ಧಾರವಾಡದಲ್ಲಿ ಮೃತಪಟ್ಟ ವ್ಯಕ್ತಿ ಗದುಗಿನಲ್ಲಿ ಜೀವಂತ

0
40

ಗದಗ: ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ ನಂತರ ಸಂಬಂಧಿಕರು ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ ನಂತರ ಮೃತಪಟ್ಟಿದ್ದ ಎನ್ನಲಾದ ವ್ಯಕ್ತಿ ಕಣ್ಣುಬಿಟ್ಟಿರುವ ಅಪರೂಪದ ಘಟನೆ ಶುಕ್ರವಾರ ಮಧ್ಯರಾತ್ರಿ ಬೆಟಗೇರಿಯಲ್ಲಿ ನಡೆದಿದೆ.

ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ ನಂತರ ವ್ಯಕ್ತಿ ಕಣ್ಣು ತೆರೆದಿದ್ದು, ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ. ವ್ಯಕ್ತಿ ಚಿಕಿತ್ಸೆಗಾಗಿ ಬೆಟಗೇರಿಯ ಜರ್ಮನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಏನಾಗಿತ್ತು?: ಬೆಟಗೇರಿಯ ವಸ್ತ್ರೋದ್ಯಮಿ 38 ವರ್ಷದ ನಾರಾಯಣ ವನ್ನಾಲ ಅವರಿಗೆ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಸತತ ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ವಾರ್ಡ್‌ಗೆ ಸ್ಥಳಾಂತರಿಸಿದ್ದರು. ಸ್ವಲ್ಪ ಸಮಯದ ನಂತರ ವಾರ್ಡ್‌ಗೆ ಆಗಮಿಸಿದ ವೈದ್ಯರು ವ್ಯಕ್ತಿ ನಿಧನರಾಗಿದ್ದಾರೆಂದು ಘೋಷಿಸಿದ್ದರು. ದುಃಖತಪ್ತ ಕುಟುಂಬಸ್ಥರು ಅಂಬ್ಯುಲೆನ್ಸ್‌ನಲ್ಲಿ ವ್ಯಕ್ತಿಯನ್ನು ಕರೆ ತಂದಿದ್ದಾರೆ. ನಾರಾಯಣ ವನ್ನಾಲ ಮನೆ ಮುಂದೆ ಅಂಬ್ಯುಲೆನ್ಸ್‌ನಿಂದ ಇಳಿಸಿ ಮನೆಯೊಳಗೆ ಒಯ್ಯುವಾಗ ಕುಟುಂಬದ ಸದಸ್ಯರಿಗೆ ವ್ಯಕ್ತಿಯ ಹೊಟ್ಟೆ ಮೇಲೆ ಕೆಳಗೆ ಆದಂತೆ ಅನಿಸಿದೆ. ಮನೆಯೊಳಗೆ ವ್ಯಕ್ತಿಯನ್ನು ಇಳಿಸಿದ ನಂತರ ಮತ್ತೆ ಅದೇ ರೀತಿಯಾಗಿದ್ದರಿಂದ ಕುತೂಹಲದಿಂದ ಧಾರವಾಡದ ವೈದ್ಯರು ಸುತ್ತಿಕೊಟ್ಟಿದ್ದ ಬಟ್ಟೆ ಬಿಚ್ಚಿದಾಗ ವ್ಯಕ್ತಿ ಕಣ್ಣು ತೆರೆದು ಸಹಜವಾಗಿ ಉಸಿರಾಟ ನಡೆಸಿರುವದು ಕಂಡು ಬಂದಿದೆ.

ಇದರಿಂದ ಸಂತಸಗೊಂಡ ಕುಟುಂಬಸ್ಥರು ಕೂಡಲೇ ಜರ್ಮನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇಷ್ಟರೊಳಗಾಗಿ ಕುಟುಂಬದ ಕೆಲ ಸದಸ್ಯರು ವ್ಯಕ್ತಿಯ ಅಂತ್ಯಸಂಸ್ಕಾರದ ಸಮಯ ಸಾರ್ವಜನಿಕರಿಗೆ ತಿಳಿಸಲು ಊರ ತುಂಬ ಫ್ಲೆಕ್ಸ್‌ಗಳನ್ನು ಹಾಕಿಸಿದ್ದರು. ಬೆಟಗೇರಿಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಲಾಗಿತ್ತು. ಕೆಲ ಸಂಬಂಧಿಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ಥಳೀಯ ಪತ್ರಿಕೆಗಳಲ್ಲಿ ನಾರಾಯಣ ವನ್ನಾಲ ನಿಧನರಾಗಿದ್ದಾರೆಂದು ಶ್ರದ್ಧಾಂಜಲಿ ಜಾಹೀರಾತು ಸಹ ನೀಡಿದ್ದರು. ಸ್ಥಳೀಯ ಪತ್ರಿಕೆಗಳಲ್ಲಿ ನಿಧನದ ಜಾಹೀರಾತು ಪ್ರಕಟವಾಗಿವೆ. ಆಸ್ಪತ್ರೆಯ ವೈದ್ಯರು ವ್ಯಕ್ತಿ ನಿಧನವಾಗಿದ್ದಾರೆಂದು ಘೋಷಿಸಿದ ನಂತರ ಕಣ್ಣು ತೆರೆದು ಸಹಜವಾಗಿ ಉಸಿರಾಟ ನಡೆಸಿರುವದು ಕುಟುಂಬಸ್ಥರು, ಸಂಬಂಧಿಕರಿಗೆ ಸಂತಸವನ್ನುಂಟು ಮಾಡಿದೆ.

Previous articleಕೇರಳದಲ್ಲಿ ಘೋರ ಘಟನೆ: ದೆವ್ವ ಬಿಡಿಸುವ ನೆಪದಲ್ಲಿ ಯುವತಿಗೆ ನರಕ ದರ್ಶನ
Next articleಸಿದ್ದರಾಮಯ್ಯನವರನ್ನು ಇಳಿಸಿದರೆ ಕಾಂಗ್ರೆಸ್ ಸ್ಮಶಾನಕ್ಕೆ ಹೋದಂತೆ

LEAVE A REPLY

Please enter your comment!
Please enter your name here