ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಮಾನಹಾನಿಕರ ಆರೋಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಬ್ರಹ್ಮಾವರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹಿರಿಯಡ್ಕ ಜೈಲಿನಲ್ಲಿಡಲಾಗಿದೆ.
ಸುದೀರ್ಘ ಪೊಲೀಸ್ ವಿಚಾರಣೆ ಬಳಿಕ ಬ್ರಹ್ಮಾವರ ಪೊಲೀಸರು ಗುರುವಾರ ಸಂಜೆ ವೇಳೆಗೆ ತಿಮರೋಡಿಯನ್ನು ಬ್ರಹ್ಮಾವರದ ಸಂಚಾರಿ ಪೀಠದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುವ ನ್ಯಾಯಾಧೀಶರು ಆ.23ರಂದು ಜಾಮೀನು ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದಾರೆ.
ಯೂಟ್ಯೂಬರ್ ಸಮೀರ್‌ಗೆ ನಿರೀಕ್ಷಣಾ ಜಾಮೀನು: ಧರ್ಮಸ್ಥಳ ವಿರುದ್ಧ ವಿಡಿಯೋ ಮೂಲಕ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾಧ ಕೃತ್ಯಗಳ ಕುರಿತು AI ವಿಡಿಯೋ ಮಾಡಿ, ಬಂಧನ ಭೀತಿಯಲ್ಲಿದ್ದ ಯುಟ್ಯೂಬರ್ ಎಂಡಿ ಸಮೀರ್‌ಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಿವಿಧಡೆ ಪ್ರಕರಣ ದಾಖಲು : ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣದ ಬಗ್ಗೆ ಪ್ರಚೋದನಕಾರಿ ವಿಡಿಯೋ ಮಾಡಿದ್ದ ಯೂಟ್ಯೂಬರ್ ಎಂಡಿ ಸಮೀರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ 12ರಂದು ಸಮೀರ್ ವಿರುದ್ಧ ಸುಮೋಟೋ ಕೇಸ್ ಪ್ರಕರಣ ದಾಖಲಾಗಿತ್ತು. ಸಮೀರ್ ಎಐ ಬಳಸಿ ತಪ್ಪು ಮಾಹಿತಿ ಹರಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ ಧರ್ಮಸ್ಥಳ ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಮೀರ್‌ನನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಇನ್ನು ಇತ್ತೀಚೆಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು.
ಸಮೀರ್‌ನನ್ನು ವಶಕ್ಕೆ ಪಡೆಯಲು ಧರ್ಮಸ್ಥಳ ಪೊಲೀಸರು ಇಂದು ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್ ಮನೆಯನ್ನು ಪೊಲೀಸರು ಸುತ್ತುವರಿದ ಹಿನ್ನೆಲೆಯಲ್ಲಿ ಆತ ಅಲ್ಲಿಂದ ಪರಾರಿಯಾಗಿದ್ದ. ಇದೀಗ ನಿರೀಕ್ಷಣಾ ಮಂಜೂರಾಗಿದೆ. ಪೊಲೀಸರು ಈ ಹಿಂದೆ ನೋಟಿಸ್ ಕೊಟ್ಟಿದ್ದರೂ ಸಮೀರ್ ವಿಚಾರಣೆಗೆ ಹಾಜರಾಗಿರಲಿಲ್ಲ. ಜನರನ್ನು ಪ್ರಚೋದಿಸುತ್ತಿದ್ದಾನೆ ಎಂದು ಆತನ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ, ಆಗಸ್ಟ್ 19 ರಂದು ಜಾಮೀನು ಕೋರಿ ಸಮೀರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ, ಇಂದು ಆರೋಪಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಇದರೊಂದಿಗೆ ಸಮೀರ್ ಬಂಧನದಿಂದ ಪಾರಾಗಿದ್ದಾರೆ.
ಬೆಳ್ತಂಗಡಿ ಪೊಲೀಸರಿಗೆ ಪತ್ರ: ಬಂಧನ ಭೀತಿಯಲ್ಲಿದ್ದ ಯೂಟ್ಯೂಬರ್ ತನ್ನ ಮೇಲೆ ಆಗಿರುವ ಎಫ್ಐಆರ್ ಪ್ರಕರಣಕ್ಕೆ ಪತ್ರವನ್ನು ಬರೆದಿದ್ದಾನೆ ಎನ್ನಲಾಗಿದೆ. ನಾನು ಧರ್ಮಸ್ಥಳ ಠಾಣೆಗೆ ಬರಲು ಸಿದ್ಧವಾಗಿದ್ದೆ, ಆದರೆ ನನ್ನ ಸ್ನೇಹಿತರ ಮೇಲೆ ಮಾರಣಾಂತಿಕವಾಗಿ ಹಲ್ಲೆಯಾಗಿದೆ. ಟಾರ್ಗೆಟ್ ಮಾಡಿ ಯೂಟ್ಯೂಬ್ ಸ್ನೇಹಿತರಿಗೆ ಹಲ್ಲೆ ಮಾಡಿದ್ದಾರೆ. ನನಗೆ ಪ್ರಾಣ ಬೆದರಿಕೆ ಇದೆ ಹಾಗೂ ಅಪಾಯವಿದೆ ಎಂದು ತಿಳಿದು ನಾನು ಸೆಷನ್ ನ್ಯಾಯಾಲಯದಲ್ಲಿ ಜಾಮಿನಿಗೆ ಅಪ್ಲೈ ಮಾಡಿದ್ದೇನೆ, ನಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ತನಿಖೆಗೆ ಸಹಕರಿಸುತ್ತೇನೆ. 15 ದಿನಗಳ ಕಾಲಾವಕಾಶದ ಒಳಗಡೆ ನಿಮ್ಮ ಮುಂದೆ ಹಾಜರಾಗುತ್ತೇನೆ ದಯವಿಟ್ಟು ನನಗೆ ರಕ್ಷಣೆ ನೀಡಿ ಎಂದು ಬರೆದಿದ್ದಾರೆ ಎನ್ನಲಾಗಿದೆ.