ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

0
55

ಬೆಂಗಳೂರು: ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಭಾರಿ ಹಿನ್ನಡೆ ಉಂಟಾಗಿದೆ. ಅವರ ವಿರುದ್ಧ ನೀಡಲಾಗಿದ್ದ ಸಮನ್ಸ್‌ನ್ನು ರದ್ದುಪಡಿಸುವಂತೆ ಸಲ್ಲಿಸಿದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಅಧ್ಯಕ್ಷತೆಯ ನ್ಯಾಯಪೀಠವು ವಿಚಾರಣೆ ನಡೆಸಿ, ವಿಚಾರಣಾ ನ್ಯಾಯಾಲಯದ ಸಮನ್ಸ್‌ ಆದೇಶವನ್ನು ರದ್ದುಪಡಿಸಲು ನಿರಾಕರಿಸಿದೆ. ಈ ಕ್ರಮದಿಂದಾಗಿ ಯಡಿಯೂರಪ್ಪ ವಿರುದ್ಧದ ಸಿಐಡಿ ತನಿಖೆ ಮುಂದುವರಿಯಲಿದೆ.

ವಿಚಾರಣಾ ಹಂತದಲ್ಲಿ ಯಡಿಯೂರಪ್ಪ ಅವರ ಅಗತ್ಯವಿಲ್ಲದಿದ್ದರೆ, ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸಬಾರದು. ವಿಚಾರಣಾಧೀನ ನ್ಯಾಯಾಲಯವು ಯಾವುದೇ ಪ್ರಭಾವಕ್ಕೊಳಗಾಗದೇ, ತನಗೆ ಲಭ್ಯವಾಗಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ತೀರ್ಮಾನ ಕೈಗೊಳ್ಳಬೇಕು.
ಹೈಕೋರ್ಟ್ ಅಥವಾ ಇತರ ನ್ಯಾಯಾಲಯಗಳಿಂದ ಬಂದಿರುವ ಆದೇಶಗಳ ಪ್ರಭಾವಕ್ಕೊಳಗಾಗದೇ, ವಿಚಾರಣಾ ನ್ಯಾಯಾಲಯವು ಸ್ವತಂತ್ರವಾಗಿ ಕ್ರಮ ಕೈಗೊಳ್ಳಬೇಕು. ಆರೋಪಮುಕ್ತಿ ಸೇರಿದಂತೆ ಯಾವುದೇ ಅರ್ಜಿಗಳನ್ನು ವಿಚಾರಣಾಧೀನ ನ್ಯಾಯಾಲಯದ ಮುಂದೆ ಯಡಿಯೂರಪ್ಪ ಅವರು ಸಲ್ಲಿಸಲು ಸ್ವತಂತ್ರರಾಗಿದ್ದಾರೆ.

ಯಡಿಯೂರಪ್ಪ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದರು. ಸಿಐಡಿ ತನಿಖಾಧಿಕಾರಿಗಳ ಪರವಾಗಿ ವಿಶೇಷ ಅಭಿಯೋಜಕರು ಪ್ರತಿವಾದ ಮಂಡಿಸಿದರು. ಎರಡೂ ಪಕ್ಷಗಳ ವಾದವನ್ನು ಆಲಿಸಿದ ಬಳಿಕ ಹೈಕೋರ್ಟ್ ತನ್ನ ತೀರ್ಪು ಪ್ರಕಟಿಸಿತು.

ಈ ನಿರ್ಣಯದೊಂದಿಗೆ, ಮಾಜಿ ಮುಖ್ಯಮಂತ್ರಿ ವಿರುದ್ಧದ ಪ್ರಕರಣದಲ್ಲಿ ಮುಂದಿನ ಹಂತದ ವಿಚಾರಣೆ ನಡೆಯಲಿದ್ದು, ಸಿಐಡಿ ತನಿಖೆ ಮುಂದುವರಿಯಲಿದೆ.

Previous articleದೇಶೀಯ ಸರಣಿಗಳಲ್ಲಿ ಆಡಲು ರೋಹಿತ್, ಕೊಹ್ಲಿಗೆ ಸೂಚನೆ
Next article‘ದಿ ಗರ್ಲ್‌ಫ್ರೆಂಡ್’ನಲ್ಲಿ ರಶ್ಮಿಕಾ ಅಭಿನಯ: ಅಂದದಷ್ಟೇ ಅದ್ಭುತ ಆಕೆಯ ಭಾವನಾತ್ಮಕ ನಟನೆ!

LEAVE A REPLY

Please enter your comment!
Please enter your name here