ಶಿವಮೊಗ್ಗ: ಶರಾವತಿ ನದಿಗೆ ಬಾಗಿನ ಅರ್ಪಿಸುವ ಮೂಲಕ ಸಿಗಂದೂರು ಸೇತುವೆಯನ್ನು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಪ್ರಹ್ಲಾದ ಜೋಶಿ ಲೋಕಾರ್ಪಣೆಗೊಳಿಸಿದರು.
ಸೋಮವಾರ ಮಧ್ಯಾಹ್ನ 12 ಗಂಟೆ 20 ನಿಮಿಷಕ್ಕೆ ಸೇತುವೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದ ಕೇಂದ್ರ ಸಚಿವರು ಗಣಪತಿ ಹೋಮ ಹಾಗೂ ದೇವಿ ಪೂಜೆ ಪೂಜೆಯಲ್ಲಿ ಪಾಲ್ಗೊಂಡು ಆರತಿ ಬೆಳಗಿದರು. ನಂತರ ಶರಾವತಿ ಹಿನ್ನೀರಿಗೆ ಬಾಗಿನ ಅರ್ಪಿಸುವ ಮೂಲಕ ಸೇತುವೆ ಉದ್ಘಾಟನೆಯನ್ನು ಅಧಿಕೃತಗೊಳಿಸಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರ ಮತ್ತಿತರರು ಇದ್ದರು.
ಸಚಿವ ಜಾರಕಿಹೊಳಿ, ಶಾಸಕರ ಗೈರು:
ರಾಜಕೀಯ ಜಟಾಪಟಿ ನಡುವೆ ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಗೈರು ಹಾಜರಾಗಿದ್ದರು. ಜೊತೆಗೆ ಶಾಸಕ ಗೋಪಾಲಕೃಷ್ಣ, ಸಚಿವ ಮಧು ಬಂಗಾರಪ್ಪ ಕೂಡಾ ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.
ಸೇತುವೆ ಉದ್ಘಾಟನೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವಲ್ಲಿ ಶಿಷ್ಟಾಚಾರ ಪಾಲನೆ ಆಗಿಲ್ಲ, ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು.
ಮತ್ತೊಂದೆಡೆ ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇತುವೆಯನ್ನು ವೀಕ್ಷಿಸಿ, ಸಮಾರಂಭದಲ್ಲಿ ಪಾಲ್ಗೊಳ್ಳದೆ ಶಿವಮೊಗ್ಗದ ಕಡೆ ತೆರಳಿದರು.
ಈ ಸೇತುವೆ ಎರಡೂ ಸರ್ಕಾರಗಳಿಗೂ ಪ್ರತಿಷ್ಠೆಯ ವಿಷಯವಲ್ಲ. ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಯೋಗದೊಂದಿಗೆ ಹೋಗಬೇಕು. ಶಿಷ್ಟಾಚಾರ ಪಾಲಿಸುವಲ್ಲಿ ಲೋಪವಾಗಿದೆ ಎಂದು ಸಚಿವ ಜಾರಕಿಹೊಳಿ ಮಾಧ್ಯಮಗಳಿಗೆ ತಿಳಿಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸೇತುವೆ ವಿಷಯದಲ್ಲಿ ರಾಜಕೀಯ ಮಾಡಬೇಡಿ, ಆ ಭಾಗದ ಜನರಿಗೆ ಏನು ಮಾಡಬೇಕೋ ಅದನ್ನು ಮಾಡಿ ಹೋಗಿ. ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಕರೆದು ಸೇತುವೆ ಉದ್ಘಾಟನೆ ಮಾಡಿಸುತ್ತೇವೆ. ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂ.ಗಳನ್ನು ಕೊಟ್ಟಿದ್ದೇವೆ. ನಾನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದರು.