ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಗೆ ರಿಯಾಯಿತಿ ಘೋಷಣೆ

0
51

ಬೆಂಗಳೂರು: ಬೆಂಗಳೂರು ನಗರ ಸಂಚಾರಿ ಪೊಲೀಸರು ನಗರದ ವಾಹನ ಸವಾರರಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇದ್ದರೆ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶ ನೀಡಿದ್ದಾರೆ. ಈ ಹಿಂದೆಯೂ ಇದೇ ಮಾದರಿ ಆಫರ್ ನೀಡಲಾಗಿತ್ತು.

ಈ ಕುರಿತು ಪ್ರಕಟಣೆ ಮೂಲಕ ಪೊಲೀಸರು ಮಾಹಿತಿ ನೀಡಿದ್ದಾರೆ. ಘನ ರಾಜ್ಯ ಸರ್ಕಾರವು ಸರ್ಕಾರದ ಆದೇಶ ಸಂಖ್ಯೆ: ಟಿಡಿ 27 ಟಿಡಿಓ 2023 ಬೆಂಗಳೂರು, ದಿನಾಂಕ 21.08.2025ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಈ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇ 50ರಷ್ಟು ರಿಯಾಯಿತಿಯನ್ನು ನೀಡಿ ಆದೇಶಿಸಿರುತ್ತದೆ.

ಈ ಆದೇಶವು ದಿನಾಂಕ: 23.08.2025 ರಿಂದ 12.09.2025 ರವರೆಗೆ ಜಾರಿಯಲ್ಲಿದ್ದು, ದಂಡವನ್ನು ಪಾವತಿಸದೇ ಇರುವ ಪ್ರಕರಣಗಳಿಗೆ ಶೇ.50 ರಷ್ಟು ದಂಡವನ್ನು ಪಾವತಿಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ವಿಧಾನವನ್ನು ಪೊಲೀಸರು ವಿವರಿಸಿದ್ದಾರೆ.

  • ಕರ್ನಾಟಕ ಸ್ಟೇಟ್ ಪೊಲೀಸ್ (ಕೆ.ಎಸ್.ಪಿ) ಆ್ಯಪ್ ಮುಖಾಂತರ ಪಾವತಿಸಬಹುದಾಗಿದೆ.
  • ಬೆಂಗಳೂರು ಸಂಚಾರ ವಿಭಾಗದಿಂದ ಪರಿಚಯಿಸಿರುವ ಬಿಟಿಪಿಅಸ್ತ್ರಂ ಆಪ್‌ ಮೂಲಕ ಪಾತಿಸಬಹುದು.
  • ಹತ್ತಿರದ ಸಂಚಾರ ಪೊಲೀಸ್ ಠಾಣೆಯಲ್ಲಿ ನೋಂದಣಿ ಸಂಖ್ಯೆ ವಿವರ ನೀಡಿ ಪಾವತಿಸಿ
  • ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಪಾವತಿಸಬಹುದಾಗಿದೆ.
  • ಕರ್ನಾಟಕ ಒನ್/ ಬೆಂಗಳೂರು ಒನ್‌ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ

ಬೆಂಗಳೂರು ನಗರದ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ವಾಹನ ಸವಾರರು 2023ರ ಫೆಬ್ರವರಿ 11ರ ತನಕ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಈ ರಿಯಾಯಿತಿಯಲ್ಲಿ ದಂಡ ಪಾವತಿ ಮಾಡಬಹುದು. ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವನೆ ಒಪ್ಪಿದ್ದ ಕರ್ನಾಟಕ ಸರ್ಕಾರ ಈ ಹಿಂದೆ ಜುಲೈ 5 ರಿಂದ 11ರ ತನಕ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಅವಕಾಶ ನೀಡಿತ್ತು. ಈಗ ಅವಧಿ ಮುಕ್ತಾಯವಾಗಿದ್ದು, ಮತ್ತೊಮ್ಮೆ ರಿಯಾಯಿತಿ ಘೋಷಣೆ ಮಾಡಲಾಗಿದೆ.

ಈ ಹಿಂದೆಯೂ ಇದೇ ಮಾದರಿ ಘೋಷಣೆಗಳನ್ನು ಮಾಡಲಾಗಿತ್ತು. ಶೇ.50ರ ರಿಯಾಯಿತಿ ನೀಡಿದ ನಂತರ 51 ಕೋಟಿ ರೂ.ಗೂ ಹೆಚ್ಚು ದಂಡವನ್ನು 6 ದಿನಗಳಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಸಂಗ್ರಹ ಮಾಡಲಾಗಿತ್ತು.

ಬೆಂಗಳೂರು ನಗರದಲ್ಲಿ ಲಕ್ಷಾಂತರ ವಾಹನಗಳಿದ್ದು, ಕೋಟ್ಯಾಂತರ ರೂಪಾಯಿ ದಂಡ ಬಾಕಿ ಇದೆ. ಇದನ್ನು ವಸೂಲಿ ಮಾಡಲು ನೋಟಿಸ್ ನೀಡುವ ಬದಲು ಸಂಚಾರಿ ಪೊಲೀಸರು ಈ ಮಾದರಿ ರಿಯಾಯಿತಿ ಘೋಷಣೆ ಮಾಡುತ್ತಾರೆ. ವಾಹನ ಸವಾರರು ಇದಕ್ಕೆ ಬೆಂಬಲ ನೀಡಿದ್ದಾರೆ.

ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ 80ರಷ್ಟು ಬೆಂಗಳೂರು ನಗರದ್ದೇ ಇದೆ. ಆದ್ದರಿಂದ ದಂಡ ಸಂಗ್ರಹಕ್ಕಾಗಿ ಪೊಲೀಸರು ರಿಯಾಯಿತಿ ಐಡಿಯಾವನ್ನು ಮಾಡಿ, ವಾಹನ ಸವಾರರಿಂದ ದಂಡ ಕಟ್ಟಿಸಿಕೊಳ್ಳುತ್ತಾರೆ.

Previous articleವಿಜಯಪುರ: ಧರ್ಮಸ್ಥಳ ಪ್ರಕರಣದಲ್ಲಿ ಚಿವುಟೋದು ಮತ್ತೆ ತೂಗೋದು ಬಿಜೆಪಿ ಕೆಲಸ, ಸೊರಕೆ ಗಂಭೀರ ಆರೋಪ
Next articleಹಾವೇರಿ: ಕಾಡುಹಂದಿಗಳ ದಾಳಿಗೆ 50 ಎಕರೆ ಬೆಳೆ ನಾಶ

LEAVE A REPLY

Please enter your comment!
Please enter your name here