ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿದೆ. ಮೊದಲ ದಿನವೇ ಸುಮಾರು 80,000 ಪ್ರಯಾಣಿಕರು ಸಂಚಾರವನ್ನು ನಡೆಸಿದ್ದಾರೆ. 16 ನಿಲ್ದಾಣಗಳನ್ನು ಹೊಂದಿರುವ 19.15 ಕಿ.ಮೀ. ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸದ್ಯ 3 ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ.
ಈಗ ಬೆಂಗಳೂರು ಜನರಿಗೆ ಅದರಲ್ಲೂ ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ ಇದೆ. ಈ ಮಾರ್ಗದಲ್ಲಿ ಸಂಚಾರ ನಡೆಸುವ 4ನೇ ರೈಲು ಪಶ್ಚಿಮ ಬಂಗಾಳದಿಂದ ನಗರಕ್ಕೆ ಬುಧವಾರ ಆಗಮಿಸಿದೆ. ಹಳದಿ ಮಾರ್ಗದಲ್ಲಿ ಸಂಚಾರ ನಡೆಸುವ 4ನೇ ರೈಲಿನ ಒಂದು ಬೋಗಿ ಹೆಬ್ಬಗೋಡಿ ಡಿಪೋಗೆ ಮಂಗಳವಾರ ತಡರಾತ್ರಿ ಆಗಮಿಸಿದೆ. ಮೂರು ಬೋಗಿಗಳು ನೆಲಮಂಗಲ ಬಳಿ ಇದ್ದು, ರಾತ್ರಿ ಡಿಪೋಗೆ ಆಗಮಿಸಲಿವೆ.
ಉಳಿದ ಎರಡು ಬೋಗಿಗಳು ಚಿತ್ತೂರಿನಲ್ಲಿವೆ. ಅಲ್ಲಿಂದ ಇಂದು ರಾತ್ರಿ ಹೊರಡಲಿವೆ. ಗುರುವಾರ ರಾತ್ರಿ ಅಥವ ಶುಕ್ರವಾರ ಬೆಳಗ್ಗೆ ಬೆಂಗಳೂರು ನಗರ ತಲುಪಲಿದೆ. ಎಲ್ಲಾ ಬೋಗಿ ನಗರಕ್ಕೆ ಆಗಮಿಸಿದ ಬಳಿಕ ಅವುಗಳನ್ನು ಜೋಡಣೆ ಮಾಡಿ ಪ್ರಾಯೋಗಿಕ ಸಂಚಾರ ಆರಂಭಿಸಲಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ ನಮ್ಮ ಮೆಟ್ರೋ ಹಳದಿ ಮಾರ್ಗದ 4ನೇ ರೈಲು 15-20 ದಿನಗಳಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಪ್ರಾಯೋಗಿಕ ಸಂಚಾರ ಪೂರ್ಣಗೊಂಡ ಬಳಿಕ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭಿಸಲಿದೆ.
ಹಳದಿ ಮಾರ್ಗದಲ್ಲಿ ಓಡಿಸಲು ಬಿಎಂಆರ್‌ಸಿಎಲ್ ಬಳಿ ರೈಲಿನ ಕೊರತೆ ಇದೆ. ಆದ್ದರಿಂದ 16 ನಿಲ್ದಾಣಗಳ 19.15 ಕಿ.ಮೀ. ಮಾರ್ಗದಲ್ಲಿ ಸದ್ಯ ಮೂರು ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ. 25 ನಿಮಿಷಗಳ ಅಂತರದಲ್ಲಿ ರೈಲುಗಳು ಓಡಾಡುತ್ತಿವೆ. 4ನೇ ರೈಲು ಸಂಚಾರ ಆರಂಭಿಸಿದ ಬಳಿಕ ರೈಲುಗಳ ಸಂಚಾರದ ನಡುವಿನ ಅಂತರ ಕಡಿಮೆಯಾಗಲಿದೆ.
ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿರುವ ವೇಳಾಪಟ್ಟಿ ಪ್ರಕಾರ ಸದ್ಯ ಸೋಮವಾರ-ಶನಿವಾರ ಹಳದಿ ಮಾರ್ಗದಲ್ಲಿ ಬೆಳಗ್ಗೆ 6.30ಕ್ಕೆ ರೈಲು ಸಂಚಾರ ಆರಂಭ. ಬೊಮ್ಮಸಂದ್ರದಿಂದ ಬೆಳಗ್ಗೆ 6.30 ಮತ್ತು ಆರ್.ವಿ.ರಸ್ತೆಯಿಂದ 7.10ಕ್ಕೆ ರೈಲು ಹೊರಡಲಿದೆ. ಭಾನುವಾರ ರೈಲು ಸಂಚಾರ 7 ಗಂಟೆಗೆ ಪ್ರಾರಂಭವಾಗಲಿದೆ.
ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರದ ಅವಧಿ ಕಡಿಮೆ ಮಾಡಬೇಕು ಎಂಬ ಬೇಡಿಕೆ ಇದೆ. ಆದರೆ ರೈಲುಗಳ ಕೊರತೆ ಇರುವ ಕಾರಣ ಸದ್ಯ ಮೂರು ರೈಲು ಸಂಚಾರ ಮಾಡುತ್ತಿದ್ದು, ಸೆಪ್ಟೆಂಬರ್‌ನಲ್ಲಿ 4ನೇ ರೈಲು ಓಡುವ ನಿರೀಕ್ಷೆ ಇದೆ.
ಮೂರು ರೈಲುಗಳಲ್ಲಿ ಪ್ರತಿ ದಿನ 25,000 ಜನರು ಸಂಚಾರ ನಡೆಸಬಹುದು ಎಂದು ಬಿಎಂಆರ್‌ಸಿಎಲ್ ಅಂದಾಜಿಸಿತ್ತು. ಆದರೆ ಸೋಮವಾರ ರಾತ್ರಿ 9 ಗಂಟೆಯ ವೇಳೆಗೆ 58,000 ಜನರು ಸಂಚಾರ ನಡೆಸಿದ್ದರು. ಮೊದಲ ದಿನವೇ ಹಳದಿ ನಮ್ಮ ಮೆಟ್ರೋ ಮಾರ್ಗಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. 2026ರಲ್ಲಿ ಟೆಂಡರ್ ಪಡೆದ ಅಷ್ಟು ರೈಲುಗಳು ನಗರಕ್ಕೆ ಆಗಮಿಸಲಿದ್ದು, ಹಳದಿ ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಾಗಲಿದೆ.
2024ರಲ್ಲಿಯೇ ಚಾಲಕರ ರಹಿತ ಮೊದಲ ರೈಲು ಚೀನಾದಿಂದ ಬೆಂಗಳೂರು ನಗರಕ್ಕೆ ಆಗಮಿಸಿತ್ತು. ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಹಳದಿ ಮಾರ್ಗಕ್ಕೆ ರೈಲುಗಳನ್ನು ಪೂರೈಕೆ ಮಾಡುವ ಟೆಂಡರ್ ಪಡೆದಿದೆ. ಕಂಪನಿ ಪಶ್ಚಿಮ ಬಂಗಾಳದ ಟಿಟಾಗರ್‌ನಲ್ಲಿನ ಫ್ಯಾಕ್ಟರಿ ಜೊತೆ ಸೇರಿಕೊಂಡು ಬೋಗಿ ತಯಾರು ಮಾಡುತ್ತಿದೆ. ಒಂದು ರೈಲು ಚೀನಾದಿಂದ ಉಳಿದ ಮೂರು ರೈಲು ಪಶ್ಚಿಮ ಬಂಗಾಳದಿಂದ ಈಗ ಬೆಂಗಳೂರು ನಗರಕ್ಕೆ ಬಂದಿದೆ.