ಉಡುಪಿಯ ಕೃಷ್ಣನ ಅಂಗಳಕ್ಕೆ ಪ್ರಧಾನಿ ಮೋದಿ: ಕಡಲ ತಡಿಯಲ್ಲಿ ಕೇಸರಿ ಸಂಭ್ರಮ!

0
12

ದಕ್ಷಿಣದ ದ್ವಾರಕೆ ಎಂದೇ ಖ್ಯಾತವಾಗಿರುವ ಉಡುಪಿಯ ರಥಬೀದಿ ಇಂದು ಅಕ್ಷರಶಃ ಕೇಸರಿ ಬಣ್ಣಕ್ಕೆ ತಿರುಗಿದೆ. ಎಲ್ಲಿ ನೋಡಿದರೂ ಮೋದಿಯವರ ಮುಖವಾಡ, ಕೇಸರಿ ಪೇಟ ಮತ್ತು ಶಾಲು ಹೊದ ಸಾವಿರಾರು ಅಭಿಮಾನಿಗಳು ಪ್ರಧಾನಿಯವರ ಆಗಮನಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕ್ಷಣಗಣನೆ ಮಾಡುತ್ತಿದ್ದಾರೆ.

ಮಂಗಳೂರಿನ ಬಜಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯುಪಡೆಯ ವಿಶೇಷ ವಿಮಾನದಲ್ಲಿ ಬಂದಿಳಿದ ಪ್ರಧಾನಿ ಮೋದಿ, ಅಲ್ಲಿಂದ ಸೇನಾ ಹೆಲಿಕಾಪ್ಟರ್ ಮೂಲಕ ಉಡುಪಿಯ ಆದಿಉಡುಪಿ ಹೆಲಿಪ್ಯಾಡ್‌ಗೆ ಆಗಮಿಸುತ್ತಿದ್ದಂತೆ ಕರಾವಳಿಯಲ್ಲಿ ಸಂಭ್ರಮ ಮುಗಿಲುಮುಟ್ಟಿದೆ.

ಸಿಟಿ ಬಸ್ ನಿಲ್ದಾಣದಿಂದ ಆರಂಭವಾಗುವ ಪ್ರಧಾನಿಯವರ ರೋಡ್ ಶೋ ರಥಬೀದಿಯವರೆಗೆ ಸಾಗಲಿದ್ದು, ಜನಸಾಗರವೇ ಹರಿದುಬರುವ ನಿರೀಕ್ಷೆಯಿದೆ. ಇಂದಿನ ಭೇಟಿಯ ಪ್ರಮುಖ ಆಕರ್ಷಣೆ ಎಂದರೆ ಐತಿಹಾಸಿಕ ‘ಕನಕನ ಕಿಂಡಿ’ಯ ಲೋಕಾರ್ಪಣೆ.

ನೂತನವಾಗಿ ಚಿನ್ನದ ಕವಚವನ್ನು ಅಳವಡಿಸಲಾಗಿರುವ, ಸ್ವರ್ಣ ಖಚಿತ ಕನಕನ ಕಿಂಡಿಯ ಮೂಲಕವೇ ಪ್ರಧಾನಿಯವರು ಶ್ರೀಕೃಷ್ಣನ ದಿವ್ಯ ದರ್ಶನ ಪಡೆಯಲಿದ್ದಾರೆ. ಇದಾದ ಬಳಿಕ ಅಷ್ಟಮಠಾಧೀಶರೊಂದಿಗೆ ಸಮಾಲೋಚನೆ ನಡೆಸಲಿದ್ದು, ಮಠದ ಆವರಣದಲ್ಲಿ ವೈದಿಕರಿಂದ ವೇದ, ಉಪನಿಷತ್ತುಗಳ ಪಠಣ ಮೊಳಗಲಿದೆ.

ನಂತರ ಗೀತಾ ಮಂದಿರಕ್ಕೆ ತೆರಳಲಿರುವ ನರೇಂದ್ರ ಮೋದಿ, ಅಲ್ಲಿ ನೂತನವಾಗಿ ನಿರ್ಮಿಸಲಾದ ಅನಂತಪದ್ಮನಾಭ ದೇವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ವಿಶೇಷವೆಂದರೆ, ಪ್ರಧಾನಿಯವರು ಕೆಲಕಾಲ ಧ್ಯಾನ ಮಂದಿರದಲ್ಲಿ ಧ್ಯಾನಸ್ಥರಾಗಲಿದ್ದು, ಬಳಿಕ ಗೀತಾ ಮಂದಿರದಲ್ಲೇ ತುಳುನಾಡಿನ ಸಾಂಪ್ರದಾಯಿಕ ಶೈಲಿಯ ಲಘು ಉಪಹಾರ ಸೇವಿಸಲಿದ್ದಾರೆ. ಮೋದಿಗಾಗಿ ಉಡುಪಿಯ ಸ್ಥಳೀಯ ರುಚಿಯ ತಿಂಡಿಗಳನ್ನು ಸಿದ್ಧಪಡಿಸಿರುವುದು ವಿಶೇಷ.

ಇಂದಿನ ಕಾರ್ಯಕ್ರಮದ ಹೈಲೈಟ್ ಎಂದರೆ ಪರ್ಯಾಯ ಪುತ್ತಿಗೆ ಮಠ ಆಯೋಜಿಸಿರುವ ‘ಲಕ್ಷ ಕಂಠ ಗೀತಾರಾಧನೆ’. ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಈ ಬೃಹತ್ ಸಮಾವೇಶದಲ್ಲಿ ಸುಮಾರು 18ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿ ಅವರು ಸಾಮಾನ್ಯ ಭಕ್ತರಂತೆ ನೆಲದ ಮೇಲೆ ಕುಳಿತು, ಭಗವದ್ಗೀತೆಯ 15ನೇ ಅಧ್ಯಾಯವಾದ ‘ಪುರುಷೋತ್ತಮ ಯೋಗ’ದ ಶ್ಲೋಕಗಳನ್ನು ಪಠಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಉಡುಪಿ ಸಜ್ಜಾಗಿದ್ದು, ಭದ್ರತೆಯ ದೃಷ್ಟಿಯಿಂದ ಇಡೀ ನಗರ ಪೊಲೀಸ್ ಸರ್ಪಗಾವಲಿನಲ್ಲಿ ಬಂದಿಯಾಗಿದೆ. ಧರ್ಮ ಮತ್ತು ರಾಷ್ಟ್ರಭಕ್ತಿಯ ಸಂಗಮಕ್ಕೆ ಉಡುಪಿ ಇಂದು ವೇದಿಕೆಯಾಗಲಿದೆ.

Previous articleಮಂಗಳೂರಿಗೆ ಪ್ರಧಾನಿ ಮೋದಿ ಆಗಮನ
Next articleತಾರಾತಿಗಡಿ: ಅವರಿಬ್ಬರನ್ನು ಬಿಡಿ ನನಗೆ ಕೊಡಿ

LEAVE A REPLY

Please enter your comment!
Please enter your name here