ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನೆ: ಮಲ್ಪೆಯಲ್ಲಿ ಈರ್ವರ ಸೆರೆ

0
55

ಉಡುಪಿ: ಭಾರತೀಯ ನೌಕಾಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ ಈರ್ವರನ್ನು ಮಲ್ಪೆಯಲ್ಲಿ ಬಂಧಿಸಲಾಗಿದೆ.

ಕೇಂದ್ರ ಸರ್ಕಾರದ ಸ್ವಾಮ್ಯದ ಬಂದರು ಮತ್ತು ಜಲಸಾರಿಗೆ ಇಲಾಖೆ ಅಧೀನದಲ್ಲಿರುವ ಮಲ್ಪೆಯಲ್ಲಿ ಕಾರ್ಯಾಚರಿಸುತ್ತಿರುವ ಉಡುಪಿ ಕೊಚ್ಚಿನ್ ಶಿಪ್ ಯಾರ್ಡಿಗೆ ಸಂಬಂಧಿಸಿದಂತೆ, ಭಾರತದ ನೌಕಾ ಸೇನೆಗೆ ಸೇರಿದ ಗೌಪ್ಯ ಮಾಹಿತಿಯನ್ನು ಅನಧಿಕೃತವಾಗಿ ಸೋರಿಕೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಸುಲ್ತಾನಪುರದವರಾದ ರೋಹಿತ್ (29) ಮತ್ತು ಸಂತ್ರಿ (37) ಬಂಧಿತ ಆರೋಪಿಗಳು ಎಂದು ಉಡುಪಿ ಎಸ್.ಪಿ. ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್‌ನ್ನು ಸುಷ್ಮಾ ಮರೈನ್ ಪ್ರೈ. ಸಂಸ್ಥೆಗೆ ಗುತ್ತಿಗೆ (ಸಬ್-ಕಾಂಟ್ರಾಕ್ಟ್) ನೀಡಲಾಗಿದ್ದು, ಈ ಸಂಸ್ಥೆಯಲ್ಲಿ ಉತ್ತರ ಪ್ರದೇಶ ಮೂಲದ ಸುಲ್ತಾನಪುರ ಜಿಲ್ಲೆಯ ರೋಹಿತ್ (29) ಎಂಬಾತ ಇನ್ಸುಲೇಟರ್ ಆಗಿ ಕೆಲಸ ಮಾಡುತ್ತಿದ್ದು, ಆತ ಈ ಹಿಂದೆ ಕೇರಳದ ಕೊಚ್ಚಿನ್ ನಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್ ಲಿ. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ.‌

ಆ ಅವಧಿಯಲ್ಲಿ, ಭಾರತದ ನೌಕಾ ಸೇನೆಗೆ ಸಂಬಂಧಿಸಿದ ಹಡಗುಗಳ ಸಂಖ್ಯೆ ಸೇರಿದಂತೆ ಅನೇಕ ಗೌಪ್ಯ ಮಾಹಿತಿಯನ್ನು ವಾಟ್ಸಾಪ್ ಮೂಲಕ ಅನಧಿಕೃತವಾಗಿ ಹಂಚಿಕೊಂಡು ಅಕ್ರಮ ಲಾಭ ಪಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬಳಿಕ ಮಲ್ಪೆಗೆ ವರ್ಗಾವಣೆಯಾದ ನಂತರವೂ ಕೊಚ್ಚಿನ್ ನಲ್ಲಿರುವ ಸ್ನೇಹಿತನಿಂದ ಮಾಹಿತಿ ಸಂಗ್ರಹಿಸಿ ಅದನ್ನು ಮತ್ತೊಬ್ಬ ಅನಧಿಕೃತ ವ್ಯಕ್ತಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾನೆ ಎಂದೂ ತಿಳಿದುಬಂದಿದೆ.

ಭಾರತದ ಸಾರ್ವಭೌಮತೆ, ಏಕತೆ ಹಾಗೂ ಅಖಂಡತೆಗೆ ಅಪಾಯ ಉಂಟಾಗಿದ್ದು, ದೇಶದ ಆಂತರಿಕ ಭದ್ರತೆಗೆ ಧಕ್ಕೆ ತಂದಿರುವ ಗಂಭೀರ ಆರೋಪ ಇದಾಗಿದೆ. ಈ ಬಗ್ಗೆ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಸಂಸ್ಥೆಯ ಸಿಇಒ ನೀಡಿದ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದ ನೇತೃತ್ವದಲ್ಲಿ ತನಿಳೆ ಕೈಗೊಳ್ಳಲಾಗಿದೆ.

ಮಲ್ಪೆ ಪೊಲೀಸ್ ಠಾಣೆ ಉಪನಿರೀಕ್ಷಕ ಅನಿಲ್ ಕುಮಾರ್ ಡಿ., ಎಎಸ್ಐ ಹರೀಶ್ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ರವಿ ಜಾದವ್ ಅವರನ್ನೊಳಗೊಂಡ ವಿಶೇಷ ತಂಡ ಆರೋಪಿಗಳಾದ ರೋಹಿತ್ (29) ಮತ್ತು ಸಂತ್ರಿ (37) ಎಂಬೀರ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿ.3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಪ್ರಕರಣವು ರಾಷ್ಟ್ರ ಭದ್ರತೆ ದೃಷ್ಟಿಯಿಂದ ಅತ್ಯಂತ ಗಂಭೀರವಾಗಿದ್ದು, ಮುಂದಿನ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ ಎಂದು ಎಸ್.ಪಿ. ತಿಳಿಸಿದ್ದಾರೆ.

Previous articleಸಂಚಾರ ನಿಯಮ ಉಲ್ಲಂಘನೆ ದಂಡ ಕಟ್ಟಲು ಶೇ 50ರಷ್ಟು ರಿಯಾಯಿತಿ
Next articleಸಂಗಾತಿಯೂಂದಿಗೆ ಚುಂಬನ: 21 ಮಿಲಿಯನ್ ವರ್ಷಗಳ ಹಿಂದಿನ ಪ್ರಾಚೀನ ಇತಿಹಾಸ, ಇಲ್ಲಿದೆ ನೋಡಿ ಮಾಹಿತಿ

LEAVE A REPLY

Please enter your comment!
Please enter your name here