ಹೊಸ ಇಂಗ್ಲಿಷ್ ಶಾಲೆ ಆರಂಭಿಸಿದರೆ ಹೋರಾಟ

ಧಾರವಾಡ: ರಾಜ್ಯ ಸರಕಾರ ಹೊಸ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಆದೇಶ ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡಲು ಕರ್ನಾಟಕ ವಿದ್ಯಾವರ್ಧಕ ಸಂಘ ನಿರ್ಧರಿಸಿದೆ.
ಕನ್ನಡ ಮಾಧ್ಯಮ ಕಡ್ಡಾಯಕ್ಕೆ ಆಗ್ರಹಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಪಾಲ್ಗೊಂಡ ಸಾಹಿತಿಗಳು, ಚಿಂತಕರು, ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದ ನಂತರ ಹೋರಾಟ ಮಾಡವು ನಿರ್ಧಾರಕ್ಕೆ ಬರಲಾಯಿತು. ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸಲು ಎಲ್ಲರೂ ಪ್ರಯತ್ನಿಸಬೇಕು. ಕನ್ನಡ ಮಾಧ್ಯಮ ಶಿಕ್ಷಣ ಕುರಿತು ಸಂಘದಲ್ಲಿ ಉಪಸಮಿತಿ ರಚನೆ ಮಾಡಲಾಗುವುದು. ಕನ್ನಡ ಮಾಧ್ಯಮ ಕುರಿತು ಚರ್ಚಿಸಲು ವಿದ್ಯಾವರ್ಧಕ ಸಂಘದಲ್ಲಿ ೧ ದಿನದ ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದರು.
ಕೇಂದ್ರ ಸರಕಾರ ಸಿಬಿಎಸ್‌ಇ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಅವಕಾಶ ನೀಡಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳ ಪಾಲಕರಿಗೆ ಇದರ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುವಂತೆ ಶಾಲಾ ಆಡಳಿತ ಮಂಡಳಿಯವರನ್ನು ಆಗ್ರಹಿಸುವುದು ಅವಶ್ಯಕವಾಗಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡ ಗಣ್ಯರು ಕನ್ನಡ ಉಳಿಸುವ ದಿಸೆಯಲ್ಲಿ ಸಂಘ ಹಮ್ಮಿಕೊಳ್ಳುವ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ಭರವಸೆ ನೀಡಿದರು. ವೆಂಕಟೇಶ ಮಾಚಕನೂರ ಮಾತನಾಡಿ, ಸಿಬಿಎಸ್‌ಇ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಕಲಿಸಲು ಮುಂದಾಗದಿದ್ದರೆ ಹೋರಾಟ ಸಂಘಟಿಸುವುದು ಅನಿವಾರ್ಯವಾಗುತ್ತದೆ ಎಂದರು.
ಸಿದ್ದರಾಮ ಮನಹಳ್ಳಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿಸ್ತೃತವಾಗಿ ವಿವರಿಸಿದರಲ್ಲದೇ ಸಿಬಿಎಸ್‌ಇ ಶಾಲೆಗಳಲ್ಲಿ ಮಾತೃಭಾಷೆ ಕಲಿಸುವ ಸುತ್ತೋಲೆ ಕುರಿತು ಮಾತನಾಡಿದರು.
ಡಾ. ವೀರಣ್ಣ ರಾಜೂರ ಮಾತನಾಡಿ, ಯಾವುದೇ ಶಿಕ್ಷಣ ನೀತಿಯಿದ್ದರೂ, ಮಕ್ಕಳ ಬೌದ್ಧಿಕ, ಮಾನಸಿಕ, ನೈತಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಆದ್ಯತೆ ಸಿಗಬೇಕೆಂದು ಅಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಆಶಯ ನುಡಿಗಳನ್ನಾಡಿದರು. ಡಾ. ಶಾಂತಿನಾಥ ದಿಬ್ಬದ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸತೀಶ ತುರಮರಿ, ಶಿವಾನಂದ ಬಾವಿಕಟ್ಟಿ, ಮೋಹನ ದೇಸಾಯಿ, ಶಿವಶಂಕರ ಹಿರೇಮಠ, ಡಾ. ಡಿ.ಎಂ. ಹಿರೇಮಠ, ಕೆ.ಎಚ್. ನಾಯಕ, ಡಾ. ರಾಜೇಶ್ವರಿ ಮಹೇಶ್ವರಯ್ಯ, ನಿಂಗಣ್ಣ ಕುಂಟಿ, ವಿಶ್ವೇಶ್ವರಿ ಹಿರೇಮಠ, ಎಂ.ಡಿ. ವಕ್ಕುಂದ ಮೊದಲಾದವರಿದ್ದರು.

ಸಭೆಯ ನಿರ್ಣಯಗಳು
ರಾಜ್ಯ ಸರಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವುದಕ್ಕೆ ಖಂಡನೆ
ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ೧೨೫ ಅಂಕಗಳ ಬದಲಿಗೆ ೧೦೦ ಅಂಕ ನಿಗದಿಪಡಿಸಿರುವುದಕ್ಕೆ ವಿರೋಧ
ಕೇಂದ್ರ ಸರಕಾರ ಸಿಬಿಎಸ್‌ಇ ಶಾಲೆಗಳಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಅವಕಾಶ ನೀಡಿರುವಂತೆ ರಾಜ್ಯ ಸರಕಾರ ಕೂಡ ಅನುಷ್ಠಾನಗೊಳಿಸಲು ಆಗ್ರಹ