ಮೈಸೂರಿಗೆ ಹುಲಿಗಳ ಲಗ್ಗೆ: ಒಂದಲ್ಲ, ಎರಡಲ್ಲ, ಬರೋಬ್ಬರಿ 21! ಗ್ರಾಮಸ್ಥರ ಎದೆಯಲ್ಲಿ ಢವ ಢವ!

0
21

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳು ಈಗ ಹಿಂದೆಂದೂ ಕೇಳರಿಯದ ಆತಂಕದಲ್ಲಿವೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 21 ಹುಲಿಗಳು ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿವೆ ಎಂಬ ಆಘಾತಕಾರಿ ವಿಷಯವನ್ನು ಸ್ವತಃ ಅರಣ್ಯ ಇಲಾಖೆಯೇ ಅಧಿಕೃತವಾಗಿ ಖಚಿತಪಡಿಸಿದೆ. ಈ ಸುದ್ದಿಯು ಎಚ್.ಡಿ. ಕೋಟೆ, ಸರಗೂರು ಮತ್ತು ನಂಜನಗೂಡು ತಾಲೂಕಿನ ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

ಮೂವರು ರೈತರ ಬಲಿ: ಇತ್ತೀಚೆಗಷ್ಟೇ ಎಚ್.ಡಿ. ಕೋಟೆ ಮತ್ತು ಸರಗೂರು ಭಾಗದಲ್ಲಿ ಹುಲಿ ದಾಳಿಗೆ ಮೂವರು ರೈತರು ಬಲಿಯಾಗಿದ್ದ ಘಟನೆ ಇನ್ನೂ ಹಸಿಯಾಗಿರುವಾಗಲೇ, ಈ ಹೊಸ ಸುದ್ದಿ ಗ್ರಾಮಸ್ಥರನ್ನು ಮತ್ತಷ್ಟು ಬೆಚ್ಚಿಬೀಳಿಸಿದೆ. ಆ ನರಹಂತಕ ಹುಲಿಯನ್ನು ಅರಣ್ಯ ಇಲಾಖೆಯು ಸೆರೆಹಿಡಿದು ಜನರು ನಿಟ್ಟುಸಿರು ಬಿಡುವಷ್ಟರಲ್ಲಿ, ಅದಕ್ಕಿಂತಲೂ ದೊಡ್ಡ ಅಪಾಯ ಕಾದಿರುವುದು ಇದೀಗ ಬಯಲಾಗಿದೆ.

ಅಧಿಕಾರಿಗಳಿಂದಲೇ ಅಧಿಕೃತ ಮಾಹಿತಿ: ಈ ಆತಂಕಕಾರಿ ವಿಷಯವನ್ನು ಸ್ವತಃ ಮೈಸೂರು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಪರಮೇಶ್ ಖಚಿತಪಡಿಸಿದ್ದಾರೆ. “ಒಟ್ಟು 26 ಹುಲಿಗಳು ಕಾಡಿನಿಂದ ಹೊರಬಂದಿದ್ದವು. ಅವುಗಳಲ್ಲಿ ಐದನ್ನು ಸೆರೆಹಿಡಿಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೆ, ಇನ್ನೂ 21 ಹುಲಿಗಳು ನಾಡಿನಲ್ಲೇ ಓಡಾಡುತ್ತಿವೆ. ಹಾಗಾಗಿ, ಕಾಡಂಚಿನ ಗ್ರಾಮಸ್ಥರು ಅತ್ಯಂತ ಎಚ್ಚರಿಕೆಯಿಂದ ಇರಬೇಕು,” ಎಂದು ಸೂಚನೆ ನೀಡಿದ್ದಾರೆ.

ಇದೇ ಮೊದಲಲ್ಲ ಈ ಘಟನೆ: “ಇದು ಇದೇ ಮೊದಲೇನಲ್ಲ. 2014 ಮತ್ತು 2018-19ರಲ್ಲೂ ಇದೇ ರೀತಿಯ ಘಟನೆಗಳು ನಡೆದಿವೆ. ನಾನು ಕಂಡಂತೆ ಇದು ಮೂರನೇ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹುಲಿಗಳು ಹೊರಬಂದಿವೆ. ಮಾನವನ ಜೀವ ಅತ್ಯಮೂಲ್ಯವಾಗಿದ್ದು, ಜನರ ರಕ್ಷಣೆಗಾಗಿ ನಾವು ಹೆಡಿಯಾಲ ಉಪವಿಭಾಗದ ಮೂರು ಕಡೆಗಳಲ್ಲಿ ಹುಲಿ ಸೆರೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದೇವೆ,” ಎಂದು ಡಿಸಿಎಫ್ ಪರಮೇಶ್ ತಿಳಿಸಿದ್ದಾರೆ.

Previous articleಪರಪ್ಪನ ‘ರಾಜಾತಿಥ್ಯ’ ಪ್ರಕರಣ ನಟ ಧನ್ವೀರ್‌ಗೆ ಸಂಕಷ್ಟ? ಇಂದು 2ನೇ ವಿಚಾರಣೆ
Next articleಸೆಹ್ವಾಗ್ ಯುಗಾಂತ್ಯ, ಪಂತ್ ಯುಗಾರಂಭ: ಟೆಸ್ಟ್ ಕ್ರಿಕೆಟ್‌ನ ಹೊಸ ‘ಸಿಕ್ಸರ್ ಸರದಾರ’!

LEAVE A REPLY

Please enter your comment!
Please enter your name here