ಬೆಂಗಳೂರು: ವಿಜಯಪುರ ಜಿಲ್ಲೆಯ ಬಾಬಾನಗರದ ಪ್ರಗತಿಪರ ರೈತ ಸಿದ್ರಾಮಪ್ಪ ಬಿರಾದಾರ್ ಅವರ ನವೀನ ಕೃಷಿ ಪ್ರಯೋಗ ಇದೀಗ ರಾಜ್ಯದ ಕೃಷಿ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅವರು ಕೇವಲ ಒಂದು ಎಕರೆ ಭೂಮಿಯಲ್ಲಿ ಸಾವಯವ ವಿಧಾನದಲ್ಲಿ ‘ರೆಡ್ ಡೈಮಂಡ್’ ತಳಿಯ ಪೇರಲ ಹಣ್ಣು ಬೆಳೆಯುತ್ತಿದ್ದಾರೆ.
ಈ ಪ್ರಯತ್ನದ ಯಶಸ್ಸು ಕುರಿತು ಅವರು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ತಾವು ಬೆಳೆದ ರೆಡ್ ಡೈಮಂಡ್ ಪೇರಲ ಹಣ್ಣುಗಳ ಉಡುಗೊರೆ ನೀಡಿದರು. ಈ ಸಂದರ್ಭ ಸಚಿವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ, “ದೂರದ ಗುಜರಾತ್‌ನಿಂದ ಈ ವಿಶಿಷ್ಟ ತಳಿಯ ಬೀಜ ತರಿಸಿಕೊಂಡು ಸಾವಯವ ವಿಧಾನದಲ್ಲಿ ಬೆಳೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ತಳಿಗೆ ಹೆಚ್ಚಿನ ನೀರಾವರಿ ಅಗತ್ಯವಿದೆ. ನಮ್ಮ ಸರ್ಕಾರದ ನೀರಾವರಿ ಯೋಜನೆಗಳು ಈ ರೀತಿಯ ನವೀನ ಕೃಷಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು. ಸಿದ್ರಾಮಪ್ಪ ಬಿರಾದಾರ್ ಅವರ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, “ಈ ಹಣ್ಣು ವರ್ಷಕ್ಕೆ ಎರಡು ಬಾರಿ ಬೆಳೆಯಬಹುದು. ಇದರಿಂದ ರೈತರಿಗೆ ವಾರ್ಷಿಕ ರೂ. 7 ರಿಂದ 8 ಲಕ್ಷ ಆದಾಯ ದೊರೆಯಬಹುದು,” ಎಂದು ಹೇಳಿದರು.
ರೆಡ್ ಡೈಮಂಡ್ ಪೇರಲ ತಳಿಯು ಅದರ ಕೆಂಪು ಬಣ್ಣದ ತಿರುಳಿನಿಂದ ಗುರುತಿಸಬಹುದು. ಈ ತಳಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದ್ದು, ಉತ್ತಮ ಉತ್ಪಾದನೆ ಹಾಗೂ ಲಾಭದಾಯಕತೆಯಿಂದ ರೈತರ ಆಸಕ್ತಿ ಹೆಚ್ಚಿಸುತ್ತಿದೆ. ಈ ರೀತಿಯ ನವೀನ ಪ್ರಯೋಗಗಳು ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ ಎಂದು ಸಚಿವರು ಹಾರೈಸಿದರು.


























