ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖನೆಯಲ್ಲಿ ರೈತರಿಗೆ ಕುಡಿಯುವ ನೀರಿನ ಆರ್.ಓ ಅಳವಡಿಸುವಂತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ರೈತ ಮುಖಂಡರೊಂದಿಗೆ ಸಭೆಯನ್ನು ಅವರು ನಡೆಸಿದರು. ಸಭೆಯಲ್ಲಿ ಮೈಶುಗರ್ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್, ಜನರಲ್ ಮ್ಯಾನೇಜರ್ (ತಾಂತ್ರಿಕ) ಅಪ್ಪ ಸಹೇಬ್ ಪಾಟೀಲ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಪ್ರತೀಕ್ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಮೈ ಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಡಿ. ಗಂಗಾಧರ್ ಮೈ ಶುಗರ್ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವಿಕೆ ಹಾಗೂ ಕಾರ್ಖಾನೆಯ ಇನ್ನಿತರೆ ವಿಷಯಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಹಾಜರಿದ್ದ ರೈತ ಮುಖಂಡರುಗಳು ಬಾಯ್ಲರ್ ತೊಂದರೆಯಿಂದ ಕಬ್ಬು ಅರೆಯುವ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ, ಇದರಿಂದ ರೈತರು ಎತ್ತಿನ ಗಾಡಿ ಹಾಗೂ ಕಬ್ಬಿನೊಂದಿಗೆ ಮೈ ಶುಗರ್ ಹೊರ ಆವರಣದಲ್ಲಿ ಕಾಯುವ ಪರಿಸ್ಥಿತಿ ಎದುರಾಗಿದೆ. ಕಬ್ಬು ಅರೆಯುವಿಕೆ ಕುರಿತು ಸರಿಯಾದ ಮಾಹಿತಿ ದೊರೆಯುತ್ತಿಲ್ಲ ಹಾಗೂ ಇನ್ನಿತರೆ ಸಮಸ್ಯೆಗಳ ಬಗ್ಗೆ ಸಭೆ ಗಮನ ಸೆಳೆದರು.
ಜಿಲ್ಲಾಧಿಕಾರಿಗಳು ಮಾತನಾಡಿ, “ಮೈ ಶುಗರ್ ಹೊರಾವರಣದಲ್ಲಿ ಪ್ರತಿ ದಿನ ಕಬ್ಬು ಅರೆಯುವಿಕೆಯ ಮಾಹಿತಿಯನ್ನು ಅನಾವರಣಗೊಳಿಸಬೇಕು ಹಾಗೂ ಒಬ್ಬರು ಗಾರ್ಡ್ ಸೂಪರ್ ವೈಸರ್ ಅನ್ನು ಮಾಹಿತಿ ನೀಡಲು ನೇಮಕ ಮಾಡಬೇಕು” ಎಂದರು.
“ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯಾಗಬೇಕು, ಕ್ಯಾಂಟೀನ್ ತೆರೆಯಲು ಸ್ಥಳದ ವ್ಯವಸ್ಥೆ ಮಾಡಿ ಆಸಕ್ತರು ಇಚ್ಛಿಸಿದಲ್ಲಿ ತೆರೆಯಲು ಅವಕಾಶ ಮಾಡಿಕೊಡಿ, ಇದರಿಂದ ರೈತರು ಆಹಾರ ಖರೀದಿಸಲು ದೂರದ ಸ್ಥಳಕ್ಕೆ ತೆರಳುವುದು ತಪ್ಪುತ್ತದೆ” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ಕಬ್ಬು ಅರೆಯುವಿಕೆಯ ವೇಗ ಕಡಿಮೆ ಇದ್ದು, ಪ್ರತಿ ದಿನ 2400 ರಿಂದ 2500 ಟನ್ ಕಬ್ಬು ಅರೆಯುವ ರೀತಿ ವೇಗ ಹೆಚ್ಚಿಸಿ ಕೊಳ್ಳಲು ಕ್ರಮ ವಹಿಸಬೇಕು. ಸುತ್ತ ಮುತ್ತಲಿನ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ರಿಕವರಿ 9.6 ರಿಂದ 9.7 ಇದ್ದು, ಮೈಶುಗರ್ ನಲ್ಲಿ ಕಡಿಮೆ ಇದೆ. ಈ ಕುರಿತಂತೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಬೇಕು” ಎಂದು ನಿರ್ದೇಶನ ಕೊಟ್ಟರು.