ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ, ಮೆಜೆಸ್ಟಿಕ್‌ನಲ್ಲಿ ಜನ ಸಾಗರ!

1
88

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗ ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿ ಸದ್ಯ 3 ರೈಲುಗಳು ಸಂಚಾರ ನಡೆಸುತ್ತಿವೆ. 16 ನಿಲ್ದಾಣಗಳನ್ನು ಹೊಂದಿರುವ 19.15 ಕಿ.ಮೀ. ಮಾರ್ಗದ ರೈಲು ಸಂಚಾರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗ ಉದ್ಘಾಟನೆ ಬಳಿಕ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ.

ಪೀಕ್‌ ಅವರ್‌ನಲ್ಲಿ ನಮ್ಮ ಮೆಟ್ರೋ ನೇರಳೆ ಮತ್ತು ಹಳದಿ ಮಾರ್ಗದ ಇಂಟರ್ ಚೇಂಜ್ ನಿಲ್ದಾಣವಾದ ಮೆಜೆಸ್ಟಿಕ್‌ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತದೆ. ಆದರೆ ಈಗ ಹಳದಿ ಮಾರ್ಗ ಉದ್ಘಾಟನೆ ಬಳಿಕ ಇನ್ನಷ್ಟು ಜನರು ಆಗಮಿಸುತ್ತಿದ್ದಾರೆ.

ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಕಾಡುಗೋಡಿಯಿಂದ ಸಿಲ್ಕ್ ಬೋರ್ಡ್‌ಗೆ ಹೋಗಲು ಪ್ರಯಾಣಿಕರು ಬೆಳಗ್ಗೆ ಮತ್ತು ಸಂಜೆ ಆಗಮಿಸುತ್ತಿದ್ದಾರೆ. ಆದ್ದರಿಂದ ಮೆಜೆಸ್ಟಿಕ್ ನಿಲ್ದಾಣದಲ್ಲಿ ಭಾರೀ ಜನದಟ್ಟಣೆ ಕಂಡುಬರುತ್ತಿದೆ. ಈ ದಟ್ಟಣೆಯ ನಡುವೆ ಹಲವು ಜನರ ರೈಲು ಸಹ ತಪ್ಪಿಹೋಗುತ್ತಿದೆ.

ಎಲ್ಲಾ ನಿಲ್ದಾಣದಲ್ಲೂ ದಟ್ಟಣೆ: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದ ಬಳಿಕ ನಗರದ ಎಲ್ಲಾ ಮೆಟ್ರೋ ನಿಲ್ದಾಣದಲ್ಲಿಯೂ ಜನರ ದಟ್ಟಣೆ ಹೆಚ್ಚಾಗಿದೆ ಎಂಬ ಮಾಹಿತಿ ಇದೆ. ಅದರಲ್ಲೂ ಪ್ರಮುಖ ಹಬ್ ಆದ ಮೆಜೆಸ್ಟಿಕ್‌ನಲ್ಲಿ ದಟ್ಟಣೆ ಅಧಿಕವಾಗಿದೆ.

ಕಾಡುಗೋಡಿ ಮತ್ತು ಆರ್‌.ವಿ.ರಸ್ತೆಯಿಂದ ಒಟ್ಟಿಗೆ ರೈಲುಗಳು ಬಂದರೆ ಮೆಜೆಸ್ಟಿಕ್‌ನಲ್ಲಿ ಜನಸಾಗರ ಉಂಟಾಗುತ್ತದೆ. ಇದರಿಂದಾಗಿ ಪ್ರತಿದಿನ ಸಂಚಾರ ನಡೆಸುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಯಾಣಿಕರ ದಟ್ಟಣೆ ಹೆಚ್ಚಾದಂತೆ ಎಸ್ಕಲೇಟರ್‌ ಮೇಲೆ ಹತ್ತಿ ಇಳಿಯುವುದು ಬಹಳ ಕಷ್ಟವಾಗಿದೆ. ಜನರ ದಟ್ಟಣೆ ಕಾರಣಕ್ಕೆ ರೈಲುಗಳ ಕಾಯುವ ಸಮಯವೂ ಹೆಚ್ಚಾಗಿದೆ ಎಂದು ಜನರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವೈಟ್‌ಫೀಲ್ಡ್‌ನಿಂದ ಮೆಜೆಸ್ಟಿಕ್‌ ಬರುವ ರೈಲುಗಳು ಭರ್ತಿಯಾಗಿ ಬರುತ್ತಿವೆ. ಮೊದಲೇ ಮೆಜೆಸ್ಟಿಕ್ ನಿಲ್ದಾಣದ ವಿನ್ಯಾಸಗೊಂದಲವಾಗಿದೆ. ಈಗ ಜನ ದಟ್ಟಣೆ ನಡುವೆ ಇನ್ನಷ್ಟು ಗೊಂದಲ ಉಂಟಾಗಿ ರೈಲು ಹತ್ತುವುದು ತಡವಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.

2016ರಲ್ಲಿ ಮೆಜೆಸ್ಟಿಕ್ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಯಿತು. ಸಾಮಾನ್ಯ ದಿನದಲ್ಲಿಯೇ ಇಲ್ಲಿ ಹೆಚ್ಚು ಪ್ರಯಾಣಿಕರು ಇರುತ್ತಾರೆ. ಆದರೆ ಈಗ ಇನ್ನಷ್ಟು ಜನರು ಆಗಮಿಸುತ್ತಿದ್ದು, ಜನರಿಗೆ ತೊಂದರೆ ಉಂಟಾಗುತ್ತಿದೆ. ಅದರಲ್ಲೂ ಸೋಮವಾರ, ಬುಧವಾರ ಅತಿ ಹೆಚ್ಚು ಜನರು ಆಗಮಿಸುತ್ತಾರೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಜನರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಹಳದಿ ನಮ್ಮ ಮೆಟ್ರೋ ಮಾರ್ಗದಲ್ಲಿನ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಸೋಮವಾರ ರೈಲು ಸಂಚಾರ ಆರಂಭವಾಗಿತ್ತು. ಮೊದಲ ದಿನವೇ 80 ಸಾವಿರಕ್ಕೂ ಅಧಿಕ ಪ್ರಯಾಣಿಕರು ಸಂಚಾರವನ್ನು ನಡೆಸಿದ್ದರು.

ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಆದ್ದರಿಂದ ಟೆಕ್ಕಿಗಳಿಗೆ ಅನುಕೂಲವಾಗಿದ್ದು, ಖಾಸಗಿ ವಾಹನ ಬಿಟ್ಟು ಮೆಟ್ರೋದಲ್ಲಿ ಸಂಚಾರವನ್ನು ನಡೆಸುತ್ತಿದ್ದಾರೆ.

ನೇರಳೆ ಮಾರ್ಗದಲ್ಲಿ ಸಂಚಾರ ನಡೆಸುವ ಜನರು ಈಗ ಹಸಿರು ಮಾರ್ಗಕ್ಕೆ ಆಗಮಿಸಿ ಆರ್.ವಿ.ರಸ್ತೆ ನಿಲ್ದಾಣದಲ್ಲಿ ಹಳದಿ ಮಾರ್ಗದ ರೈಲು ಹಿಡಿಯುತ್ತಾರೆ. ಆದ್ದರಿಂದ ಮೆಜೆಸ್ಟಿಕ್‌ನಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ.

Previous articleಸ್ಮರ್ಧಾತ್ಮಕ ಪರೀಕ್ಷೆಗೆ ಏಕರೂಪ ಶುಲ್ಕ, ಸರ್ಕಾರದ ಘೋಷಣೆ
Next articleದರ್ಶನ್ ಜೈಲಿಗೆ: ವಿಜಯಲಕ್ಷ್ಮಿ ದರ್ಶನ್ ಭಾವುಕ ಪೋಸ್ಟ್

1 COMMENT

LEAVE A REPLY

Please enter your comment!
Please enter your name here