ಬೆಂಗಳೂರು: ರಾಜಕೀಯ ಹಾಗೂ ಆಡಳಿತದ ಕೇಂದ್ರವಾಗಿರುವ ವಿಧಾನಸೌಧಕ್ಕೆ ಒಂದು ವಿಶೇಷ ವಾತಾವರಣ ಕಂಡುಬಂತು. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 70 ವಿದ್ಯಾರ್ಥಿಗಳು ಶಾಲಾ ಪ್ರವಾಸದ ಅಂಗವಾಗಿ ಬೆಂಗಳೂರಿನ ವಿಧಾನಸೌಧಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡುವ ಅವಕಾಶ ಪಡೆದರು.
ಮಕ್ಕಳೊಂದಿಗೆ ಹೃದಯಂಗಮ ಸಂವಾದ: ವಿಧಾನಸೌಧದಲ್ಲಿ ನಡೆದ ಅಪರೂಪದ ಸಂವಾದದಲ್ಲಿ, ಮಕ್ಕಳ ಕುತೂಹಲಭರಿತ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದರು. ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಸಚಿವರು ಅವರ ಶಿಸ್ತಿನ ವರ್ತನೆ, ನಡುಕದ ನಡುವೆಯೇ ವ್ಯಕ್ತಪಡಿಸಿದ ಉತ್ಸಾಹವನ್ನು ಮೆಚ್ಚಿಕೊಂಡರು.
ಸಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡ ಸಚಿವರು ಬರೆದಿದ್ದು: “ಮುದ್ದು ಮಕ್ಕಳೊಂದಿಗೆ ಸಂವಾದ ನಡೆಸಿದ್ದು ಅತ್ಯಂತ ಸಂತಸದ ಕ್ಷಣವಾಗಿತ್ತು. ಅವರ ಮುಖದಲ್ಲಿ ಕಂಡ ಉತ್ಸಾಹ ಮತ್ತು ಸಂಸ್ಕಾರ ನಿಜಕ್ಕೂ ಹೊಗಳತಕ್ಕದ್ದು.”
ಮಧ್ಯಾಹ್ನ ಬಿಸಿಯೂಟ ಹಾಗೂ ಪೋಷಕ ಆಹಾರ ಯೋಜನೆಗಳ ಬಗ್ಗೆ ಪ್ರತಿಕ್ರಿಯೆ: ಸಂವಾದದ ಸಂದರ್ಭದಲ್ಲಿ ಸಚಿವರು ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಾದ: ಮಧ್ಯಾಹ್ನದ ಬಿಸಿಯೂಟ. ಉಚಿತ ಕೆನೆಭರಿತ ಹಾಲು. ಮೊಟ್ಟೆ ವಿತರಣೆ. ಬಾಳೆಹಣ್ಣು ಪೂರೈಕೆ. ಇವುಗಳ ಬಗ್ಗೆ ಮಕ್ಕಳ ಅಭಿಪ್ರಾಯ ಕೇಳಿ ಸಂತೋಷ ವ್ಯಕ್ತಪಡಿಸಿದರು.
ಮಕ್ಕಳ ಪ್ರತಿಕ್ರಿಯೆ ಕೇಳಿ ಸಚಿವರು ಈ ಸೌಲಭ್ಯಗಳು ಮಕ್ಕಳ ಆರೋಗ್ಯ ಮತ್ತು ಕಲಿಕೆಯಲ್ಲಿ ಉತ್ತಮ ಪರಿಣಾಮ ನೀಡುತ್ತಿವೆ ಎಂಬುದನ್ನು ತಿಳಿದು ಸಂತೋಷವಾಯಿತು ಎಂದರು.
ಶಿಕ್ಷಣ ಗುಣಮಟ್ಟ – ಸರ್ಕಾರದ ಆದ್ಯತೆ: ಮಕ್ಕಳ ಭವಿಷ್ಯವೇ ದೇಶದ ಭವಿಷ್ಯ ಎಂದು ಹೇಳಿದ ಮಧು ಬಂಗಾರಪ್ಪ ಅವರು “ನಮ್ಮ ಸರ್ಕಾರದ ಧ್ಯೇಯವೇ ಮಕ್ಕಳಿಗೆ ಉತ್ತಮ ಶಿಕ್ಷಣ, ಉತ್ತಮ ಆಹಾರ ಹಾಗೂ ಉಜ್ವಲ ಭವಿಷ್ಯದ ದಾರಿ ತೆರೆದುಕೊಡುವುದು. ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯಗಳ ವಿಸ್ತರಣೆ ನಮ್ಮ ಪ್ರಮುಖ ಗುರಿಯಾಗಿದೆ ಎಂದರು.
ಮಕ್ಕಳಿಗೆ ಮಧು ಬಂಗಾರಪ್ಪ ಹಾರೈಕೆ: ಈ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಸಮಾಜಕ್ಕೆ ಕೊಡುಗೆ ನೀಡುವ ರೀತಿಯಲ್ಲಿ ಬೆಳೆವಂತೆ ಹಾರೈಸಿದರು. ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ರಾಜ್ಯದ ಮುಖ್ಯ ಆಡಳಿತ ಕೇಂದ್ರ ಭೇಟಿ ನೀಡಿದ್ದು, ಇದು ಅವರಿಗಾಗಿ ಮರೆಯಲಾಗದ ಅನುಭವವಾಯಿತು.

























