ಕಾವೇರಿ ಆರತಿ: ರಾಜ್ಯದ ಒಳಿತಿಗಾಗಿ, ರೈತರಿಂದ ವಿರೋಧವಿಲ್ಲ ಡಿ.ಕೆ. ಶಿವಕುಮಾರ್

0
25

ಕಾವೇರಿ ಕರ್ನಾಟಕದ ಜೀವನಾಡಿ. ಅದರ ಪಾವಿತ್ರ್ಯತೆ ಮತ್ತು ಸಮೃದ್ಧಿಯನ್ನು ಗೌರವಿಸಲು, ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಕೃಷ್ಣರಾಜಸಾಗರದಲ್ಲಿ (ಕೆಆರ್‌ಎಸ್) ಅದ್ದೂರಿ “ಕಾವೇರಿ ಆರತಿ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 26 ರಿಂದ 30 ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಈ ವಿಶಿಷ್ಟ ಆಚರಣೆಯು ಗಂಗಾ ಆರತಿಯಂತೆಯೇ ಮನಮೋಹಕವಾಗಿರಲಿದೆ.

ಇದರ ಕುರಿತಾಗಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕದ ಒಳಿತಿಗಾಗಿ ಈ ಆರತಿಯನ್ನು ನಡೆಸಲಾಗುತ್ತಿದೆ, ರೈತರಿಂದ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಪೂಜೆ ಮಾಡಿದರೆ ರೈತರು ಯಾಕೆ ವಿರೋಧ ಮಾಡುತ್ತಾರೆ?” ಶಿವಕುಮಾರ್ ಎಂದು ಪ್ರಶ್ನಿಸಿದ್ದಾರೆ.

ವಿಶೇಷ ವ್ಯವಸ್ಥೆಗಳು: ಈ ಐದು ದಿನಗಳ ಕಾವೇರಿ ಆರತಿ ಕಾರ್ಯಕ್ರಮವನ್ನು ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಪ್ರತಿದಿನ 10 ರಿಂದ 15 ಸಾವಿರಕ್ಕೂ ಹೆಚ್ಚು ಜನರು ಈ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಭಕ್ತರು ಮತ್ತು ಪ್ರವಾಸಿಗರಿಗಾಗಿ ವಿಶೇಷ ಸಿಹಿ ವಿತರಣಾ ವ್ಯವಸ್ಥೆಯನ್ನು ಮಾಡಲಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನದಂತೆ ಉಚಿತವಾಗಿ ಲಾಡುಗಳನ್ನು ವಿತರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಉದ್ಘಾಟನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು: ಸೆಪ್ಟೆಂಬರ್ 26 ರಂದು ಸಂಜೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ. ಇದು ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ಸಂಪ್ರದಾಯಗಳನ್ನು ಒಳಗೊಂಡ ಕಾವೇರಿ ಆರತಿಯಾಗಿದ್ದು, ಕೃಷ್ಣರಾಜಸಾಗರವು ಇದಕ್ಕೆ ಸಾಕ್ಷಿಯಾಗಲಿದೆ.

ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ನಡೆಯಲಿರುವ ನಾಲ್ಕು ದಿನಗಳ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಏಕಕಾಲಕ್ಕೆ 10 ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಎನ್‌ಆರ್‌ಎಂಎಲ್ ಮತ್ತು ಸರ್ಕಾರದ ಸಹಾಯಧನ, ಸವಲತ್ತುಗಳ ಪ್ರಚಾರಕ್ಕಾಗಿ 150ಕ್ಕೂ ಹೆಚ್ಚು ಮಳಿಗೆಗಳನ್ನು ಸಹ ಸಿದ್ಧಪಡಿಸಲಾಗಿದೆ.

ಒಂದು ಕಡೆ ಈ ಕಾರ್ಯಕ್ರಮವು ಸಂಭ್ರಮಕ್ಕೆ ಕಾರಣವಾಗಿದ್ದರೆ, ಇನ್ನೊಂದು ಕಡೆ ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಅವರು ಈ ಕಾರ್ಯಕ್ರಮವನ್ನು ವಿರೋಧಿಸಿದ್ದಾರೆ. “ಪ್ರಾಯೋಗಿಕ ಕಾವೇರಿ ಆರತಿ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಮಾಡಿ ಆರತಿ ಪ್ರಕ್ರಿಯೆ ನಡೆಸಲು ಸರ್ಕಾರವೇ ಮುಂದಾಗಿದೆ. ಅಣೆಕಟ್ಟೆ ಬಳಿ ಯಾವುದೇ ಚಟುವಟಿಕೆ ಮಾಡಬಾರದೆಂದು ನ್ಯಾಯಾಲಯ ತಡೆ ನೀಡಿದ್ದರೂ, ಅಧಿಕಾರಿಗಳು ಕಾವೇರಿ ಆರತಿ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅಧಿಕಾರದ ದರ್ಪ ಮತ್ತು ಹಣದ ಮದದಿಂದ ಕಾನೂನಿನ ಉಲ್ಲಂಘನೆ ಮಾಡಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್ ಅವರು ಈ ಆರೋಪಗಳನ್ನು ಅಲ್ಲಗಳೆದಿದ್ದು, ಕಾವೇರಿ ಆರತಿಯು ಕರ್ನಾಟಕದ ಜನತೆಯ ಒಳಿತಿಗಾಗಿ ನಡೆಸಲಾಗುತ್ತಿದೆ ಮತ್ತು ರೈತರಿಂದ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Previous articleಬೆಂಗಳೂರು: ವಿಪ್ರೋ ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ
Next articleಮಂಗಳೂರು: ಖಾಸಗಿ ಬಸ್‌ಗಳಿಗೆ ಬಾಗಿಲು ಕಡ್ಡಾಯ- ರಾಮಲಿಂಗಾ ರೆಡ್ಡಿ

LEAVE A REPLY

Please enter your comment!
Please enter your name here