ಮಹೇಶ್ ಶೆಟ್ಟಿ ತಿಮರೋಡಿ ಬಂಧನ: ನಿಷೇಧಾಜ್ಞೆ ಜಾರಿ

0
68

ಉಡುಪಿ: ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆ ಸರಹದ್ದಿನ 500 ಮೀಟರ್ ವ್ಯಾಪ್ತಿಯಲ್ಲಿ ಆಗಸ್ಟ್ 21ರ ಮಧ್ಯಾಹ್ನ 1 ಗಂಟೆಯಿಂದ ಆ‌.22ರ ಮಧ್ಯಾಹ್ನ 1 ಗಂಟೆ ತನಕ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿಯನ್ನು ಗುರುವಾರ ಉಜಿರೆಯಲ್ಲಿ ಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆ ತರಲಾಗಿದೆ. ಮಹೇಶ್ ಶೆಟ್ಟಿ ಸಕ್ರಿಯ ಹಿಂದೂ ಕಾರ್ಯಕರ್ತನಾಗಿದ್ದು, ಸೌಜನ್ಯ ಪರ ಹೋರಾಟ ನಡೆಸುತ್ತಿದ್ದಾರೆ.

ಅವರನ್ನು ತನಿಖೆಗಾಗಿ ಬ್ರಹ್ಮಾವರ ಠಾಣೆಗೆ ಕರೆ ತಂದಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಉಡುಪಿ ಜಿಲ್ಲಾ ಎಸ್‌ಪಿ ಹರಿರಾಮ್ ಶಂಕರ್‌ ಮನವಿಯಂತೆ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

ಬಂಧನ ಏಕೆ?: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಠಾಣೆಯ ಪೊಲೀಸರು ಗುರುವಾರ ಬೆಳಗ್ಗೆ ವಿಚಾರಣೆಗಾಗಿ ಬೆಳ್ತಂಗಡಿಯಿಂದ ಕರೆತಂದಿದ್ದಾರೆ.

ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಗ್ಗೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ತಿಮರೋಡಿಗೆ ಪೊಲೀಸರು ನೋಟಿಸ್ ನೀಡಿದ್ದರು.

ಆದರೆ, ವಿಚಾರಣೆಗೆ ಹಾಜರಾಗದ ಕಾರಣ ಗುರುವಾರ ಬೆಳಗ್ಗೆ ಬ್ರಹ್ಮಾವರ ಪೊಲೀಸರು ಉಜಿರೆ ಸಮೀಪದ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿ ಮನೆಯಲ್ಲಿ ಅವರನ್ನು ವಶಕ್ಕೆ ಪಡೆಯಲು ತೆರಳಿದ್ದರು. ವಿಷಯ ತಿಳಿದ ಮಹೇಶ್ ಶೆಟ್ಟಿ ಬೆಂಬಲಿಗ ಯುವಕರ ತಂಡ ತಿಮರೋಡಿಯ ಮನೆಯ ಎದುರು ಜಮಾಯಿಸಿತ್ತು. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬಳಿಕ ತಿಮರೋಡಿ ಪರ ವಕೀಲರು ಪೊಲೀಸರ ಜೊತೆ ಮಾತನಾಡಿದ ತಿಮರೋಡಿ, ಸ್ವತಃ ಠಾಣೆಗೆ ಹಾಜರಾಗುವುದಾಗಿ ಹೇಳಿದ್ದು, ಅದರಂತೆ ತಿಮರೋಡಿ ಖಾಸಗಿ ಕಾರಿನಲ್ಲಿ ಬ್ರಹ್ಮಾವರ ಪೊಲೀಸರ ಜೊತೆ ಆಗಮಿಸಿದರು. ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಕೂಡಾ ಆಗಮಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, “ತಿಮರೋಡಿ ವಿರುದ್ದ ಜಾಮೀನು ರಹಿತ ಕೇಸುಗಳಿದ್ದು ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿದ್ದರೂ.ವಿಚಾರಣೆಗೆ ಹಾಜರಾಗದ ಕಾರಣ ಅವರನ್ನು ವಶಕ್ಕೆ ಪಡೆದುಕೊಳ್ಳಬೇಕಾಯಿತು” ಎಂದು ತಿಳಿಸಿದ್ದಾರೆ.

Previous articleಬೆಂಗಳೂರು: ಗುಡ್ ನ್ಯೂಸ್, ಮತ್ತೆ ಬೈಕ್ ಟ್ಯಾಕ್ಸಿ ಆರಂಭ
Next articleಬೆಂಗಳೂರು: 24ರಂದು ದಿನಪೂರ್ಣ ಸಂಗೀತ-ನೃತ್ಯ ಸಂಭ್ರಮ

LEAVE A REPLY

Please enter your comment!
Please enter your name here