ಸಿಎಂ ವರುಣಾ ಕ್ಷೇತ್ರದ ಕಣ್ಣೀರು: ಬಿಲ್ ಬಾಕಿಯ ನೆಪದಲ್ಲಿ ಅಂಧ ಅಜ್ಜಿಗೆ ದೌರ್ಜನ್ಯ!

0
17

ಸಿಎಂ ಸಿದ್ದರಾಮಯ್ಯನವರ ತವರು ಕ್ಷೇತ್ರ ವರುಣಾದಲ್ಲೇ ಸರ್ಕಾರದ ಮಾನವೀಯ ಯೋಜನೆಗಳಿಗೆ ಕಪ್ಪುಚುಕ್ಕೆ ಇಡುವಂತಹ ಅಮಾನವೀಯ ಘಟನೆಯೊಂದು ವರದಿಯಾಗಿದೆ. ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣ ನೀಡಿ, 80 ವರ್ಷದ ಅಂಧ ವೃದ್ಧೆಯೊಬ್ಬರ ಮೇಲೆ ಚೆಸ್ಕಾಂ ಸಿಬ್ಬಂದಿ ದರ್ಪ ತೋರಿ, ದೌರ್ಜನ್ಯ ಎಸಗಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.

ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗ್ರಾಮದ ನಿವಾಸಿ ಮಹದೇವಮ್ಮ, ‘ಭಾಗ್ಯಜ್ಯೋತಿ’ ಯೋಜನೆಯ ಫಲಾನುಭವಿಯಾಗಿದ್ದು, ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದರು. ಆದರೆ, ಇತ್ತೀಚೆಗೆ ಅವರಿಗೆ ತಪ್ಪಾಗಿ 5 ಸಾವಿರ ರೂಪಾಯಿಗಳ ವಿದ್ಯುತ್ ಬಿಲ್ ಬಂದಿತ್ತು. ಈ ಕುರಿತು ಪ್ರಶ್ನಿಸುತ್ತಿದ್ದಂತೆಯೇ, ಮನೆಗೆ ಬಂದ ಚೆಸ್ಕಾಂ ಸಿಬ್ಬಂದಿ ಬಿಲ್ ಪಾವತಿಸುವಂತೆ ಒತ್ತಾಯಿಸಿದ್ದಾರೆ.

ತಾನು ಉಚಿತ ವಿದ್ಯುತ್ ಪಡೆಯುತ್ತಿದ್ದು, ಈ ಬಿಲ್ ಪಾವತಿಸಲು ಸಾಧ್ಯವಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರೂ, ಸಿಬ್ಬಂದಿ ಕೇಳುವ ಸ್ಥಿತಿಯಲ್ಲಿರಲಿಲ್ಲ. ಬಲವಂತವಾಗಿ ಫ್ಯೂಸ್ ಮತ್ತು ಮೀಟರ್ ಬೋರ್ಡ್ ತೆಗೆಯಲು ಮುಂದಾದಾಗ, ಅಂಧ ವೃದ್ಧೆ ಮಹದೇವಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ, “ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತೀಯಾ?” ಎಂದು ಕೋಪಗೊಂಡ ಸಿಬ್ಬಂದಿ ಅವರನ್ನು ತಳ್ಳಿದ್ದಾರೆ ಎನ್ನಲಾಗಿದೆ.

ಈ ದೌರ್ಜನ್ಯದಿಂದಾಗಿ ಕೆಳಗೆ ಬಿದ್ದ ಮಹದೇವಮ್ಮಗೆ ಗಾಯಗಳಾಗಿದ್ದು, ಅವರನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಬಡವರ ಮೇಲೆ ದರ್ಪ ತೋರಿದ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸ್ವತಃ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿಯೇ ಇಂತಹ ಘಟನೆ ನಡೆದಿರುವುದು ಸರ್ಕಾರದ ಆಡಳಿತ ವೈಖರಿಗೆ ಮುಜುಗರ ತಂದಿದೆ.

Previous articleವಿಜಯಪುರದ ಮುಳವಾಡದಲ್ಲಿ PCB ಘಟಕ: ಎಂ.ಬಿ. ಪಾಟೀಲ್
Next articleಬೆಂಗಳೂರಿನಲ್ಲಿ ನೊಬೆಲ್ ಪುರಸ್ಕೃತರ ಸಂವಾದ – ಭವಿಷ್ಯತ್ತಿನ ಕುರಿತ ಚರ್ಚೆ

LEAVE A REPLY

Please enter your comment!
Please enter your name here