ಬಸನಗೌಡ ಪಾಟೀಲ್ ಯತ್ನಾಳ್. ಬಿಜೆಪಿಯ ಬಂಡಾಯ ನಾಯಕ. ಪಕ್ಷದಿಂದ ಅಮಾನತುಗೊಂಡಿರುವ ವಿಜಯನಗರ ಕ್ಷೇತ್ರದ ಶಾಸಕ. 2028ರ ವಿಧಾನಸಭೆ ಚುನಾವಣೆಗೂ ಮೊದಲು ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ಮಂಡ್ಯದ ಮದ್ದೂರು ಪಟ್ಟಣದಲ್ಲಿ ಮಾತನಾಡಿದ ಅವರು, “ರಾಜ್ಯ ಬಿಜೆಪಿ ಹೊಂದಾಣಿಕೆ ರಾಜಕಾರಣವನ್ನು ಕೈಬಿಡಬೇಕು. ನನ್ನನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳ ಬೇಕು. ಇಲ್ಲದೆ ಹೋದರೆ ನಾನು ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಹೊಸ ಹಿಂದೂ ಪಕ್ಷವನ್ನು ಕಟ್ತೇವೆ” ಹೇಳಿದ್ದಾರೆ.
“ಬಿಜೆಪಿಯವರು ನನ್ನನ್ನು ಗೌರವದಿಂದ ವಾಪಸ್ ಕರೆಸಿಕೊಳ್ಳಲಿ. ಇಲ್ಲದಿದ್ದರೆ ನಾನು ಹಾಗೂ ಪ್ರತಾಪ್ ಸಿಂಹ ಸೇರಿ ಹೊಸ ಹಿಂದೂ ಪಕ್ಷವನ್ನು ಕಟ್ಟುತ್ತೇವೆ. ಅದರ ಹೆಸರು ಕರ್ನಾಟಕ ಹಿಂದೂ ಪಾರ್ಟಿ. ಪಕ್ಷದ ಗುರುತು ಜೆಸಿಬಿ. ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ತೆಗೆದು ಹಿಂದೂಗಳಿಗೆ ಹಂಚುತ್ತೇನೆ. ಅಕ್ರಮವಾಗಿ ಕಟ್ಟಿದ ಮಸೀದಿಗಳ ಕಲಾಶ್, ಹಿಂದೂಗಳೆಲ್ಲಾ ಜಾತಿರಾಜಕಾರಣ ಮಾಡಲ್ಲ ಎಂದು ಪ್ರತಿಜ್ಞೆ ಮಾಡಿ” ಎಂದು ಹೇಳಿದರು.
“ನಾನು ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಮಾಡುವವರು ಡಮಾರ್. ವಕ್ಫ್ ಅನುದಾನ ಗೋರಕ್ಷಕರಿಗೆ ನೀಡುತ್ತೇನೆ. ಹಿಂದೂಗಳ ದಾನ ಹಿಂದೂಗಳ ದೇವಾಲಯ ಅಭಿವೃದ್ಧಿಗೆ ಮಾತ್ರ ಮೀಸಲಿರಬೇಕು. ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ, ಪಾಕಿಸ್ತಾನದಲ್ಲಿರುವ ಹಿಂದೂಗಳು ಭಾರತಕ್ಕೆ ಕರೆತರಬೇಕು ಎಂದಿದ್ರು ಅಂಬೇಡ್ಕರ್. ಮದ್ದೂರಿನ ಘಟನೆ ನೋಡಿದ್ರೆ ಅಂಬೇಡ್ಕರ್ ಹೇಳಿದ್ದು ಸತ್ಯ ಎನಿಸುತ್ತದೆ. ಮೃತರ ಮೆರವಣಿಗೆ ವೇಳೆ ತಮಟೆ ಬಾರಿಸಲು ಮಸೀದಿ ಮುಂದೆ ಬಿಡಲ್ಲ. ನಮ್ಮ ಸರ್ಕಾರ ಬಂದರೆ ಮಸೀದಿ ಮುಂದೆ ಒಂದು ಗಂಟೆ ಡ್ಯಾನ್ಸ್ ಮಾಡಲು ಅವಕಾಶ ಕೊಡುತ್ತೇನೆ” ಎಂದರು.
“ನೀವೆಲ್ಲಾ ಸೇರಿರುವುದು ವ್ಯಕ್ತಿ ಸಲುವಾಗಿ ಅಲ್ಲ, ಸನಾತನ ಧರ್ಮದ ಉಳಿವಿನ ಸಲುವಾಗಿ. ಇನ್ಮುಂದೆ ಜಾತಿ ನೋಡಿ ಓಟು ಹಾಕಬೇಡಿ. ಬಿಜೆಪಿಯವರು ಗೌರವದಿಂದ ನನ್ನ ವಾಪಸ್ ತಗೊಳ್ಳಿ” ಎಂದು ಯತ್ನಾಳ್ ಹೇಳಿದರು.
ಮದ್ದೂರಲ್ಲಿ ಯತ್ನಾಳ ಮಾತನಾಡಿದ್ದೇನು? ಬಸನಗೌಡ ಪಾಟೀಲ್ ಯತ್ನಾಳ್ ಮದ್ದೂರಿನಲ್ಲಿ ನಡೆಸಿದ ಭಾಷಣದ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದರು. ತಮ್ಮ ನೇರ ನುಡಿಗಳಿಗೆ ಹೆಸರುವಾಸಿಯಾದ ಯತ್ನಾಳ್, ನಿನ್ನೆ ಅಲ್ಲಿಗೆ ಭೇಟಿ ನೀಡಿದ್ದ ಬಿಜೆಪಿ ನಾಯಕರಾದ ಸಿ.ಟಿ. ರವಿ ಮತ್ತು ಪ್ರತಾಪ್ ಸಿಂಹ ಅವರಿಗಿಂತ ಹೆಚ್ಚು ಜನ ಬೆಂಬಲ ಗಳಿಸಿದರು. ಸಭೆಯಲ್ಲಿ ನೆರೆದಿದ್ದ ಜನರು “ಯತ್ನಾಳ್, ಯತ್ನಾಳ್” ಎಂದು ಘೋಷಣೆ ಕೂಗಿ ತಮ್ಮ ಬೆಂಬಲವನ್ನು ಸೂಚಿಸಿದರು.
ಯತ್ನಾಳ್ ತಮ್ಮ ಭಾಷಣದಲ್ಲಿ, “ಮದ್ದೂರಿಗೆ ಬಂದ ಬಿಜೆಪಿಯವರ ಬಗ್ಗೆ ಜನ ಆಸಕ್ತಿ ತೋರಿಸಲಿಲ್ಲ. ನಿನ್ನೆ ಸಿ.ಟಿ. ರವಿ ಮಾತನಾಡುತ್ತಿದ್ದರು. ಯತ್ನಾಳ್, ಯತ್ನಾಳ್ ಎಂದು ನೀವು ಕೂಗಿದ್ದೀರಿ. ನಾನು ಮತ್ತು ಪ್ರತಾಪ್ ಸಿಂಹ ಎಲ್ಲ ಹಿಂದುಗಳ ಪರವಾಗಿ ಮಾತನಾಡುತ್ತೇವೆ. ಬಿಜೆಪಿಯಲ್ಲಿ ಕೆಲವು ನಾಯಕರು ಇದ್ದಾರೆ. ಅವರು ಎಂದಿಗೂ ಹಿಂದುಗಳ ಪರವಾಗಿ ಮಾತನಾಡುವುದಿಲ್ಲ. ಅವರೆಲ್ಲ ಬರೀ ಬೋಗಸ್,” ಎಂದು ಟೀಕಿಸಿದರು.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್‌ರನ್ನು ಬಿಜೆಪಿ ಹೈಕಮಾಂಡ್ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಆದರೆ ಅವರು ಈಗ ಪಕ್ಷಕ್ಕೆ ತಮ್ಮನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಬಿಜೆಪಿ ನಾಯಕರಿಗೆ ಹೇಳುತ್ತಿದ್ದಾರೆ.