Namma Metro Yellow Line: ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮೆಟ್ರೋ ರೈಲು ವೇಳಾಪಟ್ಟಿ, ದರ

0
54

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೋಮವಾರದಿಂದ ಹೊಸ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದ್ದಾರೆ. ಸೋಮವಾರದಿಂದ ರೈಲು ಸಂಚಾರ ಆರಂಭವಾಗಲಿದೆ.

7,610 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ 19.15 ಕಿ.ಮೀ. ಉದ್ದದ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ. ಸದ್ಯ 3 ರೈಲುಗಳು ಈ ಮಾರ್ಗದಲ್ಲಿ ಸಂಚಾರವನ್ನು ನಡೆಸಲಿವೆ.

ರೈಲುಗಳ ವೇಳಾಪಟ್ಟಿ: ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವೆ ರೈಲು ಸಂಚಾರದ ವೇಳಾಪಟ್ಟಿಯನ್ನು ಬಿಎಂಆರ್‌ಸಿಎಲ್ ಪ್ರಕಟಿಸಿದೆ. ಆರ್‌.ವಿ.ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ವಾರದ ದಿನಗಳಲ್ಲಿ ಬೆಳಗ್ಗೆ 6.30ಕ್ಕೆ ಆರಂಭವಾಗಲಿದೆ.

ಬಿಎಂಆರ್‌ಸಿಎಲ್ ಮಾಹಿತಿಯಂತೆ ಸೋಮವಾರದಿಂದ ಶನಿವಾರದ ತನಕ ವಾರದ ಎಲ್ಲಾ ದಿನಗಳು ಆರ್.ವಿ.ರಸ್ತೆ-ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಬೆಳಗ್ಗೆ 6.30ಕ್ಕೆ ರೈಲುಗಳು ಪ್ರಾರಂಭವಾಗುತ್ತವೆ.

ಪ್ರತಿ ನಿಲ್ದಾಣದಲ್ಲಿ ನಿಲುಗಡೆ ಸಹಿತ ಒಟ್ಟು ಪ್ರಯಾಣ ಸಮಯ ಒಂದು ದಿಕ್ಕಿನಲ್ಲಿ ಸುಮಾರು 35 ನಿಮಿಷಗಳಾಗಿರುತ್ತದೆ. ಒಟ್ಟು 16 ನಿಲ್ದಾಣಗಳಿವೆ, ಇದರಲ್ಲಿ 2 ಟರ್ಮಿನಲ್‌ಗಳು ಸೇರಿವೆ.

ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 10.42ಕ್ಕೆ ಮತ್ತು ಆರ್.ವಿ.ರೋಡ್ ಇಂಟರ್‌ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.55ಕ್ಕೆ ಹೊರಡುತ್ತದೆ.

ಬೆಳಗ್ಗೆ 6.30 ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಬೊಮ್ಮಸಂದ್ರದಿಂದ ಹಾಗೂ ಬೆಳಗ್ಗೆ 7.10ರಿಂದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಪ್ರತಿ 25 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ. ರಾತ್ರಿ 10 ಗಂಟೆಯ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗುತ್ತದೆ.

ಭಾನುವಾರದ ವೇಳಾಪಟ್ಟಿ: ಭಾನುವಾರದ ದಿನ ರೈಲು ಸೇವೆಗಳು ಬೆಳಗ್ಗೆ 6.30 ಬದಲಾಗಿ 7ಕ್ಕೆ ಪ್ರಾರಂಭವಾಗುತ್ತವೆ. ಅವಧಿ ವಾರದ ದಿನಗಳ ರೀತಿಯೇ ಇರುತ್ತದೆ.

ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣದ ದರ ರೂ. 60 ಆಗಿದೆ. ಟೋಕನ್‌ಗಳು, NCMC ಕಾರ್ಡ್‌ಗಳು, ಬಿಎಂಆರ್‌ಸಿಎಲ್‌, ಸ್ಮಾರ್ಟ್ ಕಾರ್ಡ್‌ಗಳು, ಕ್ಯುಆರ್ ಟಿಕೆಟ್‌ಗಳು ಎಂದಿನಂತೆಯೇ ಲಭ್ಯವಿದೆ.

ಐಫೋನ್ ಬಳಸುವ ಬಿಎಂಆರ್‌ಸಿಎಲ್ ಪ್ರಯಾಣಿಕರು 2025ರ ಆಗಸ್ಟ್ 11ರಿಂದ ಆಪಲ್ ಸ್ಕೋರ್‌ನಿಂದ ನಮ್ಮ ಮೆಟ್ರೋ ಅಧಿಕೃತ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು, QR ಟಿಕೆಟ್‌ಗಳನ್ನ ಖರೀದಿಸಲು ಹಾಗೂ ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಬಳಸಿಕೊಳ್ಳಬಹುದು.

ಹೆಚ್ಚು ರೈಲು ಸೆಟ್‌ಗಳನ್ನು ಸೇವೆಗೆ ಸೇರಿಸುತ್ತಿದ್ದಂತೆ ರೈಲು ಸಂಚಾರದ ಅವಧಿಯನ್ನು ಹಚ್ಚಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯ ಬಿಎಂಆರ್‌ಸಿಎಲ್ ಬಳಿ 3 ಮೆಟ್ರೋ ರೈಲುಗಳಿವೆ. ಈ ರೈಲುಗಳನ್ನು ಹಳದಿ ಮಾರ್ಗದಲ್ಲಿ ಓಡಿಸಲಾಗುತ್ತದೆ. 4ನೇ ರೈಲು ಪಶ್ಚಿಮ ಬಂಗಾಳದಿಂದ ಹೊರಟಿದ್ದು, ಮುಂದಿನ ವಾರ ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಪ್ರಧಾನಿ ಮೋದಿ ಪೋಸ್ಟ್: ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಮೆಟ್ರೋ ರೈಲಿಗೆ ಚಾಲನೆ ನೀಡಿದ ಕುರಿತು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ಭಾರತದ ಅಭಿವೃದ್ಧಿಗೆ ಬೆಂಗಳೂರಿನ ಕೊಡುಗೆಯನ್ನು ನಮ್ಮ ಸರ್ಕಾರವು ಬಹಳವಾಗಿ ಗೌರವಿಸುತ್ತದೆ ಮತ್ತು ಈ ಮಹಾನ್ ನಗರದ ಮೂಲಸೌಕರ್ಯವನ್ನು ಸುಧಾರಿಸಲು ಬದ್ಧವಾಗಿದೆ’ ಎಂದು ಹೇಳಿದ್ದಾರೆ.

‘ಇಂದು ಉದ್ಘಾಟನೆಯಾದ ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ಐಟಿ ವಲಯದಲ್ಲಿ ತೊಡಗಿರುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಪ್ರಮುಖ ರಸ್ತೆಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ’ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Previous articleRain Alert: ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
Next articleBMTC: ಮೆಟ್ರೋ ಹಳದಿ ಮಾರ್ಗ, ಬಿಎಂಟಿಸಿ ಫೀಡರ್ ಬಸ್ ವೇಳಾಪಟ್ಟಿ

LEAVE A REPLY

Please enter your comment!
Please enter your name here