ದಾವಣಗೆರೆ: ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಹೊನ್ನಾಳಿ ಬಿಜೆಪಿ ಘಟಕದಿಂದ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಬಂದ್ ಕರೆದಿದ್ದ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೈಡ್ರಾಮಾ ನಡೆಯಿತು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆಗೆ ಮೆಕ್ಕೆಜೋಳ ಸುರಿದು ಪ್ರತಿಭಟನೆ ನಡೆಸುವ ವೇಳೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಮನವಿ ಮಾಡುತ್ತಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರು ಅರ್ಧ ಗಂಟೆ ಒಳಗಾಗಿ ಎಲ್ಲ ಅಂಗಡಿಗಳನ್ನ ತೆರೆಸದಿದ್ದರೆ ನಾವು ತೊಳ್ಬಲ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದಂತೆ ಸ್ಥಳದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಜಮಾವಣೆ ಆಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ವೇಳೆ ಸ್ಥಳಕ್ಕೆ ಕಾಂಗ್ರೆಸ್ ಶಾಸಕ ಡಿ.ಜೆ. ಶಾಂತನಗೌಡ ಮತ್ತು ಹೆಚ್.ಬಿ. ಮಂಜಪ್ಪ ಆಗಮಿಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೆಚ್.ಬಿ. ಮಂಜಪ್ಪ ಪೊಲೀಸರ ಮುಂದೆಯೇ ಬಿಜೆಪಿ ಮುಖಂಡನೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ಈಗ ಸಾಕಷ್ಟು ಟೀಕೆಗೆ ಒಳಗಾಗಿದೆ. ಹಲ್ಲೆ ನಡೆಸಿರುವ ಕಾರಣಕ್ಕೆ ಹಾಲಿ ಶಾಸಕರು ಮತ್ತು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನಡುವೆ ಕೆಲಕಾಲ ವಾಗ್ವಾದ ಏರ್ಪಟ್ಟು, ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆಯಿತು.
ಹಲ್ಲೆಗೊಳಗಾದ ಪುರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಪಾಲಾಕ್ಷಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ವ್ಯಾಪಾರಸ್ಥರ ಮನವೊಲಿಸಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೆವು. ಹೋರಾಟದ ಜಾಗಕ್ಕೆ ಕಾಂಗ್ರೆಸ್‌ನವರು ಬರುವ ಅವಶ್ಯಕತೆ ಏನಿತ್ತು? ಪೊಲೀಸರ ಎದುರಿನಲ್ಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಗೂಂಡಾ ರೀತಿ ನಮ್ಮ ಮೇಲೆ ವರ್ತನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ನಾವಿದನ್ನ ಸಹಿಸೋದಿಲ್ಲ. ಮಂಜಪ್ಪ ವಿರುದ್ಧ ನಾನು ದೂರು ಕೊಡುತ್ತೇನೆ. ಕೂಡಲೇ ಆತನನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನ ಈ ಗೂಂಡಾಗಿರಿ ಸಹಿಸೋದಿಲ್ಲ. ಪೊಲೀಸರ ಎದುರು ಮಂಜಪ್ಪ ಹಲ್ಲೆ ಮಾಡುತ್ತಾನೆ ಎಂದರೆ ಇವರಿಗೆ ಪೊಲೀಸರ ಅಭಯ ಇರುತ್ತದೆ. ಕೆಲ ಪೊಲೀಸರು ಕಾಂಗ್ರೆಸ್ ಏಜೆಂಟ್ ರೀತಿ ವರ್ತನೆ ಮಾಡುತ್ತಿದ್ದಾರೆ. ಹಲ್ಲೆ ಮಾಡಿದವರನ್ನ ಬಂಧಿಸಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಇನ್ನು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ನಾನು ಪಾಲಾಕ್ಷಪ್ಪ ಮೇಲೆ ಹಲ್ಲೆ ನಡೆಸಿಲ್ಲ. ಪಾಲಾಕ್ಷಪ್ಪ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು, ಕಾಂಗ್ರೆಸ್ ಪಕ್ಷದಿಂದಲೇ ಪುರಸಭೆ ಅಧ್ಯಕ್ಷರಾಗಿದ್ದರು, ಇಂದು ಬಿಜೆಪಿ ಬಾವುಟ ಹಿಡಿದು ಪ್ರತಿಭಟನೆ ಮಾಡುವ ವೇಳೆ ಪ್ರಶ್ನಿಸಿದೆ ಆಗ ಪಾಲಾಕ್ಷಪ್ಪ ನನಗೆ ಆವಾಜ್ ಹಾಕಿ ನನ್ನನ್ನು ತಳ್ಳಲು ಬಂದಾಗ ನಾನು ತಳ್ಳಿದೆ ಹೊರತು ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

























