RSS ಪಥಸಂಚಲನ ನಿರ್ಬಂಧ ಪ್ರಕರಣ, ಸರಕಾರಕ್ಕೆ ಮತ್ತೆ ಮುಖಭಂಗ

0
46

ಧಾರವಾಡ: ಆರ್‌ಎಸ್‌ಎಸ್ ಪಥಸಂಚಲನ ಸೇರಿದಂತೆ ಇತರೆ ಖಾಸಗಿ ಕಾರ್ಯಕ್ರಮಗಳನ್ನು ಸರಕಾರಿ ಆವರಣದಲ್ಲಿ ನಡೆಸದಂತೆ ನಿರ್ಬಂಧ ವಿಧಿಸಿದ್ದ ಸರಕಾರದ ಆದೇಶಕ್ಕೆ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿದೆ. ಸರಕಾರದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಗುರುವಾರ ವಜಾಗೊಳಿಸಿದೆ. ಇದರೊಂದಿಗೆ ಆರ್‌ಎಸ್‌ಎಸ್ ಪಥಸಂಚಲನದ ವಿಷಯವಾಗಿ ಮೇಲುಗೈ ಸಾಧಿಸಿದರೆ, ಕಾಂಗ್ರೆಸ್ ಸರಕಾರಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.

ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅ. 18ರಂದು ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿತು. ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ಬಿ. ಗೀತಾ ಅವರ ವಿಭಾಗೀಯ ಪೀಠ ಗುರುವಾರ ಈ ಆದೇಶ ಪ್ರಕಟಿಸಿದರು.

ಮೇಲ್ಮನವಿ ಸಲ್ಲಿಸಿರುವ ರಾಜ್ಯ ಸರ್ಕಾರವು ಏಕಸದಸ್ಯ ಪೀಠದ ಮುಂದೆ ಮಧ್ಯಂತರ ಆದೇಶ ತೆರವು ಕೋರಿ ಅರ್ಜಿ ಸಲ್ಲಿಸಲು ಮುಕ್ತವಾಗಿದೆ. ಒಂದೊಮ್ಮೆ ರಾಜ್ಯ ಸರ್ಕಾರವು ಅರ್ಜಿ ಸಲ್ಲಿಸಿದರೆ ಏಕಸದಸ್ಯ ಪೀಠವು ಅದನ್ನು ಪರಿಗಣಿಸಿ, ರಿಟ್ ಅರ್ಜಿಯನ್ನು ಅಂತಿಮವಾಗಿ ಇತ್ಯರ್ಥಪಡಿಸಲಿದೆ ಎಂಬ ಖಾತರಿ ಇದೆ. ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಆದೇಶ ಮಾಡಿದೆ.

ಸರಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ಮಧ್ಯಂತರ ಆದೇಶವು ಅರ್ಜಿದಾರರಿಗೆ ಮಾತ್ರ ಸೀಮಿತವಾಗಿರಬೇಕು ಎಂದರು. ಅದಕ್ಕೆ ಪೀಠವು ಏಕಸದಸ್ಯ ಪೀಠದ ಮುಂದೆ ಅದರ ಕುರಿತು ಮನವಿ ಮಾಡಬಹುದು. ಕೆಲವು ಪ್ರಕರಣಗಳಲ್ಲಿ ನಾವು ಹಾಗೆ ಮಾಡಲಾಗದು ಎಂದು ಅಭಿಪ್ರಾಯಪಟ್ಟಿತು.

ಅಶೋಕ ಹಾರನಹಳ್ಳಿ ವಾದ: ಅರ್ಜಿದಾರರ ಪರವಾಗಿ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ನ್ಯಾಯವಾದಿ ಅಶೋಕ ಹಾರನಹಳ್ಳಿ ಅವರು ವಾದ ಮಂಡಿಸಿದ್ದರು. ಆಟದ ಮೈದಾನ, ಸಾರ್ವಜನಿಕ ಸ್ಥಳಗಳು ತನಗೆ ಸೇರಿದ್ದು, ಅವುಗಳನ್ನು ಜನರು ಬಳಕೆ ಮಾಡಲು ಹಕ್ಕು ಹೊಂದಿಲ್ಲ ಎಂದು ಸರ್ಕಾರ ಭಾವಿಸಿದೆ. ಇದು ಸರಿಯಾದ ರೀತಿಯ ಕಾನೂನಿನ ವ್ಯಾಖ್ಯಾನವಲ್ಲ. ಏಕಸದಸ್ಯ ಪೀಠದ ಮುಂದೆ ಮಧ್ಯಂತರ ಆದೇಶ ತೆರವು ಕೋರುವುದಿಲ್ಲ. ಅದಕ್ಕಾಗಿ ಮೇಲ್ಮನವಿ ಸಲ್ಲಿಕೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ನಮ್ಮ ಆಕ್ಷೇಪವಿದೆ ಎಂದು ಹಾರನಹಳ್ಳಿಯವರು ವಾದ ಮಂಡಿಸಿದ್ದರು.

ಪ್ರತಿಯೊಂದು ಮೈದಾನ, ದಾರಿ ತಮಗೆ ಸೇರಿರುವುದರಿಂದ ಅದನ್ನು ನಿರ್ಬಂಧಿಸುವ ಅಧಿಕಾರ ತನಗೆ ಇದೆ ಎಂದು ಹೇಳಲಾಗದು. ಉದ್ಯಾನಕ್ಕೆ ಹೋಗುವವರನ್ನು ನೀವು ಅನುಮತಿ ಪಡೆಯಬೇಕು ಎಂದು ಸರ್ಕಾರ ಹೇಳಲಾಗದು. ಅಕ್ರಮ ಕೂಟ ನಿರ್ಬಂಧಿಸಲು ಹಲವು ಅಪರಾಧಿಕ ಸೆಕ್ಷನ್‌ಗಳು ಈಗಾಗಲೇ ಚಾಲ್ತಿಯಲ್ಲಿವೆ. ಸಕ್ಷಮ ಪ್ರಾಧಿಕಾರಗಳು ನಿರ್ಬಂಧ ವಿಧಿಸಲು ಕ್ರಮಕೈಗೊಳ್ಳಲಿವೆ. ಸಾರ್ವಜನಿಕ ಉದ್ಯಾನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ ಕ್ರಮಕೈಗೊಳ್ಳಲಿದೆ. ಸಾರ್ವಜನಿಕ ದಾರಿಗಳನ್ನು ನಿರ್ಬಂಧಿಸುವ ವಿಚಾರವು ನಗರ ಸ್ಥಳೀಯ ಸಂಸ್ಥೆಗಳಿಗೆ ಬರುತ್ತದೆ. ಇಲ್ಲಿ ಪೊಲೀಸ್ ಕಾಯಿದೆ ಮತ್ತು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳು ಬರುತ್ತವೆ. ಇಲ್ಲಿ ಸರ್ಕಾರಕ್ಕೆ ಯಾವುದೇ ಕೆಲಸ ಇಲ್ಲ. ಅದಾಗ್ಯೂ, ಸರ್ಕಾರ ಮೂಗು ತೂರಿಸಬೇಕು ಎಂದಾದರೆ ಅವರು ಕಾಯ್ದೆ ರೂಪಿಸಬೇಕೆ ವಿನಃ ಕಾರ್ಯಕಾರಿ ಆದೇಶದ ಮೂಲಕ ಜನರ ಹಕ್ಕನ್ನು ಕಸಿಯಲಾಗದು ಎಂಬ ಸಮರ್ಥ ವಾದಕ್ಕೆ ಮನ್ನಣೆ ಸಿಕ್ಕಂತಾಗಿದೆ.

ಈ ಎಲ್ಲ ವಾದ ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಸರಕಾರದ ಮೇಲ್ಮನವಿಯನ್ನು ತಿರಸ್ಕರಿಸಿ, ಏಕಸದಸ್ಯ ಪೀಠಕ್ಕೆ ಮಧ್ಯಂತರ ಆದೇಶ ತೆರವು ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಆದೇಶಿಸಿದರು.

Previous articleಕೆಎಸ್‌ಎಂಸಿಎಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಲಾಭಾಂಶ
Next articleಕಬ್ಬು ದರ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ

LEAVE A REPLY

Please enter your comment!
Please enter your name here