ನಮ್ಮ ಮೆಟ್ರೋ: ಹಳದಿ ಮಾರ್ಗದ ರೈಲು ಸಂಚಾರದ ಸಮಯ ಬದಲು

0
140

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಗೊಂಡು ಒಂದು ವಾರ ಕಳೆದಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸವ ಮಾರ್ಗದಲ್ಲಿ ಸದ್ಯ 3 ರೈಲುಗಳು ಸಂಚಾರ ನಡೆಸುತ್ತಿವೆ.

16 ನಿಲ್ದಾಣಗಳನ್ನು ಹೊಂದಿರುವ 19.15 ಕಿ.ಮೀ. ಮಾರ್ಗದ ರೈಲು ಸಂಚಾರದ ವೇಳಾಪಟ್ಟಿಯನ್ನು ಬಿಎಂಆರ್‌ಸಿಎಲ್ ಬದಲಾವಣೆ ಮಾಡಿದೆ. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಆಗಸ್ಟ್ 18ರ ಸೋಮವಾರದಂದು ಹಳದಿ ಮಾರ್ಗದ ಮೆಟ್ರೋ ಸೇವೆ, ಮುಂಜಾನೆ 5 ಗಂಟೆಗೆ ಪ್ರಾರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಈ ವೇಳಾಪಟ್ಟಿ ಸೋಮವಾರಕ್ಕೆ ಮಾತ್ರ ಅನ್ವಯವಾಗಲಿದೆ.

ವೇಳಾಪಟ್ಟಿ ಮಾಹಿತಿ: ಆಗಸ್ಟ್ 18ರ ಸೋಮವಾರ ಹಳದಿ ಮಾರ್ಗದ ಮೆಟ್ರೋ ಸೇವೆ ಮುಂಜಾನೆ 5 ಗಂಟೆಗೆ ಪ್ರಾರಂಭ. ಸ್ವಾತಂತ್ರ್ಯ ದಿನದ ದೀರ್ಘ ವಾರಾಂತ್ಯದ ನಂತರ ಪ್ರಯಾಣಿಕರ ಚಲನವಲನವು ಹೆಚ್ಚಿನ ಪ್ರಮಾಣದಲ್ಲಿ ಇರುವ ನಿರೀಕ್ಷೆಯಿದ್ದು, ನಮ್ಮ ಮೆಟ್ರೋ ಹಳದಿ ಮಾರ್ಗದ ಸೇವೆ ಸೋಮವಾರ ಬೆಳಗ್ಗೆ 5 ಗಂಟೆಗೆ ಆರಂಭವಾಗಲಿದೆ.

ಮೊದಲ ಮೆಟ್ರೋ ರೈಲು ಸೇವೆ ಆ‌ರ್‌.ವಿ.ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಕ್ಕೆ ಹೊರಡಲಿವೆ. ಈ ವಿಶೇಷ ವ್ಯವಸ್ಥೆ ಕೇವಲ 18ನೇ ಆಗಸ್ಟ್ 2025ರ ಸೋಮವಾರಕ್ಕೆ ಮಾತ್ರ ಅನ್ವಯವಾಗುತ್ತದೆ.

ಮುಂದಿನ ದಿನವಾದ ಮಂಗಳವಾರದಿಂದ (ಆಗಸ್ಟ್ 19) ಮೆಟ್ರೋ ಸೇವೆಗಳು ಎಂದಿನಂತೆ ಬೆಳಗ್ಗೆ 6:30ರಿಂದ ಪ್ರಾರಂಭವಾಗಲಿವೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸುಗಮಗೊಳಿಸಲು ಈ ಬೆಳಗಿನ ಸೇವೆಯ ಲಾಭವನ್ನು ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ.

ಈ ಹಿಂದೆ ಘೋಷಿಸಿದಂತೆ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದ ಮೆಟ್ರೋ ಸೇವೆಗಳು ಸೋಮವಾರದಂದು ಸಾಮಾನ್ಯವಾಗಿ ಬೆಳಗ್ಗೆ 4:15 ರಿಂದಲೇ ಕಾರ್ಯನಿರ್ವಹಿಸುತ್ತವೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕಳೆದ ಭಾನುವಾರ ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸವ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ ಮಾಡಿದ್ದರು. ಸೋಮವಾರದಿಂದ ರೈಲು ಸಂಚಾರ ಆರಂಭವಾಗಿತ್ತು.

ಆದರೆ ಈ ಮಾರ್ಗದಲ್ಲಿ ಓಡಿಸಲು ಬಿಎಂಆರ್‌ಸಿಎಲ್ ಬಳಿ ರೈಲುಗಳ ಕೊರತೆ ಇದೆ. ಆದ್ದರಿಂದ ಸದ್ಯ 3 ರೈಲುಗಳು 25 ನಿಮಿಷದ ಅಂತರದಲ್ಲಿ ಸಂಚಾರವನ್ನು ನಡೆಸುತ್ತಿವೆ. 4ನೇ ರೈಲು ನಗರಕ್ಕೆ ಆಗಮಿಸಿದ್ದು, ಪ್ರಾಯೋಗಿಕ ಸಂಚಾರದ ಬಳಿಕ ಸಂಚಾರವನ್ನು ಆರಂಭಸಲಿದೆ.

ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ. ಎಲೆಕ್ಟ್ರಾನಿಕ್ ಸಿಟಿಗೆ ಈ ಮಾರ್ಗ ಸಂಪರ್ಕ ಕಲ್ಪಿಸುವ ಕಾರಣ ಟೆಕ್ಕಿಗಳು ಹೆಚ್ಚಾಗಿ ಮಾರ್ಗವನ್ನು ಬಳಕೆ ಮಾಡುತ್ತಾರೆ. ಕಳೆದ ಸೋಮವಾರ ಮೊದಲ ದಿನವೇ 80,000 ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರವನ್ನು ನಡೆಸಿದ್ದರು.

ಪಶ್ಚಿಮ ಬಂಗಾಳದ ಟಿಟಾಗರ್‌ನಲ್ಲಿ ಹಳದಿ ಮಾರ್ಗದ ನಮ್ಮ ಮೆಟ್ರೋ ಬೋಗಿ ತಯಾರಾಗುತ್ತಿದೆ. ಈ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಓಡಿಸುವುದಾಗಿ ಬಿಎಂಆರ್‌ಸಿಎಲ್ ಹೇಳಿತ್ತು. ಆದರೆ ಸದ್ಯ ತಾಂತ್ರಿಕ ಕಾರಣಕ್ಕೆ ಚಾಲಕ ಸಹಿತವಾದ ಮೂರು ರೈಲುಗಳನ್ನು ಓಡಿಸುತ್ತಿದೆ.

ಈ ವಾರ 4ನೇ ರೈಲು ಹೆಬ್ಬಗೋಡಿ ಡಿಪೋಗೆ ಆಗಮಿಸಿದೆ. ಅಕ್ಟೋಬರ್‌ನಲ್ಲಿ ಇನ್ನೂ ಎರಡು ರೈಲುಗಳು ನಗರಕ್ಕೆ ಆಗಮಿಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಹಂತ ಹಂತವಾಗಿ ಹಳದಿ ಮಾರ್ಗದಲ್ಲಿ ರೈಲುಗಳ ಸಂಖ್ಯೆಯನ್ನು ಬಿಎಂಆರ್‌ಸಿಎಲ್ ಹೆಚ್ಚಿಸಲಿದೆ.

Previous articleಗಣೇಶ ಪ್ರತಿಷ್ಠಾಪನೆ: ಆಯೋಜಕರಿಗೆ ಪ್ರಮುಖ ಸೂಚನೆಗಳು
Next articleVote Adhikar Yatra: ರಾಹುಲ್ ಗಾಂಧಿ ಮತ್ತೊಂದು ಯಾತ್ರೆ, 20 ಜಿಲ್ಲೆ, 1,300 ಕಿ.ಮೀ. ದೂರ

LEAVE A REPLY

Please enter your comment!
Please enter your name here