ಚಿಕ್ಕಮಗಳೂರು: ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ಹಾಗೂ ಮುಖ್ಯಮಂತ್ರಿ ಸರ್ವಾಧಿಕಾರಿ ಧೋರಣೆಯಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಕೇಂದ್ರ ಜಲ ಶಕ್ತಿ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಆರೋಪಿಸಿದರು.
ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದಲ್ಲಿ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣ ಶತಮಾನೋತ್ಸವದ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮತದಾರ ಹಾಗೂ ನಾಗರಿಕರು ಸರ್ಕಾರದಿಂದ ಬಯಸುವುದು ಆರೋಗ್ಯ, ಶಿಕ್ಷಣ, ಸುರಕ್ಷಿತ ರಸ್ತೆ ಸಂಚಾರ. ಆದರೆ ರಾಜ್ಯದ ರಸ್ತೆ ಅಭಿವೃದ್ಧಿ ಕಾಣದೆ ಇರೋದಕ್ಕೆ ಚಿಕ್ಕಮಗಳೂರು-ಶೃಂಗೇರಿ ರಸ್ತೆ ಸಾಕ್ಷಿಯಾಗಿದೆ. ಹಿಂದೆ ಬಿಜೆಪಿಯ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸಿ ಶೇ. 40 ಕಮಿಷನ್ ಆರೋಪ ಮಾಡಿದ್ದರು. ಅದಕ್ಕಾಗಿ ಕೋಟ್ಯಾಂತರ ಖರ್ಚು ಮಾಡಿದ್ದರೂ, ಒಂದನ್ನೂ ಸಾಬೀತುಪಡಿಸಲಾಗಲಿಲ್ಲ. ಪ್ರಸ್ತುತ ಶೇ. 60 ಕಮಿಷನ್ ಪಡೆದು ಜನರ ಹಣ ತಿಂದು ತೇಗುತ್ತಿದ್ದು, ಉಚಿತ ಯೋಜನೆಗಳಿಂದ ರಾಜ್ಯ ದಿವಾಳಿಯಾಗುವ ಹಂತದಲ್ಲಿದೆ.
ಜನಾಭಿಪ್ರಾಯಕ್ಕೆ ಮನ್ನಣೆ ಇಲ್ಲ: ಜನ, ಧರ್ಮ, ಸಂಸ್ಕೃತಿಗಳಿಗೆ ಕಿಂಚಿತ್ತೂ ಬೆಲೆ ಕೊಡದ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ. ಭ್ರಷ್ಟ ರಾಜಕಾರಣದ ಪಾಪದ ಕೊಡ ತುಂಬಿದ್ದು, ಅದಕ್ಕೆ ತಕ್ಕ ಪ್ರಾಯಶ್ಚಿತ್ತವೂ ಆಗಬೇಕಾಗಿದೆ. ನೈಜ ಜನಪರ ಕಾಳಜಿಯನ್ನಿಟ್ಟು ಅಭಿವೃದ್ಧಿ ಮಾಡುವ ಮನಸ್ಸಿದ್ದರೆ ದೆಹಲಿಗೆ ಬಂದು ಪ್ರಧಾನಿಯ ಕಾರ್ಯ ವೈಖರಿ ನೋಡಿ ಕಲಿಯಿರಿ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದರು.


























