ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಶರಾವತಿ ಪಂಪ್ಡ್ ಯೋಜನೆ, ಕೇಣಿ ಬಂದರು ಯೋಜನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಇದೀಗ ಮತ್ತೊಂದು ಯೋಜನೆಯ ಪ್ರಸ್ತಾಪ ಸುದ್ದಿಯಾಗುತ್ತಲಿದೆ. ಜಿಲ್ಲೆಯ ಅಘನಾಶಿನಿ ನದಿ ಮತ್ತು ಚಿತ್ರದುಗ೯ ಜಿಲ್ಲೆಯ ವೇದಾವತಿ ನದಿ ತಿರುವು ಯೋಜನೆ ಸದ್ದಾಗತೊಡಗಿದೆ.
ಈಗಾಗಲೇ ನೀರಾವರಿ ಇಲಾಖೆಯ ಉದ್ದೇಶಿತ ನದಿ ಜೋಡಣೆಯ ಪೂರ್ವ ಸಾಧ್ಯತಾ ವರದಿಯ ಮಾಹಿತಿ ಲಭ್ಯವಾಗಿದೆ ಎಂದು ಶಿರಸಿಯ ವೃಕ್ಷ ಲಕ್ಷ ಅಂದೋಲನ ಅಧ್ಯಕ್ಷರಾಗಿರುವ ಅನಂತ ಹೆಗಡೆ ಆಶೀಸರ ಬಹಿರಂಗ ಪಡಿಸಿದ್ದಾರೆ. ಈ ಕುರಿತಂತೆ ಮುಂದಿನ ದಿನಗಳಲ್ಲಿ ಸಮಾಲೋಚನಾ ಸಭೆ ನಡೆಸಿ ಹೋರಾಟ ಮಾಡುವ ಕುರಿತು ನಿರ್ಧರಿಸುವುದಾಗಿ ಹೇಳಿದ್ದಾರೆ.
ಈ ಯೋಜನೆ ಎತ್ತಿನಹೊಳೆ ಯೋಜನೆಗಿಂತ ದೊಡ್ಡದಾದ ಯೋಜನೆಯಾಗಿದ್ದು, ಈ ಯೋಜನೆ ಜಾರಿಯಿಂದ 1 ಲಕ್ಷ 20 ಸಾವಿರ ಮರಗಳು ನಾಶ ಆಗಲಿದೆ. 60 ಎಕರೆ ಅರಣ್ಯ ಭೂಮಿ ಯೋಜನೆಗೆ ಬೇಕಿದೆ. ಶಿರಸಿ ಮತ್ತು ಸಾಗರ ಅರಣ್ಯ ವಿಭಾಗಗಳ ಕಾಡು ನಾಶವಾಗಲಿದೆ.
ಅಘನಾಶಿನಿ ಕಣಿವೆ ಪ್ರದೇಶವನ್ನು 2012 ವನ್ಯಜೀವಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾಗಿದೆ. ಈ ಯೋಜನೆ ಜಾರಿಯಾದಲ್ಲಿ ಶಿರಸಿ, ಕುಮಟಾ ಪಟ್ಟಣ ಮತ್ತು ಕುಮಟಾ ತಾಲೂಕಿನ ಬಹು ಗ್ರಾಮ ಯೋಜನೆಗೆ ಹಾಗೂ 1 ಲಕ್ಷ ರೈತರ ಪಂಪ್ ಸೆಟ್‌ಗಳಿಗೆ ನೀರು ಒದಗಿಸುವ ಆಘನಾಶಿನಿ ನದಿಗೆ ನದಿ ತಿರುವು ಯೋಜನೆ ಕಂಟಕವಾಗಲಿದೆ.
ಅಘನಾಶಿನಿ ಕಣಿವೆ ಭೂಕುಸಿತ ಸೂಕ್ಷ್ಮ ಪ್ರದೇಶವಾಗಿದೆ. ಯೋಜನೆ ಜಾರಿಯಾದಲ್ಲಿ ಭೂಕುಸಿತಕ್ಕೆ ಕಾರಣವಾಗಲಿದೆ. ಈ ನದಿಯ ನೀರನ್ನೇ ಅವಲಂಭಿಸಿ ಬದುಕುತ್ತಿರುವ ಮೀನುಗಾರರು ಮತ್ತು ರೈತರ ಬದುಕು ಕಸಿಯಲಿದೆ ಎಂದು ಅನಂತ ಹೆಗಡೆ ಆಶೀಸರ ಮಾಹಿತಿ ನೀಡಿದ್ದಾರೆ.
ಯೋಜನಾ ವಿವರ: ಅಘನಾಶಿನಿ ನದಿಯನ್ನು ಚಿತ್ರದುರ್ಗ ಜಿಲ್ಲೆಯ ವೇದಾವತಿ ನದಿಗೆ ಜೋಡಿಸುವ ಯೋಜನೆ ಇದಾಗಿದೆ. ಅಘನಾಶಿನಿ ನದಿಗೆ ಸಿದ್ದಾಪುರದ ಬಾಳೆಕೊಪ್ಪ ಬಳಿ ಅಣೆಕಟ್ಟು ನಿರ್ಮಿಸಿ ನೀರನ್ನು ವೇದಾವತಿ ನದಿ ಜಲಾಶಯಕ್ಕೆ ಸಾಗಿಸುವ ಬೃಹತ್ ಯೋಜನೆ ಇದಾಗಿದೆ.
ಬಾಳೆಕೊಪ್ಪ ಬಳಿ ಅಘನಾಶಿನಿಯಿಂದ ನೀರು ಪಂಪ್ ಮಾಡಿ ಗೋಳಿಮಕ್ಕಿ, ಹಾರ್ಸಿಕಟ್ಟಾ, ಸಿದ್ದಾಪುರ, ಸಾಗರ, ಶಿವಮೊಗ್ಗ, ತರಿಕೆರೆ, ಅಜ್ಜಂಪುರ ಮಾರ್ಗವಾಗಿ ವಾಣಿವಿಲಾಸ ಜಲಾಶಯಕ್ಕೆ ನೀರು ತುಂಬಿಸುವ ಅತಿ ದೊಡ್ಡ ಯೋಜನೆ ಇದಾಗಿದೆ.
ಈಗಾಗಲೇ ಯೋಜನೆಗೆ ರಾಜ್ಯ ಸರಕಾರದ ಮನವಿಯ ಮೇರೆಗೆ ರಾಷ್ಟ್ರೀಯ ಜಲ ಮಂಡಳಿ ಅಭಿವೃದ್ಧಿ ಸಂಸ್ಥೆ ಪೂರ್ವ ಸಾಧ್ಯತಾ ವರದಿಯನ್ನು ತಯಾರಿಸಿದೆ ಎಂದು ಮಾಹಿತಿ ನೀಡಿದ್ದಾರೆ.