ದಾವಣಗೆರೆ: ಸಂಪುಟ ಪುನರಚನೆಯಾದರೆ ದಲಿತ ಎಡ ಸಮುದಾಯದ ಕೋಟಾದಡಿ ನನಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿರುವುದಾಗಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿಯ ಚರ್ಚೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ದೆಹಲಿಗೆ, ನ.15ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸಕ್ಕೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಮತ್ತೊಮ್ಮೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾವೂ ಸಚಿವ ಸ್ಥಾನಾಕಾಂಕ್ಷಿ, ಅದೂ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಕೋಟಾದಲ್ಲಿ ತಮಗೆ ಸಚಿವ ಸ್ಥಾನ ನೀಡಲಿ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರಾಜ್ಯದ ಅಭಿವೃದ್ಧಿ ಕುರಿತಂತೆ ಕೇಂದ್ರ ಸಚಿವರ ಬಳಿ ಚರ್ಚಿಸಲು ದೆಹಲಿಗೆ ಹೋಗಿರಬಹುದು. ಸಚಿವ ಸಂಪುಟ ಪುನಾರಚನೆಯು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಸಂಪುಟ ಪುನಾರಚನೆಯಾದರೆ ದಲಿತ ಎಡ ಸಮುದಾಯಕ್ಕೆ ಮೂರು ಸಚಿವ ಸ್ಥಾನವನ್ನು ನಾವು ಕೇಳುತ್ತೇವೆ ಎಂದು ಅವರು ತಿಳಿಸಿದರು.
ಹೈಕಮಾಂಡ್ ನನಗೆ ಅವಕಾಶ ನೀಡಿದರೆ ಅದನ್ನು ನಿಭಾಯಿಸಲು ತಯಾರಿದ್ದೇನೆ. ಸಚಿವರಾಗಿ ಉತ್ತಮ ಕಾರ್ಯ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನವನ್ನೂ ಮಾಡುತ್ತೇನೆ. ಸಹಜವಾಗಿಯೇ ನನಗೂ ಸಚಿವನಾಗುವ ಆಸೆ ಇದೆ. ಮಾಜಿ ಸಚಿವ ಕೆ.ಎನ್.ರಾಜಣ್ಣ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ಬಗ್ಗೆ ನನಗೆ ಯಾವುದೇ ಮಾಹಿತಿಯೂ ಇಲ್ಲ ಎಂದು ಅವರು ಹೇಳಿದರು.


























