ಬೆಂಗಳೂರಲ್ಲಿ ರಸ್ತೆ ಗುಂಡಿ ಆಯ್ತು, ಈಗ ಮೊಳೆ ಗಂಡಾಂತರ!

0
57

ಬೆಂಗಳೂರು ಖ್ಯಾತಿ ವಿಶ್ವದ್ಯಾಂತ ಹರಡಿದೆ. ಆದರೆ ನಗರದಲ್ಲಿ ವಾಹನ ಸವಾರರು ಮಾತ್ರ ಪ್ರತಿನಿತ್ಯ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಟ್ರಾಫಿಕ್‌ ಸಮಸ್ಯೆ ಒಂದೆಡೆಯಾದರೆ, ಮತ್ತೊಂದೆಡೆ ಗುಂಡಿಯಲ್ಲಿ ರಸ್ತೆಯನ್ನು ಹುಡುಕಿ ವಾಹನ ಚಲಾಯಿಸುತ್ತಿದ್ದಾರೆ. ಇದರ ಜೊತೆಗೆ ಮತ್ತೆ ಪಂಕ್ಚರ್ ಮಾಫಿಯಾ ತಲೆಯೆತ್ತಿದೆ.

ಜೇಬಿನಲ್ಲಿ ಜೀವ ಹಿಡಿದುಕೊಂಡು ವಾಹನವನ್ನು ಚಲಾಯಿಸುವ ಪರಿಸ್ಥಿತಿ ಎದುರಾಗಿದೆ. ಈ ಎಲ್ಲಾ ಸಮಸ್ಯೆಗಳು ಸವಾರರ ಸಹನೆಯ ಕಟ್ಟೆಯೊಡೆಯುವಂತೆ ಮಾಡಿವೆ. ನಗರದ ಹೊರವಲಯದಲ್ಲಿ ಪಂಚರ್ ಮಾಫಿಯಾ ಮತ್ತೆ ತನ್ನ ಕಬಂಧಬಾಹು ಚಾಚಿದೆ. ಟಿ. ದಾಸರಹಳ್ಳಿಯ ನಾಗಸಂದ್ರದಿಂದ ಗೊರಗುಂಟೆಪಾಳ್ಯಕ್ಕೆ ಸಾಗುವ ಪ್ರಮುಖ ರಸ್ತೆಯಲ್ಲಿ ವಾಹನಗಳ ಟಯರ್‌ಗಳನ್ನು ಗುರಿಯಾಗಿಸಿ ಸಣ್ಣ ಮೊಳೆಗಳನ್ನು ಹಾಕಲಾಗುತ್ತಿದೆ.

ಈ ಕೃತ್ಯವನ್ನು ಬೈಕ್‌ ಸವಾರರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರೊಬ್ಬರ ವಾಹನ ಪದೇ ಪದೇ ಪಂಚ‌ರ್ ಆಗುತ್ತಿತ್ತು. ಇದರಿಂದ ಅನುಮಾನಗೊಂಡ ಅವರು ರಸ್ತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವಾಹನಗಳು ಹಾದುಹೋಗುವ ಜಾಗದಲ್ಲಿ ವ್ಯವಸ್ಥಿತವಾಗಿ ಚೂಪಾದ ಮೊಳೆಗಳನ್ನು ಹಾಕಲಾಗಿರುವುದು ಕಂಡುಬಂದಿದೆ.

ಇದು ಕೇವಲ ಹಣ ಮಾಡುವ ದಂಧೆಯಲ್ಲ, ಬದಲಿಗೆ ವೇಗವಾಗಿ ಚಲಿಸುವ ವಾಹನಗಳ ಅಪಘಾತಕ್ಕೂ ಕಾರಣವಾಗಬಲ್ಲ ಗಂಭೀರ ಅಪರಾಧವಾಗಿದೆ. ಈ ಹಿಂದೆ ಕೂಡ ರಾಜ್‌ ಕುಮಾರ್ ಸಮಾಧಿಯಿಂದ ಗೊರಗುಂಟೆಪಾಳ್ಯದವರೆಗೆ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಸವಾರರು ದೂರು ನೀಡಿದ್ದರೂ ಈ ಮಾಫಿಯಾ ಸಂಪೂರ್ಣವಾಗಿ ನಿಲ್ಲಿಸಲು ಆಗಿರಲಿಲ್ಲ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಸ್ತೆ ಬದಿಯ ಪಂಚರ್‌ ಅಂಗಡಿಗಳ ಮೇಲೆ ನಿಗಾವಹಿಸಿ, ಈ ಕೃತ್ಯದ ಹಿಂದಿರುವ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.

ಬೆಂಗಳೂರಿನ ಸವಾರರು ಮನೆಯಿಂದ ಹೊರಗೆ ಬಂದರೆ ಸುರಕ್ಷಿತವಾಗಿ ಮರಳಿ ಮನೆ ಸೇರುತ್ತೇವೆ. ಎಂಬ ಭರವಸೆ ಯಿಲ್ಲದಂತಾಗಿದೆ. ಪಂಚರ್ ಮಾಫಿಯಾದಂತಹ ಅಪರಾಧಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಬಿಬಿಎಂಪಿ ಹಾಗೂ ಸರ್ಕಾರ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ ಮೂಲಕ ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂಬುದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.

ದುರಸ್ತಿಯಾದ ಎರಡೇ ದಿನಕ್ಕೆ ಕುಸಿದ ರಸ್ತೆ: ಪಂಚ‌ರ್ ಮಾಫಿಯಾದ ಹಾವಳಿ ಒಂದೆಡೆಯಾದರೆ, ನಗರದ ರಸ್ತೆ ಗುಂಡಿಗಳು ಬೆಂಗಳೂರಿನ ಮರ್ಯಾದೆಯನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕುತ್ತಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಷ್ಟೇ ಗಡುವು ನೀಡಿದರೂ ಅಧಿಕಾರಿಗಳು ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.

ಚನ್ನಸಂದ್ರ ಸರ್ಕಲ್ ಬಳಿ ಸೆ.27ರಂದು ದುರಸ್ತಿ ಮಾಡಲಾಗಿದ್ದ ರಸ್ತೆಯು ಕೇವಲ 48 ಗಂಟೆಗಳಲ್ಲಿ ಕುಸಿದು ಬಿದ್ದಿದೆ. ವಾಹನ ಸವಾರರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದು, ಸರ್ಕಾರದ ಕಳಪೆ ಕಾಮಗಾರಿಯ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.

Previous articleಉತ್ತರ ಕರ್ನಾಟಕ ಪ್ರವಾಹದ ನೆರವಿಗೆ ಕೇಂದ್ರಕ್ಕೆ ಯತ್ನಾಳ್ ಮನವಿ
Next articleಆರ್‌ಎಸ್‌ಎಸ್ ಹಿರಿಯ ನಾಯಕ, ಮಾಜಿ ಪರಿಷತ್ ಸದಸ್ಯ ಪ್ರೊ. ಕೃ. ನರಹರಿ ನಿಧನ

LEAVE A REPLY

Please enter your comment!
Please enter your name here