ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಲ್ಲಿ ವಿಶ್ವ ಆನೆ ದಿನ 2025ರ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿವಮೊಗ್ಗ ನಗರಕ್ಕೆ ಸಮೀಪದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾದ ಆನೆ ಶಿಬಿರದ ವಿಶೇಷತೆಗಳ ಬಗ್ಗೆ ತಿಳಿಯಿರಿ.
“ಆನೆ ಸಂರಕ್ಷಣೆ, ಮಾನವ-ಆನೆ ಸಂಘರ್ಷ ನಿರ್ವಹಣೆ ಮತ್ತು ಸಹಬಾಳ್ವೆಯ ಮಹತ್ವದ ಸಂದೇಶ ಸಾರುವ ಹಾಗೂ ಆನೆಗಳಿಗೆ ಗೌರವ ಸಲ್ಲಿಸುವ ದಿನ ವಿಶ್ವ ಆನೆಗಳ ದಿನ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ಹೇಳಿದರು.
ಕರ್ನಾಟಕ ಅರಣ್ಯ ಇಲಾಖೆ, ಶಿವಮೊಗ್ಗ ವನ್ಯಜೀವಿ ವಿಭಾಗ, ಶಿವಮೊಗ್ಗ ವನ್ಯಜೀವಿ ಉಪ ವಿಭಾಗ ಸಕ್ರೆಬೈಲು ವನ್ಯಜೀವಿ ವಲಯ ವತಿಯಿಂದ ಸಕ್ರೆಬೈಲಿನಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಆನೆ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆನೆ ಶಿಬಿರದ ವಿಶೇಷತೆಗಳು: ಸಕ್ರೆಬೈಲು ಆನೆ ಶಿಬಿರ ತುಂಗಾ ನದಿಯ ತೀರದಲ್ಲಿದೆ. ಇದು ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ. ಪ್ರಕೃತಿ ಪ್ರಿಯರು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಆನೆಗಳ ಜೀವನ ಕ್ರಮ ಹಾಗೂ ಸಂರಕ್ಷಣೆ ಕುರಿತು ತಿಳಿದುಕೊಳ್ಳುವುದರ ಜೊತೆಗೆ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಅತ್ಯುತ್ತಮ ಸ್ಥಳ.
ಈ ಆನೆ ಬಿಡಾರದಲ್ಲಿ ಒಟ್ಟು 25 ಆನೆಗಳಿದ್ದು, 23 ಆನೆಗಳು ಪೂರ್ಣವಾಗಿ ಪಳಗಿವೆ. 3 ಆನೆಗಳನ್ನು ಸೆರೆ ಹಿಡಿದು ಕ್ರಾಲ್‌ಗಳಲ್ಲಿ ಪಳಗಿಸಲಾಗುತ್ತಿದೆ. ಪಳಗಿಸಿದ ಆನೆಗಳಲ್ಲಿ 16 ಗಂಡು 5 ಹೆಣ್ಣು ಮತ್ತು 1 ಮಕನ ಆನೆಗಳಿವೆ. ಪಳಗಿಸಿದ ಆನೆಗಳು ಆನೆ ಸೆರೆ ಕಾರ್ಯಾಚರಣೆ, ಉಪಟಳ ನೀಡುವ ಆನೆ ಹಿಮ್ಮೆಟ್ಟಿಸಲು ಹಾಗೂ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತವೆ. ಇಲ್ಲಿ ಚಾಣಾಕ್ಷ ಮಾವುತರು, ಸಿಬ್ಬಂದಿಗಳಿದ್ದಾರೆ.
ಆನೆಗಳ ಪ್ರಾಮುಖ್ಯತೆ, ಆನೆಗಳ ಸಾಧನೆಗಳು, ಕಾರ್ಯಾಚರಣೆಗಳು ಮತ್ತು ಅವುಗಳ ಇತಿಹಾಸ ಕುರಿತು ಮಾಹಿತಿಯುಳ್ಳ ನಾಮಫಲಕ ಅಳವಡಿಸುವ ಅಥವಾ ಮಾಹಿತಿ ಕೇಂದ್ರ ಸ್ಥಾಪಿಸುವ ಹಾಗೂ ವಿದ್ಯಾರ್ಥಿಗಳಿಗೆ ಪರಿಸರ, ಪ್ರಾಣಿಗಳು ಮಾನವ ಸಂಘರ್ಷ, ವನ್ಯಜೀವಿ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಶೈಕ್ಷಣಿಕ ಕಾರ್ಯಕ್ರಮ ಮಾಡುವ ಯೋಜನೆಯೂ ಇದೆ.
ಆನೆ ಬಿಡಾರದಿಂದ ರವಿ ಮತ್ತು ಶಿವ ಎಂಬ ಎರಡು ಆನೆಗಳನ್ನು ಮಧ್ಯ ಪ್ರದೇಶಕ್ಕೆ ಹಾಗೂ ಕೃಷ್ಣ ಮತ್ತು ಅಭಿಮನ್ಯು ಎಂಬ ಆನೆಗಳನ್ನು ಆಂಧ್ರ ಪ್ರದೇಶಕ್ಕೆ ಕಳುಹಿಸಿಕೊಡಲಾಗಿದೆ.
ಮಾನವ-ಆನೆ ಸಂಘರ್ಷ, ಆನೆಗಳ ಭಾವನಾತ್ಮಕ ಸಂಬಂಧಗಳು, ಅವುಗಳ ಸಾಧನೆ, ಆನೆಗಳ ನಿಜವಾದ ಪ್ರಾಮುಖ್ಯತೆ ಕುರಿತು ಮಾಹಿತಿ ಫಲಕ ಹಾಗೂ ಶಿಕ್ಷಣ, ಸಂಶೋಧನೆ, ದತ್ತು ಇತರೆ ಯೋಜನೆಗಳನ್ನು ಶೀಘ್ರದಲ್ಲೇ ರೂಪಿಸಲಾಗುತ್ತದೆ.
ಆನೆ ಮರಿಗಳ ನಾಮಕರಣ: ವಿಶ್ವ ಆನೆ ದಿನದ ಪ್ರಯುಕ್ತ ಸಕ್ರೆಬೈಲು ಶಿಬಿರದಲ್ಲಿ ಸಂಭ್ರಮ, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಆನೆಗಳನ್ನು ಬಣ್ಣದ ಚಿತ್ತಾರದೊಂದಿಗೆ ಅಲಂಕರಿಸಿ, ಇಷ್ಟವಾದ ತಿನಿಸುಗಳನ್ನು ನೀಡಲಾಯಿತು.
ಆನೆಗಳಿಗೆ ಪೂಜೆ ಸಲ್ಲಿಕೆ ಮಾಡಲಾಯಿತು. ಈ ವೇಳೆ ನೇತ್ರಾವತಿ ಮತ್ತು ಭಾನುಮತಿ ಆನೆಗಳಿಗೆ ಜನಿಸಿದ ಹೆಣ್ಣು ಆನೆ ಮರಿಗಳಿಗೆ ‘ಚಾಮುಂಡಿ’ ಮತ್ತು ‘ತುಂಗಾ’ ಎಂದು ನಾಮಕರಣ ಮಾಡಲಾಯಿತು. ಆನೆ ಪ್ರಿಯರು, ಮಕ್ಕಳು ಆನೆಗಳನ್ನು ನೋಡಿ ಸಂಭ್ರಮಪಟ್ಟರು.

ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಮಾತನಾಡಿ, “ತಮ್ಮ ಹಿಂಡುಗಳನ್ನು ಮುನ್ನಡೆಸುವ ಹಾಗೂ ಮಾರ್ಗದರ್ಶನ ನೀಡುವ ಹೆಣ್ಣು ಆನೆಗಳು ಮತ್ತು ಅವು ಹಂಚಿಕೊಳ್ಳುವ ಆಳವಾದ ಹಾಗೂ ಶಾಶ್ವತವಾದ ನೆನಪುಗಳ ಹಿನ್ನೆಲೆ ಮಾತೃ ಪ್ರಧಾನರು ಮತ್ತು ನೆನಪುಗಳು ಎಂಬ ಧ್ಯೇಯವಾಕ್ಯದೊಂದಿಗೆ ಇಂದಿನ ವಿಶ್ವ ಆನೆಗಳ ದಿನವನ್ನುಆಚರಿಸಲಾಗುತ್ತಿದೆ. ಹಿಂಡನ್ನು ಮುನ್ನಡೆಸುವ ಹೆಣ್ಣು ಆನೆಯು ತನ್ನ ವಿಶೇಷವಾದ ನೆನಪಿನ ಶಕ್ತಿಯಿಂದ ಗುಂಪಿನ ಎಲ್ಲರಿಗೆ ನೀರು, ಆಹಾರ ಒದಗಿಸಲು ಸಹಕರಿಸುತ್ತದೆ ಎಂದು ಹೇಳಿದರು.
ವಿಶ್ವ ಆನೆ ದಿನಾಚರಣೆ 2025ರ ಸ್ಮರಣಾತ್ಮಕವಾಗಿ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಗಿದೆ. ಈ ಲಕೋಟೆ ನಿಗದಿತ ಸಂಖ್ಯೆ ಅಂದರೆ 2000 ಸಂಖ್ಯೆಯಲ್ಲಿ ಮಾತ್ರ ಇದ್ದು, ಇದರ ಮೌಲ್ಯ ರೂ.30 ಆಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಕ್ರೆಬೈಲಿನ ಆನೆ ಬಿಡಾರದ ಮಾಹಿತಿಯನ್ನು ಲಕೋಟೆ ಮೂಲಕ ಬಿತ್ತರಿಸಲಾಗುತ್ತದೆ.