ರಾಮಕೃಷ್ಣ ಆರ್
ಮಂಗಳೂರು: ಅಂಗನವಾಡಿ ಮೂಲಕ ಗರ್ಭಿಣಿಯರು, ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿದ `ಪೋಷಣ್ ಆ್ಯಪ್’ನ ಮಾಹಿತಿಗಳು ಸೋರಿಕೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ವಂಚನೆಗಳಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಮಾತೃ ವಂದನಾ' ಫಲಾನುಭವಿಗಳಿಗೆ ಅಪರಿಚಿತ ವ್ಯಕ್ತಿಗಳಿಂದ ದೂರವಾಣಿ ಕರೆಗಳು ಬರುತ್ತಿದ್ದು,
ಈ ಯೋಜನೆಯಡಿ ನಿಮಗೆ 20,000 ರೂ. ಮತ್ತು 12,000 ರೂ. ಸಿಗಲಿದೆ. ಆದರೆ ಅದಕ್ಕಾಗಿ ಮೊದಲು ನಾವು ಕಳಿಸುವ ಗೂಗಲ್ ಪೇ ಕ್ಯೂಆರ್ ಕೋಡ್‌ಗೆ 4,598 ರೂ.ಗಳನ್ನು ಹಾಕಬೇಕು’ ಎಂದು ಒತ್ತಾಯಿಸಲಾಗುತ್ತಿದೆ. ಇದನ್ನು ನಂಬುವ ಫಲಾನುಭವಿಗಳಿಗೆ ಈ ವಂಚಕರು ಟೋಪಿ ಹಾಕುತ್ತಿದ್ದಾರೆ.
ಕರೆ ಮಾಡುವವರು ಫಲಾನುಭವಿಗಳ ಸಂಪೂರ್ಣ ಮಾಹಿತಿಯನ್ನು ಹೇಳುತ್ತಿರುವುದರಿಂದ ಕೆಲವರು ಹಣ ಪಾವತಿ ಮಾಡಿ ಮೋಸ ಹೋಗುತ್ತಿದ್ದಾರೆ. ಈ ರೀತಿ ಹಣ ಪಾವತಿ ಮಾಡುತ್ತಿರುವರ ಖಾತೆಯಲ್ಲಿದ್ದ ಬಾಕಿ ಹಣವನ್ನು ಕೂಡ ಲಪಟಾಯಿಸಲಾಗುತ್ತಿದ್ದು, ಮಂಗಳೂರಿನಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ.
ಈ ಬಗ್ಗೆ ಅಂಗನವಾಡಿ ಕೇಂದ್ರಗಳಿಂದ ಫಲಾನುಭವಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದ್ದರೂ, ಕೆಲವರು ನಂಬಿ ಮೋಸ ಹೋಗುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗಳಿಗೆ ದೂರು ನೀಡಿದರೂ ಯಾವುದೇ ಕ್ರಮವನ್ನು ಇಲ್ಲಿಯವರೆಗೆ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಹೇಗೆ ವಂಚನೆ?:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಾತೃ ವಂದನಾ'ದ ಹೆಸರಿನಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಪೋಷಣ್ ಆ್ಯಪ್ ರೂಪಿಸಲಾಗಿ ಆ ಮೂಲಕ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿದೆ. ಪೋಷಣ್ ಮೂಲಕ ಗರ್ಭಿಣಿಯರು, ಬಾಣಂತಿ ಫಲಾನುಭವಿಗಳಿಗೆ ಸವಲತ್ತು ಒದಗಿಸುವ ಕಾರ್ಯವನ್ನು ಹಲವು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದಾರೆ. ಇದೀಗ ಸೈಬರ್ ಕ್ರಿಮಿನಲ್ಸ್ ಪೋಷನ್ ಆ್ಯಪ್‌ನ್ನು ಟ್ರ್ಯಾಕ್ ಮಾಡಿ ಬಾಣಂತಿಯರ ಮಾಹಿತಿ ಪಡೆದು ವಂಚಿಸುತ್ತಿದ್ದಾರೆ.
ಮಾತೃ ವಂದನಾ’ ಯೋಜನೆಯ ವೈಯಕ್ತಿಕ ವಿವರಗಳ ಮಾಹಿತಿಗಳನ್ನು ಪೋಷಣ್ ಟ್ರ‍್ಯಾಕರ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಲಾಗಿದ್ದು, ಅದು ಸೋರಿಕೆಯಾಗುತ್ತಿದೆ.
ಫಲಾನುಭವಿಗಳ ಸಂಪೂರ್ಣ ಮಾಹಿತಿ ಪಡೆದ ಸೈಬರ್ ವಂಚಕರರಿಂದ `ಮಾತೃ ವಂದನಾ’ ಫಲಾನುಭವಿಗಳಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬರುತ್ತಿದೆ. ಹಿಂದಿ ಭಾಷೆಯಲ್ಲಿ ಮಾತನಾಡುವ ವ್ಯಕ್ತಿ ಫಲಾನುಭವಿಗಳಿಗೆ ಕೇಂದ್ರದಿಂದ 20 ಸಾವಿರ ರೂ. ಮತ್ತು 12 ಸಾವಿರ ಸಿಗುತ್ತಿದೆ ಎಂದು ನಂಬಿಸಿ ಈ ಹಣ ಪಡೆಯಲು ಇಲಾಖೆಗೆ 4598 ರೂ. ಗೂಗಲ್ ಪೇ ಮಾಡುವಂತೆ ಒತ್ತಾಯಿಸುತ್ತಾನೆ.
ಮಾತ್ರವಲ್ಲ ಯೋಜನೆಗಾಗಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರಿಗೂ ಸ್ವಲ್ವ ಹಣ ನೀಡುವಂತೆ ಹೇಳುತ್ತಾನೆ. ಈ ಮೂಲಕ ಹಣ ದೋಚುವ ಹತ್ತಾರು ಪ್ರಕರಣಗಳು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಪೊಲೀಸರಿಗೆ ದೂರು ನೀಡಿ ಗರ್ಭಿಣಿಯರು ಹಾಗೂ ಬಾಣಂತಿಯರನ್ನೂ ಟಾರ್ಗೆಟ್ ಮಾಡುತ್ತಿರುವ ಸೈಬರ್ ವಂಚಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಾತೃ ವಂದನಾ ಫಲಾನುಭವಿಗಳ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.