ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಅಸ್ಕಲಕಟ್ಟಾ ಗ್ರಾಮದಿಂದ ದಾಂಡೇಲಿ ತಾಲೂಕಿನ ಆಲೂರು ಗ್ರಾಮದವರೆಗಿನ ರಸ್ತೆಯನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಿಸದೆ 3 ಕೋಟಿ 20 ಲಕ್ಷ46 ಸಾವಿರ ರೂಪಾಯಿ ಬಿಲ್ ಮಾಡಿ, ಸುಳ್ಳು ದಾಖಲೆ ಸೃಷ್ಠಿಸಿ ಅಧಿಕಾರಿಗಳಿಂದ ಪೋರ್ಜರಿ, ವಂಚನೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೇಂದ್ರ ಸರ್ಕಾರದ ಹಣ ದುರುಪಯೋಗ ಪಡಿಸಿ ಭೃಷ್ಠಾಚಾರ ಎಸಗಿರುವುದರ ಕುರಿತು ಗ್ರಾಮಸ್ಥರು ಸಿ.ಬಿ.ಐ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಜಾರಿಯಲ್ಲಿ ತಂದಿದೆ.
ಇದು ಸಂಪೂರ್ಣ ಪ್ರತಿಶತ ಶೇ.100 ರಷ್ಟು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿರುತ್ತದೆ. ರಾಜ್ಯ ಸರ್ಕಾರವು ಗ್ರಾಮೀಣ ರಸ್ತೆಗಳ ಸುಧಾರಣೆಗೆ ಆದ್ಯತೆ ಉದ್ದೇಶದಿಂದ 2009ರಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮಾರ್ಗಸೂಚಿಯಂತೆ ಕಾರ್ಯಕ್ರಮ ಪ್ರಾರಂಭಿಸಿದೆ.
ಈ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಈ ರಸ್ತೆ ಕಾಮಗಾರಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುಧಾನವನ್ನು ಪಾರದರ್ಶಕವಾಗಿ ಬಳಸುವದು, ನಿರ್ವಹಣೆ ಮಾಡುವದು ಪಿ.ಎಂ.ಜಿ.ಎಸ್.ವೈ. ಮತ್ತು ಪಂಚಾಯತರಾಜ್ ಇಂಜಿನೀಯರಿಂಗ್ ಇಲಾಖೆಯದ್ದಾಗಿದೆ. ಈ ಜವಾಬ್ದಾರಿಯನ್ನು ನಿರ್ವಹಿಸಬೇಕಾದವರೇ ರಸ್ತೆ ನಿರ್ಮಿಸದೆ ಸುಳ್ಳು ದಾಖಲೆ ಸೃಷ್ಠಿಸಿ ಕೋಟ್ಯಾಂತರ ರೂಪಾಯಿ ಕಬಳಿಸಿದ್ದಾರೆ.
ಅಸ್ಕಲಕಟ್ಟಾ – ಆಲೂರು ರಸ್ತೆ ಗಾಂಧಿ ಪಥ ಗ್ರಾಮ ಪಥದ ವರದಿ ಬಾರ್ ಚಾರ್ಟ ಪ್ರಕಾರ ಯೋಜನೆ ಕಾಮಗಾರಿ ಪ್ಯಾಕೇಜ್ ಐಡಿ 14031 ಪ್ಯಾಕೇಜ್ ನಂ.ಕೆ.ಎನ್. 27-56 ಅ ಸ್ಕಲಕಟ್ಟಾ – ಆಲೂರು 3.8 ಕಿ.ಮೀಟರ ರಸ್ತೆ ಇರುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದನ್ನು ರಾಜ್ಯ ಗುಣ ನಿಯಂತ್ರಕರು ಒಪ್ಪಿದ್ದು, ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗಾಂಧಿ ಸಾಕ್ಷಿ ಕಾಯಕದಲ್ಲಿ ಪಂಚತಂತ್ರದ ತಂತ್ರಾಂಶ ಅವತರಣಿಕೆಯಲ್ಲಿ ಕಾಮಗಾರಿ ವಿವರಗಳನ್ನು ಇಂಡಿಕರಿಸಿ, ಆರೋಹ ಮಾಡಲಾಗಿದೆ.
ಈ ಕಾಮಗಾರಿ ರಸ್ತೆ ಡಾಂಬರೀಕರಣ ಸಮೇತ 3 ಕೋಟಿ 20 ಲಕ್ಷ 46 ಸಾವಿರ ರೂಪಾಯಿ ಅಂತಾ ಬಿಲ್ಲುಗಳ ವಿವರ ನಮೂದಿಸಿ ಖರ್ಚು ಹಾಕಿ ಪಡೆದಿರುತ್ತಾರೆ. ಆದರೆ ಅಲ್ಲಿ ರಸ್ತೆಯೇ ಇಲ್ಲ. ರಸ್ತೆ ಹಾದು ಹೋಗುವ ಜಾಗೆಯಲ್ಲಿ ಕಬ್ಬು ಬೆಳೆಯಲಾಗಿದೆ. ಈ ರಸ್ತೆ ನಿರ್ಮಾಣವಾಗಿದ್ದರೆ ರೈತರ ಉತ್ಪನ್ನಗಳನ್ನು ಹಳಿಯಾಳ, ದಾಂಡೇಲಿಗೆ ಸಾಗಿಸಲು ಅನುಕೂಲವಾಗಲಿದೆ.
ರೈತರ ಈ ರಸ್ತೆಯ ನಿರ್ಮಾಣಕ್ಕಾಗಿ ಆಗ್ರಹಿಸಿದಾಗ ರಸ್ತೆ ನಿಮಿ೯ಸದೇ ಅಧಿಕಾರಿಗಳು ಕೇಂದ್ರ ಸರ್ಕಾರದ ಯೋಜನೆಯಡಿ 2014ರಿಂದ 2016ರಲ್ಲಿ ರಸ್ತೆ ನಿರ್ಮಿಸಿದ್ದಾಗಿ ನಂತರದ 5 ವರ್ಷ ನಿರ್ವಹಣೆ ಮಾಡಿ 6 ನೇ ವರ್ಷ ಮರು ಡಾಂಬರೀಕರಣ ಮಾಡಿ ಪಂಚಾಯತ್ ರಾಜ್ ಇಲಾಖೆ ಹಳಿಯಾಳ ಉಪವಿಭಾಗಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿ ಮಾಡಿದೆ.
ಈಗ ಅಸ್ಕಲಕಟ್ಟಾ, ಆಲೂರು ಗ್ರಾಮಸ್ಥರು ಈ ರಸ್ತೆ ಎಲ್ಲಿದೆ ಎಂದು ಪಂಚಾಯತರಾಜ್ ಅಧಿಕಾರಿಗಳು ತೋರಿಸಿಕೊಟ್ಟಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಗುವದೆಂದು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕಿದೆ.