ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿ ಉಂಟಾಗುತ್ತಿರುವ ತೀವ್ರ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸಲು ವಿಪ್ರೋ ಸಂಸ್ಥೆ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಬರೆದಿದ್ದ ಪತ್ರಕ್ಕೆ ಉತ್ತರ ನೀಡಲಾಗಿದೆ.
ಇದು ಕಂಪನಿಯ ಖಾಸಗಿ ಆಸ್ತಿಯಾಗಿದ್ದು, ಸಾರ್ವಜನಿಕ ಬಳಕೆಗೆ ಅನುಮತಿ ಇಲ್ಲ. ಇಲ್ಲಿನ ಒಪ್ಪಂದದ ಷರತ್ತುಗಳು ಕಟ್ಟುನಿಟ್ಟಾಗಿದ್ದು, ಬದಲಾವಣೆ ಸಾಧ್ಯವಿಲ್ಲ ಎಂದು ವಿಪ್ರೋ ಸಂಸ್ಥಾಪಕ ಅಜೀಜ್ ಪ್ರೇಮ್‌ಜಿ ಪತ್ರವನ್ನು ಬರೆದಿದ್ದು, ಸರ್ಕಾರದ ಮನವಿಯನ್ನು ತಿರಸ್ಕರಿಸಿದ್ದಾರೆ.
ನಿರಾಕರಣೆಗೆ ಏನು ಕಾರಣ?: ನಮ್ಮ ಸರ್ಜಾಪುರ ಕ್ಯಾಂಪಸ್ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್) ಆಗಿದ್ದು, ಇದು ಜಾಗತಿಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಖಾಸಗಿ ಆಸ್ತಿಯಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವುದು ದೀರ್ಘಕಾಲಿಕ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಜ್ಞರ ನೇತೃತ್ವದಲ್ಲಿ ಅಧ್ಯಯನ ನಡೆಸುವುದಾದರೆ ಸರ್ಕಾರದೊಂದಿಗೆ ವಿಪ್ರೋ ಕೈಜೋಡಿಸಲು ಸಿದ್ಧ ಎಂದು ಭರವಸೆ ನೀಡಿದ್ದಾರೆ.
ಇದರಿಂದಾಗಿ, ಹೊರವರ್ತುಲ ರಸ್ತೆ ಟ್ರಾಫಿಕ್ ಸಮಸ್ಯೆಗೆ ಪರ್ಯಾಯ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳುವ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ. ಈಗಾಗಲೇ ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ವಿಚಾರಕ್ಕೆ ಕರ್ನಾಟಕ ಸರ್ಕಾರ ಟೀಕೆಗೆ ಗುರಿಯಾಗುತ್ತಿದೆ.
ಸಿಎಂ ಬರೆದ ಪತ್ರದಲ್ಲಿ ಏನಿತ್ತು?: ಸಿಎಂ ಸಿದ್ದರಾಮಯ್ಯ ಸೆ.19ರಂದು ಬರೆದ ಪತ್ರದಲ್ಲಿ, ಹೊರ ವರ್ತುಲ ರಸ್ತೆಯಲ್ಲಿ ಉಂಟಾಗುತ್ತಿರುವ ತೀವ್ರ ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸಲು ವಿಪ್ರೋ ಸಂಸ್ಥೆಯ ಸಹಕಾರವನ್ನು ಕೋರಿದ್ದರು.
ಬೆಂಗಳೂರು ನಗರ, ವಿಶೇಷವಾಗಿ ಹೊರ ವರ್ತುಲ ರಸ್ತೆಯ ಇಬ್ಲೂರು ಜಂಕ್ಷನ್ ಬಳಿ, ಗರಿಷ್ಠ ಸಂಚಾರದ ಅವಧಿಯಲ್ಲಿ (ಪೀಕ್ ಹವರ್) ತೀವ್ರವಾದ ಟ್ರಾಫಿಕ್ ದಟ್ಟಣೆಯನ್ನು ಎದುರಿಸುತ್ತಿದೆ. ಇದು ನಗರದ ಚಲನಶೀಲತೆ, ಉತ್ಪಾದಕತೆ ಮತ್ತು ನಾಗರಿಕರ ಜೀವನದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಇದಕ್ಕೆ ಪರಿಹಾರವಾಗಿ, ವಿಪ್ರೋದ ಸರ್ಜಾಪುರ ಕ್ಯಾಂಪಸ್ ಮೂಲಕ ಸೀಮಿತ ಪ್ರಮಾಣದಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದಲ್ಲಿ ಪರಸ್ಪರ ಒಪ್ಪಿತ ನಿಯಮಗಳು ಮತ್ತು ಅಗತ್ಯ ಭದ್ರತಾ ಕ್ರಮಗಳೊಂದಿಗೆ ಜಾರಿಗೆ ತರಬಹುದು ಎಂದು ಅವರು ಸಲಹೆ ನೀಡಿದ್ದರು.