ಮಂಡ್ಯ: ಮಳವಳ್ಳಿ ತಾಲೂಕಿನ ಶಿವನಸಮುದ್ರದ ಬಳಿ ಎರಡು ದಿನಗಳಿಂದ ನಾಲೆಯಲ್ಲಿ ಸಿಲುಕಿಕೊಂಡಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಶ್ಲಾಘನೀಯ ಕಾರ್ಯಾಚರಣೆಯ ಮೂಲಕ ಯಶಸ್ವಿಯಾಗಿ ರಕ್ಷಿಸಿದೆ.
ಮೂಲತಃ ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಬಳಿ ಈ ಆನೆ ಓಡಾಡುತ್ತಿರುವುದನ್ನು ಘಟಕದ ಸಿಬ್ಬಂದಿ ಗುರುತಿಸಿದ್ದರು. ಶನಿವಾರ (ನ. 15) ರಾತ್ರಿ ಸುಮಾರು 20 ಅಡಿ ಆಳವಿರುವ ಕೆನಲ್ ಗೇಟ್ ಮೂಲಕ ನೀರು ಪೂರೈಸುವ ನಾಲೆಗೆ ಆನೆ ತಪ್ಪಾಗಿ ಇಳಿದಿತ್ತು. ಆದರೆ ಅಲ್ಲಿನ ನೀರಿನ ಹರಿವು ಅತ್ಯಂತ ವೇಗವಾಗಿದ್ದರಿಂದ ಆನೆಗೆ ಮೇಲಕ್ಕೆ ಏರುವುದು ಸಾಧ್ಯವಾಗಿರಲಿಲ್ಲ.
ಭಾನುವಾರ ಬೆಳಗ್ಗೆ ಆನೆ ಕಾಣದಿರುವುದನ್ನು ಗಮನಿಸಿದ ಅಧಿಕಾರಿಗಳು ನಾಲೆಯನ್ನು ಪರಿಶೀಲಿಸಿದಾಗ ಅದು ನಾಲೆಯಲ್ಲಿ ಸಿಲುಕಿಕೊಂಡಿರುವುದು ದೃಢಪಟ್ಟಿತು. ದಿನಪೂರ್ತಿ ಸ್ವತಃ ಬಲದ ಮೇಲೆ ಬರುತ್ತದೆಯೇ ಎಂದು ಗಮನಿಸಿದರೂ ಆನೆ ಮೇಲಕ್ಕೆ ಬರದೇ ಇರುವ ಕಾರಣ, ಅರಣ್ಯ ಇಲಾಖೆ ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಮುಂದಾಯಿತು.
ಡಿಸಿಎಫ್ ರಘು, ವನ್ಯಜೀವಿ ವಲಯ ಮೈಸೂರು ವಿಭಾಗದ ಡಿಸಿಎಫ್ ಪ್ರಭು ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ನಾಲೆಯ ನೀರಿನ ಹರಿವನ್ನು ಕಡಿಮೆ ಮಾಡಿ ಕಾರ್ಯಾಚರಣೆ ಪ್ರಾರಂಭಿಸಲಾಯಿತು.
ಮೊದಲು ಆನೆಗೆ ಆಹಾರ ನೀಡಿ ಅದರ ವಿಶ್ವಾಸವನ್ನು ಗಳಿಸಿದ ಅಧಿಕಾರಿಗಳು ನಂತರ ಗನ್ ಮೂಲಕ ಅರವಳಿಕೆ ಮದ್ದು (tranquilizer) ನೀಡಿ ಆನೆಯನ್ನು ಪ್ರಜ್ಞಾಹೀನಗೊಳಿಸಿದರು. ಆನೆಯನ್ನು ಯಾವುದೇ ಗಾಯವಾಗದಂತೆ ನೋಡಿಕೊಂಡು, ಹೈಡ್ರಾಲಿಕ್ ಕ್ರೇನ್ ಮೂಲಕ ಹಗ್ಗದ ಸಹಾಯದಿಂದ ಮೇಲಕ್ಕೆ ಎತ್ತಲಾಯಿತು. ಬಳಿಕ ಅದನ್ನು ಸುರಕ್ಷಿತವಾಗಿ ಕಂಟೇನರ್‌ನಲ್ಲಿ ಇಟ್ಟು ಲಾರಿ ಮೂಲಕ ಬೇರೆ ಕಾಡಿನ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
ದೀರ್ಘಕಾಲ ನೀರಿನಲ್ಲಿ ಸಿಲುಕಿಕೊಂಡಿದ್ದ ಪರಿಣಾಮ ಆನೆಯ ಸೊಂಡಿಲಿನ ತುದಿ ಬಿಳಿಯಾಗಿದ್ದು, ಕಾಲು ಭಾಗದಲ್ಲಿ ಫಂಗಸ್ ಸೋಂಕಿನ ಲಕ್ಷಣಗಳೂ ಕಾಣಿಸಿಕೊಂಡಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಆರೋಗ್ಯ ಮೇಲ್ವಿಚಾರಣೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.
ಅರಣ್ಯ ಇಲಾಖೆ ನಡೆಸಿದ ಈ ಕಾರ್ಯಾಚರಣೆಗೆ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

























