ಸಂ.ಕ. ಸಮಾಚಾರ, ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಭೇಟಿ ಪೂರ್ವ ನಿಯೋಜಿತ. ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೂ ಈ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿ, ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಚುನಾವಣೆಗಳಿಗೆ ವ್ಯತ್ಯಾಸವಿದೆ. ಉತ್ತರ ಭಾರತದಲ್ಲಿ ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ವಿಭಜನೆ ಮಾಡಿ ಅದನ್ನು ಚುನಾವಣೆಗೆ ಬಳಸಿಕೊಳ್ಳುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಈ ವಿಭಜನೆ ನಡೆಯುದಿಲ್ಲ. ಕರ್ನಾಟಕದಲ್ಲೂ ಬಿಜೆಪಿಗೆ ಈ ವಿಚಾರ ಇಟ್ಟುಕೊಂಡು ಚುನಾವಣೆ ಗೆಲ್ಲಲು ಆಗಲಿಲ್ಲ. ಬಿಜೆಪಿ ಇಲ್ಲಿ ಯಾವತ್ತು ಗೆದ್ದಿಲ್ಲ. ಆದರೆ ಒಳ್ಳೆ ಫಲಿತಾಂಶ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಉತ್ತರ ಭಾರತದಲ್ಲಿ ಬೇರೆ ಬೇರೆ ವಿಷಯಗಳ ಮೂಲಕ ಜನರ ದಾರಿ ತಪ್ಪಿಸಿದ ಕಾರಣ ಯಶಸ್ಸು ಸಿಕ್ಕಿರಬಹುದು. ಚುನಾವಣೆ ಸಮೀಪವಿರುವಾಗ ಮಹಿಳೆಯರ ಖಾತೆಗೆ 10 ಸಾವಿರ ರೂ. ಹಾಕಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳದೆ ಹೋದರೆ ಮುಂದೆ ಎಲ್ಲಾ ಸರಕಾರಗಳು ಇದನ್ನು ಅನುಸರಿಸುತ್ತವೆ ಎಂದು ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದರು.
ಚುನಾವಣೆ ಹತ್ತಿರವಿರುವಾಗ ದುಡ್ಡು ಕೊಟ್ಟು ನಮಗೆ ಓಟ್ ಹಾಕಿ ಅಂತಾರೆ. ಚುನಾವಣೆ ಆಯೋಗ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆರ್‌ಜೆಡಿ ಜನರಿಗೆ ನೀಡಿದ್ದು ಆಶ್ವಾಸನೆ ಆದರೆ ಎನ್‌ಡಿಎ ಆಮಿಷವೊಡ್ಡಿದೆ. ಸರಕಾರದ ದುಡ್ಡನ್ನು ಚುನಾವಣೆಗೆ ಬಳಸಿ ಜನರಿಗೆ ಆಮಿಷ ನೀಡಿದ್ದಾರೆ ಎಂದವರು ಆರೋಪಿಸಿದರು.
ಮಂಗಳೂರಿನ ಕುಂಪಲದಲ್ಲಿ ನಾಯಿ ದಾಳಿಗೆ ವ್ಯಕ್ತಿಯೋರ್ವ ಬಲಿಯಾದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್, ಬೀದಿ ನಾಯಿ ಹಾವಳಿ ತಡೆಗಟ್ಟಲು ಸುಪ್ರೀಂ ಕೋರ್ಟ್ ಹೊಸ ಕಾನೂನು ಘೋಷಣೆ ಮಾಡಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನ ಗಮನಿಸಿ ನಗರಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಇದರ ಅನುಷ್ಠಾನ ಬಗ್ಗೆ ನಗರ ಪಾಲಿಕೆ, ಸಂಬಂಧ ಪಟ್ಟ ಇಲಾಖೆಗಳು ಚಿಂತನೆ ನಡೆಸುತ್ತವೆ ಎಂದರು.


























