮಿತಿ. ದಿನಾಂಕ 04/09/2025ರಂದು ಕನಿಷ್ಟ 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಟ ಪ.ಜಾ/ ಪ.ಪಂ/ ಪ್ರವರ್ಗ-1 ಅಭ್ಯರ್ಥಿಗೆ 40 ವರ್ಷ. ಪ್ರವರ್ಗ-2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು.
ಮೀಸಲಾತಿ ವಿವರ. ಪರಿಶಿಷ್ಟ ಜಾತಿಯವರೆಗೆ ಶೇ 17, ಪರಿಶಿಷ್ಟ ಪಂಗಡದವರಿಗೆ ಶೇ 07, ಪ್ರವರ್ಗ-1 ಶೇ4, 2ಎ ಶೇ 15, 2ಬಿ ಶೇ4, 3ಎ-4, 3ಬಿ ಶೇ 5, ಸಾಮಾನ್ಯ ಶೇ 44 ರಷ್ಟು ಸ್ಥಾನವನ್ನು ಪರಿಗಣಿಸಲಾಗುವುದು.(ಮೀಸಲಾತಿ ಬಯಸುವವರು ಹಾಗೂ ವಯೋಮಿತಿಯಲ್ಲಿ ಸಡಿಲಿಕೆ ಬಯಸುವವರು ಆಯಾ ವರ್ಗಕ್ಕೆ ಸಂಬಂಧಿಸಿದ ನಮೂನೆಗಳಲ್ಲಿ ಆಯಾ ತಾಲೂಕಾ ತಹಶೀಲ್ದಾರರಿಂದ ಪಡೆದ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು ಒಂದು ವೇಳೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸದೇ ಮೀಸಲಾತಿ ಬಯಸಿದ್ದಲ್ಲಿ ಪರಿಗಣಿಸಲಾಗುವುದಿಲ್ಲ).
ತರಬೇತಿ ಅವಧಿಯಲ್ಲಿ ಮಾಹೆಯಾನ ರೂ.7708 ಮತ್ತು ಜಿಲ್ಲಾ ಕೇಂದ್ರ ಕಾರವಾರ ಜಿಲ್ಲಾ ಪ್ರದೇಶಕ್ಕೆ ರೂ. 8093 ತರಬೇತಿ ಭತ್ಯೆ ನೀಡಲಾಗುವುದು. ತರಬೇತಿಗಾಗಿ ಆಯ್ಕೆ ಹೊಂದಿದ ಅಭ್ಯರ್ಥಿಗಳನ್ನು ವಿಭಾಗದ ಇತರೆ ಘಟಕಕ್ಕೆ ತರಬೇತಿ ಸ್ಥಳ ಬದಲಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ.
ಮೇಲಿನ ಖಾಲಿಸ್ಥಾನಗಳಲ್ಲಿ ಅವಶ್ಯಕತೆ ಅನುಸಾರ ಬದಲಾಯಿಸುವ ಹಕ್ಕನ್ನು ಕಾಯ್ದಿರಿಸಲಾಗಿದೆ. ಹಾಗೂ ಕರೆಮಾಡಲಾದ ವೃತ್ತಿಗಳಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಇತರೆ ವೃತ್ತಿಗಳ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.
ಷರತ್ತು ಮತ್ತು ನಿಭಂದನೆಗಳು
- ಈಗಾಗಲೇ ಶಿಶಿಕ್ಷು (ಅಪ್ರೆಂಟಿಸ್) ಅಧಿನಿಯಮ 1961 ರನ್ವಯ ಯಾವುದೇ ವೃತ್ತಿಯಲ್ಲಿ ಶಿಶಿಕ್ಷು ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಅಪೂರ್ಣ ಮಾಹಿತಿ ಹಾಗೂ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಅರ್ಜಿ ತಿರಸ್ಕರಿಸಲಾಗುತ್ತದೆ.
- ಒಂದಕ್ಕಿಂತ ಹೆಚ್ಚು ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದ್ದಲ್ಲಿ ಅಂಥವರು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕು.ತರಬೇತಿಗೆ ಆಯ್ಕೆಗೊಂಡ ಅಭ್ಯರ್ಥಿಗಳು ದೈಹಿಕ ಅರ್ಹತೆ ಪಡೆದಿರಬೇಕು. ತರಬೇತಿಗಾಗಿ ಹಾಜರಾಗುವಾಗ ಸರಕಾರಿ ವೈದ್ಯಧಿಕಾರಿಯಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.
- ತರಬೇತಿಗೆ ಆಯ್ಕೆಗೊಂಡು ತರಬೇತಿ ಪಡೆಯುವ ಅಭ್ಯರ್ಥಿಗಳು ತಮ್ಮ ಅವಧಿ ಮುಗಿಸಿದ ನಂತರ ಸಂಸ್ಥೆಯು ಅವರಿಗೆ ಕೆಲಸ ಒದಗಿಸುವ ಬಗ್ಗೆ ಯಾವುದೇ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ. ತರಬೇತಿ ಪಡೆಯಲು ಅರ್ಹರಾದವರು ಶಿಶಿಕ್ಷು ಕಾಯಿದೆ 1961ರ ನಿಯಮಾವಳಿಗಳು/ ನಿಬಂಧನೆ ಹಾಗೂ ಷರತ್ತುಗಳಿಗೆ ಒಳಪಡಬೇಕಾಗುತ್ತದೆ.
- ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಜಾಹೀರಾತಿಗೆ ಸಂಭಂಧಿಸಿದಂತೆ ನಡೆಸಲಾಗುವ ಮೌಖಿಕ ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕಾಗುತ್ತದೆ. ಹಾಗೂ ಆಯ್ಕೆ ಕುರಿತಂತೆ ಯಾವುದೇ ರೀತಿಯ ಶಿಫಾರಸ್ಸು ಅಥವಾ ಒತ್ತಡಗಳಿಗೆ ಆಸ್ಪದ ಇರುವುದಿಲ್ಲ.
- ಶಿಶಿಕ್ಷು ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ/ ಆಧಾರ್ ಕಾರ್ಡ ಪ್ರತಿ/ ಇ-ಮೇಲ್ ವಿಳಾಸದ ದಾಖಲೆಗಳನ್ನು ಹೊಂದಿರಬೇಕು ಹಾಗೂ ರಾಷ್ಟ್ರೀಕೃತ ಬ್ಯಾಂಕಿನ ಖಾತೆಯನ್ನು ಹೊಂದಿರಬೇಕು. ಸದರಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆಯಾಗಿರಬೇಕು.


























