ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಘಾಟಿ ಸುಬ್ರಮಣ್ಯಕ್ಕೆ ತೆರಳುವ ಭಕ್ತರಿಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಜುಲೈ 26ರ ಭಾನುವಾರ ಈ ಪ್ಯಾಕೇಜ್‌ಗೆ ಚಾಲನೆ ಸಿಗಲಿದೆ.
ಕೆಎಸ್ಆರ್‌ಟಿಸಿ ಕೇಂದ್ರ ವಿಭಾಗ ಬೆಂಗಳೂರು ನಗರದ ಸಮೀಪ ಇರುವ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ವಿಶೇಷ ಟೂರ್ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಪ್ರವಾಸಿ ಪ್ಯಾಕೇಜ್ ವಾರಾಂತ್ಯವಾದ ಶನಿವಾರ, ಭಾನುವಾರ ಮಾತ್ರ ಇರಲಿದೆ.
ಅಶ್ವಮೇಧ ಕ್ಲಾಸಿಕ್ ಸಾರಿಗೆ ಬಸ್ ಅನ್ನು ಈ ಟೂರ್ ಪ್ಯಾಕೇಜ್‌ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬೆಳಗ್ಗೆ 6.30ಕ್ಕೆ ಬೆಂಗಳೂರು ನಗರದಿಂದ ಹೊರಟು ಸಂಜೆ 8 ಗಂಟೆಗೆ ವಾಪಸ್ ಆಗುವಂತೆ ಪ್ಯಾಕೇಜ್ ರೂಪಿಸಲಾಗಿದೆ.
ದರ ಮತ್ತು ಮಾರ್ಗ ವಿವರ: ಬೆಂಗಳೂರು-ಘಾಟಿ ಸುಬ್ರಮಣ್ಯ ಟೂರ್ ಪ್ಯಾಕೇಜ್‌ಗೆ ಕೆಎಸ್ಆರ್‌ಟಿಸಿ ವಯಸ್ಕರಿಗೆ 650 ರೂ. ಮತ್ತು ಮಕ್ಕಳಿಗೆ (6-12 ವರ್ಷ) 500 ರೂ. ದರವನ್ನು ನಿಗದಿ ಮಾಡಿದೆ.
ಈ ಪ್ರವಾಸಿ ಪ್ಯಾಕೇಜ್ ಬಸ್ ಬೆಂಗಳೂರು ನಗರದಿಂದ ಬೆಳಗ್ಗೆ 6.30ಕ್ಕೆ ಹೊರಡಲಿದೆ. ಶಿವಗಂಗೆಯಲ್ಲಿ ಗಂಗಾಧರ ದೇವಾಲಯ, ಹೊನ್ನಮ್ಮ ದೇವಿ ದೇವಾಲಯ ವೀಕ್ಷಣೆ ಮಾಡಿಕೊಂಡು ಸಿದ್ಧಗಂಗಾ ಮಠಕ್ಕೆ ಬಸ್ ಸಂಚಾರವನ್ನು ನಡೆಸಲಿದೆ.
ಅಲ್ಲಿಂದ ಬಸ್ ದೇವರಾಯನದುರ್ಗ ಭೋಗ ನರಸಿಂಹ ದೇವಾಲಯ, ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ, ವಿಧುರಾಶ್ವಥದ ಅತ್ವತ್ಥ ನಾರಾಯಣ ಸ್ವಾಮಿ ದೇವಾಲಯ ವೀಕ್ಷಣೆ ಬಳಿಕ ಘಾಟಿ ಸುಬ್ರಮಣ್ಯಕ್ಕೆ ತೆರಳಲಿದೆ.
ಘಾಟಿ ಸುಬ್ರಮಣ್ಯ ಮತ್ತು ಲಕ್ಷ್ಮೀ ನರಸಿಂಹ ದೇವಾಲಯ ವೀಕ್ಷಣೆ ಮಾಡಿದ ಬಳಿಕ ಬಸ್ ಬೆಂಗಳೂರು ನಗರಕ್ಕೆ ವಾಪಸ್ ಹೊರಡಲಿದೆ. ರಾತ್ರಿ 8ಕ್ಕೆ ಬಸ್ ಬೆಂಗಳೂರು ನಗರವನ್ನು ತಲುಪಲಿದೆ.
ಈ ಪ್ರವಾಸಿ ಪ್ಯಾಕೇಜ್ ಬುಕ್ ಮಾಡಲು ಜನರು www.ksrtc.in & www.karnataka.gov.in ವೆಬ್ ಸೈಟ್‌ಗೆ ಭೇಡಿ ನೀಡಿ. ದೂರವಾಣಿ ಸಂಖ್ಯೆಗಳು 080-26252625.
ಕರ್ನಾಟಕ ಸರ್ಕಾರ ಈಗಾಗಲೇ ಘಾಟಿ ಸುಬ್ರಮಣ್ಯದ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಘಾಟಿ ಸುಬ್ರಮಣ್ಯ ಅಭಿವೃದ್ಧಿಗಾಗಿಯೇ ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಈ ಪ್ರಾಧಿಕಾರಕ್ಕೆ ಐವರನ್ನು ನಾಮ ನಿರ್ದೇಶನ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಘಾಟಿ ಸುಬ್ರಮಣ್ಯ ದೇವಾಲಯವಿದ್ದು ವಾರಾಂತ್ಯದಲ್ಲಿ ಬೆಂಗಳೂರು ನಗರದಿಂದ ನೂರಾರು ಭಕ್ತರು ದೇವರ ದರ್ಶನಕ್ಕಾಗಿ ತೆರಳುತ್ತಾರೆ. ಆದ್ದರಿಂದ ಸರ್ಕಾರ ಘಾಟಿ ಸುಬ್ರಮಣ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಂಡಿದೆ.
ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರದ ಮೊದಲ ನಾಮ ನಿರ್ದೇಶಿತ ನಿರ್ದೇಶಕರು ಜಿ. ಎಸ್.ರಂಗಪ್ಪ, ಕೆ.ಎಸ್.ರವಿ, ಲಕ್ಷ್ಮ ನಾಯಕ, ಆರ್.ವಿ.ಮಹೇಶ್ ಕುಮಾರ್, ಎಂ. ಹೇಮಲತಾ. ಈ ಪ್ರಾಧಿಕಾರಕ್ಕೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಉಪಾಧ್ಯಕ್ಷರು, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಸದಸ್ಯರಾಗಿದ್ದಾರೆ.
2024ರ ಜುಲೈ 1ರಿಂದ ಜಾರಿಗೆ ಬರುವಂತೆ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಜಾರಿಗೆ ಬಂದಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ಷೇತ್ರವನ್ನು ಖ್ಯಾತಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.