ಚಿತ್ತಾಪುರ RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ: ಹೈಕೋರ್ಟ್

0
50

ಕಲಬುರಗಿ: ಚಿತ್ತಾಪುರದಲ್ಲಿ ಪಥಸಂಚಲನ ಆಯೋಜನೆ ಕುರಿತ ವಿವಾದಕ್ಕೆ ಇದೀಗ ತೆರೆ ಬಿದ್ದಿದೆ. ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್‌ಎಸ್‌ಎಸ್‌) ನಡುವಿನ ಹಗ್ಗಜಗ್ಗಾಟದ ನಡುವೆ, ಕಲಬುರಗಿ ಹೈಕೋರ್ಟ್ ಪೀಠವು ಷರತ್ತುಬದ್ಧ ಅನುಮತಿ ನೀಡಿದೆ.
ಕೋರ್ಟ್ ಆದೇಶದ ಪ್ರಕಾರ, ನವೆಂಬರ್ 16ರಂದು ಮಧ್ಯಾಹ್ನ 3:30ರಿಂದ ಸಂಜೆ 5:45ರವರೆಗೆ ಪಥಸಂಚಲನ ನಡೆಯಲು ಅವಕಾಶ ನೀಡಲಾಗಿದೆ. ಈ ವೇಳೆ ಮಾತ್ರ 350 ಗಣವೇಷಧಾರಿಗಳು ಭಾಗವಹಿಸಬಹುದು ಎಂದು ಸ್ಪಷ್ಟ ಸೂಚಿಸಲಾಗಿದೆ.

ಆರ್‌ಎಸ್‌ಎಸ್ ಅರ್ಜಿ ಮತ್ತು ಸರ್ಕಾರದ ವಾದ: ಆರ್‌ಎಸ್‌ಎಸ್ ಪರವಾಗಿ ವಕೀಲ ಅರುಣ್ ಶ್ಯಾಂ ಅವರು 600 ಗಣವೇಷಧಾರಿಗಳಿಗೆ ಪಥಸಂಚಲನಕ್ಕೆ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ರಾಜ್ಯದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಅವರು “ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗರಿಷ್ಠ 300 ಜನರಿಗೆ ಮಾತ್ರ ಅನುಮತಿ ನೀಡಬೇಕು” ಎಂದು ವಾದ ಮಂಡಿಸಿದರು.

ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನಂತರ, ಹೈಕೋರ್ಟ್ ಪೀಠವು 350 ಮಂದಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಇದರಲ್ಲಿ 300 ಗಣವೇಷಧಾರಿಗಳು ಮತ್ತು 50 ಬ್ಯಾಂಡ್ ಸದಸ್ಯರು ಭಾಗವಹಿಸಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

100ನೇ ವರ್ಷದ ಆಚರಣೆಗೆ ಹಿನ್ನೆಲೆ: ಆರ್‌ಎಸ್‌ಎಸ್‌ನ 100ನೇ ವರ್ಷದ ಆಚರಣೆಯ ಅಂಗವಾಗಿ ಚಿತ್ತಾಪುರದಲ್ಲಿ ಈ ಪಥಸಂಚಲನ ಆಯೋಜನೆ ಮಾಡಲಾಗುತ್ತಿದೆ. ಸಂಘದ ಪರವಾಗಿ ವಕೀಲ ಅರುಣ್ ಶ್ಯಾಂ “ಇದು ಸಾಂಸ್ಕೃತಿಕ ಮತ್ತು ಸಂಘಟನಾ ಹಬ್ಬದ ಭಾಗವಾಗಿದ್ದು, ಸ್ಥಳೀಯರ ಭಾವನೆ ಈ ಕಾರ್ಯಕ್ರಮಕ್ಕೆ ಸೇರಿಕೊಂಡಿದೆ” ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು.

ಕೋರ್ಟ್ ನೀಡಿದ ಷರತ್ತುಗಳು: ಪಥಸಂಚಲನ ನಿಗದಿತ ಸಮಯದಲ್ಲಿ ಮಾತ್ರ ನಡೆಯಬೇಕು (3:30 PM – 5:45 PM)̤ ಮಾರ್ಗದಲ್ಲಿ ಯಾವುದೇ ರೀತಿಯ ಅಶಾಂತಿ ಅಥವಾ ಟ್ರಾಫಿಕ್ ಅಡಚಣೆ ಉಂಟಾಗಬಾರದು. ಕಾರ್ಯಕ್ರಮ ಶಾಂತಿಯುತವಾಗಿ ನಡೆಯಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ಈ ತೀರ್ಪಿನಿಂದ ಚಿತ್ತಾಪುರದ ಪಥಸಂಚಲನ ಕುರಿತ ರಾಜಕೀಯ ಮತ್ತು ಕಾನೂನು ಗೊಂದಲಕ್ಕೆ ತಾತ್ಕಾಲಿಕ ಅಂತ್ಯ ದೊರೆತಿದೆ.

Previous articleರಾವಣನ 11ನೇ ತಲೆಯ ಗುಟ್ಟು ರಟ್ಟು: ಬೆಂಗಳೂರಿನಲ್ಲಿ ಅನಾವರಣಗೊಳ್ಳಲಿದೆ ಲಂಕಾಧಿಪತಿಯ ಅಂತರಂಗದ ಕಥೆ!
Next articleರಾಜ್ಯದ ನಾಲ್ಕು ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡಲು ಎಂ.ಬಿ. ಪಾಟೀಲ ಶಿಫಾರಸು

LEAVE A REPLY

Please enter your comment!
Please enter your name here