ಕಾರವಾರ: ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ವಿವಾದಗಳಲ್ಲಿ ಸಿಲುಕುತ್ತಿರುವ ಯೂಟ್ಯೂಬರ್ ಮುಕಳೆಪ್ಪ (Youtuber Mukaleppa) ಅವರ ವಿವಾಹ ನೋಂದಣಿ ಪ್ರಕರಣ ಇದೀಗ ಭಾರೀ ತಿರುವು ಪಡೆದಿದೆ. ಮುಕಳೆಪ್ಪ ನಕಲಿ ದಾಖಲೆ ನೀಡಿ ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕಾರವಾರ ಲೋಕಾಯುಕ್ತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ.
ಶ್ರೀರಾಮ ಸೇನೆ ಹಾಗೂ ಗಾಯತ್ರಿ ತಾಯಿ ಶಿವಕ್ಕ ಅವರು ಸಲ್ಲಿಸಿದ ಅಧಿಕೃತ ದೂರು ಆಧಾರವಾಗಿ, ಕಾರವಾರದ ಲೋಕಾಯುಕ್ತ ಡಿವೈಎಸ್‌ಪಿ ಧನ್ಯ ನಾಯಕ್ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ವಿವಾಹ ನೋಂದಣಾಧಿಕಾರಿ ಕಚೇರಿಗೆ ದಾಳಿ ನಡೆಸಲಾಯಿತು. ಈ ದಾಳಿಯ ವೇಳೆ ಕಚೇರಿಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಕಲಿ ದಾಖಲೆಗಳ ಬಳಕೆಯ ಬಗ್ಗೆ ತೀವ್ರ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ದೂರು ಪ್ರಕಾರ, ಮುಂಡಗೋಡು ಕಚೇರಿಯಲ್ಲಿ ನಿಯಮ ಉಲ್ಲಂಘಿಸಿ ಮತ್ತು ನಕಲಿ ದಾಖಲೆ ಆಧಾರದ ಮೇಲೆ ವಿವಾಹ ನೋಂದಣಿ ಮಾಡಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಕಾರವಾರ, ಕುಮಟಾ, ಶಿರಸಿ, ಸಿದ್ದಾಪುರ, ಹಳಿಯಾಳ, ಜೋಯಿಡಾ ಹಾಗೂ ಯಲ್ಲಾಪುರ ಸೇರಿದಂತೆ ಜಿಲ್ಲೆಯ ಇತರ ವಿವಾಹ ನೋಂದಣಾಧಿಕಾರಿ ಕಚೇರಿಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ತಂಡಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಅಕ್ರಮದ ಮಟ್ಟವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ. ಈ ಕ್ರಮದಿಂದ ಜಿಲ್ಲಾದ್ಯಂತ ನೋಂದಣಾಧಿಕಾರಿ ಕಚೇರಿಗಳ ಕಾರ್ಯವೈಖರಿಯ ಮೇಲೆ ಪ್ರಶ್ನೆ ಚಿಹ್ನೆ ಮೂಡಿದೆ.

























