ದಾವಣಗೆರೆ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹರಿಹರದ ಕಾಮಗಾರಿಗಳನ್ನು ಉದ್ಘಾಟಿಸಲು ಆಗಮಿಸಿದಾಗ ಶಿಷ್ಟಾಚಾರ ಉಲ್ಲಂಘಿಸಿದ್ದು, ಅಧಿಕೃತವಾಗಿ ನನಗೆ ಅಗೌರವ ತೋರಿಸಿದ್ದಾರೆ. ಆದ್ದರಿಂದ ಸಚಿವ ಜಾರಕಿಹೊಳಿ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಿ, ಶಿಸ್ತುಕ್ರಮಕ್ಕೆ ಆಗ್ರಹಿಸಿ ಸಭಾಪತಿಗಳಿಗೆ ದೂರು ಸಲ್ಲಿಸಿದ್ದೇನೆ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ 15 ರಂದು ಹರಿಹರದ ರಾಜನಹಳ್ಳಿ ಶ್ರೀಮಠದಲ್ಲಿ 5 ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಮಾಡಲು ಆಗಮಿಸಿದ್ದ ಸಚಿವ ಜಾರಕಿಹೊಳಿ ಅವರು, ಶಾಸಕನಾದ ನನ್ನ ಗಮನಕ್ಕೆ ತರದೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಧಿಕಾರಿಗಳಿಂದಲೂ ಮಾಹಿತಿಯಿಲ್ಲ, ಹಾಗಿದ್ದರೂ ನಾನು ಶ್ರೀಗಳಿಗೆ ಆಗಮಿಸುತ್ತೇನೆಂದು ಮೊದಲೇ ನೀಡಿದ್ದ ಭರವಸೆ ಉಳಿಸಿಕೊಳ್ಳಲು ಶ್ರೀಮಠಕ್ಕೆ ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದರು.
ಸತೀಶ ಜಾರಕಿಹೊಳಿ ಅವರ ಬಗ್ಗೆ ನನಗೆ ಗೌರವವಿದೆ. ಜಾರಕಿಹೊಳಿ ಸ್ಥಾನದಲ್ಲಿ ಯಾರೇ ಸಚಿವರಿದ್ದರು ನಾನು ಅಲ್ಲಿಯೇ ಪ್ರತಿಭಟಿಸುತ್ತಿದ್ದೆ. ಆದರೆ ಐದಾರು ದಿನ ಕಾದು ಅವರು ತಮ್ಮ ವರ್ತನೆ ಬದಲಿಸಿಕೊಂಡು ಕ್ಷಮೆಯಾಚಿಸುತ್ತಾರೆಂದರೆ, ಅವರಾಗಲೇ ಮುಖ್ಯಮಂತ್ರಿ ಆಗಿರುವೆನೆಂಬ ಅಮಲಿನಲ್ಲಿ ತೇಲುತ್ತಿದ್ದಾರೆ ಎಂದು ಕುಟುಕಿದರು.
ಜಾರಕಿಹೊಳಿ ನಡೆದುಕೊಂಡ ರೀತಿ ನೋಡಿದರೆ ಸಿದ್ಧರಾಮಯ್ಯನ ಬಣದವರು ಜಾರಕಿಹೊಳಿ ಮುಖ್ಯಮಂತ್ರಿಯಾಗುತ್ತಾರೆ ಎಂದಿರುವುದರಿಂದ ಅವರೇನಾದರೂ ಅಧಿಕಾರದ ಅಮಲಿನಲ್ಲಿದ್ದಾರಾ ಅನ್ನಿಸಿತು. ಆದರೆ ಅವರಿಗೆ ನೆನಪಿರಲಿ ಸಿದ್ದರಾಮಯ್ಯ ಪಕ್ಷವನ್ನು ಕಟ್ಟಿದ, ಪಕ್ಷಕ್ಕಾಗಿ ಬಹಳಷ್ಟು ಚುನಾವಣೆ ಮಾಡಿರುವ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಡಲು ತಯಾರಿಲ್ಲ. ಇನ್ನೂ ಜಾರಕಿಹೊಳಿಗೆ ನಿಮಗೆ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದು ಸಾಧ್ಯವಿಲ್ಲ.
ಈ ಮುಖ್ಯಮಂತ್ರಿ ಕುರ್ಚಿಯ ಗುದ್ದಾಟದಲ್ಲಿ ಅನೇಕರು ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದು, ಇದರಲ್ಲಿ ಜಾರಕಿಹೊಳಿ ಕೂಡ ಒಬ್ಬರು ಎಂದು ಅಸಮಾಧಾನ ಹೊರಹಾಕಿದರು.
ಈಗಾಗಲೇ ಸಭಾಪತಿಗಳಿಗೆ ಲಿಖಿತ ಮೂಲಕ ದೂರು ನೀಡಿದ್ದೇನೆ. ಹಕ್ಕುಚ್ಯುತಿಯನ್ನು ಮಂಡಿಸುತ್ತೇನೆ. ಕಾಂಗ್ರೆಸ್‌ನವರು ಎಲ್ಲರಿಗೂ ಸಿಗಬೇಕಾದ ಗೌರವ ಕೊಡುವುದು ಮುಖ್ಯ. ಕಾಮಗಾರಿಗಳನ್ನು ಕಾಂಗ್ರೆಸ್‌ನಿಂದ ಯಾರ್ಯಾರೋ ಉದ್ಘಾಟಿಸುವುದು ನೋಡಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್‌ನವರ ದುರಾಡಳಿತ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಜನತೆಯೇ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.

























